ಶನಿವಾರಸಂತೆ, ಆ. 14: ಸಮಾಜದಲ್ಲಿ ಸೈನಿಕ, ಕೃಷಿಕ, ಶಿಕ್ಷಕ, ಚಿಕಿತ್ಸಕ, ರಕ್ಷಕ ವಿಶೇಷ ವ್ಯಕ್ತಿಗಳಾಗಿದ್ದು, ದೇಶದ ಏಳಿಗೆಗಾಗಿ ದುಡಿದು ಗೌರವ ಕಾಪಾಡುತ್ತಾರೆ. ಪ್ರತಿ ನಾಗರಿಕರೂ ಈ ಐವರನ್ನು ಗೌರವಿಸಬೇಕು ಎಂದು ಕಿರಿಕೊಡ್ಲಿ ಮಠಾಧೀಶ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.

ಸಮೀಪದ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಚಿಕ್ಕಕುಂದ ಗ್ರಾಮದಲ್ಲಿ ಎಂ.ಸಿ.ಎಫ್.ಎಲ್. ಸಂಸ್ಥೆ ವತಿಯಿಂದ ನಡೆದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಯೋಧರನ್ನು ಸನ್ಮಾನಿಸುವ ‘ಜೈ ಜವಾನ್-ಜೈ ಕಿಸಾನ್’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಬಳಿಕ 15 ವರ್ಷಗಳಿಂದ ಕೃಷಿಯಲ್ಲಿ ತೊಡಗಿಸಿಕೊಂಡಿರುವ ನಿವೃತ್ತ ಯೋಧ ಹವಲ್ದಾರ್ ಸಿ.ಬಿ. ಪ್ರಸನ್ನ ಹಾಗೂ ನಿವೃತ್ತ ಬಿ.ಎಸ್.ಎಫ್. ಯೋಧ ಹವಲ್ದಾರ್ ಸಿ.ಸಿ. ಜಗರಾಮ್ ಅವರನ್ನು ಸನ್ಮಾನಿಸಿ, ಗೌರವಿಸಲಾಯಿತು.

ಸನ್ಮಾನಿತ ಹವಲ್ದಾರ್ ಸಿ.ಬಿ. ಪ್ರಸನ್ನ ಮಾತನಾಡಿ, ಚೈನಾ ಗಡಿ ಭಾರತದ ಅರುಣಾಚಲ ಪ್ರದೇಶ, ಪಾಕಿಸ್ತಾನ ಗಡಿ ಕಾರ್ಗಿಲ್ ಯುದ್ಧದಲ್ಲಿ ಭಾಗವಹಿಸಿದ್ದ ಬಗ್ಗೆ ಹಾಗೂ ಕಾಶ್ಮೀರದಲ್ಲಿ ಕರ್ತವ್ಯದಲ್ಲಿದ್ದಾಗಿನ ತಮ್ಮ ಅನುಭವ ತಿಳಿಸಿದರು.

ಎಂ.ಸಿ.ಎಫ್.ಎಲ್. ಸಂಸ್ಥೆಯ ಉಪ ವ್ಯವಸ್ಥಾಪಕ ಮೃತ್ಯುಂಜಯ್ ಮಾತನಾಡಿ, ಕಾರ್ಯಕ್ರಮದ ಉದ್ದೇಶವನ್ನು ತಿಳಿಸಿದರು. ಸಂಸ್ಥೆಯ ಸಿಬ್ಬಂದಿ ಹಾಗೂ ಗ್ರಾಮದ ಮುಖಂಡರು ಉಪಸ್ಥಿತರಿದ್ದರು.