‘ನಾನು ಜುಲೈ ತಿಂಗಳಿನಲ್ಲಿ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿದ್ದೆ. ಅದೇ ವೇಳೆಗೆ ಆರೋಗ್ಯ ಕಾರ್ಯಕರ್ತರು ಗ್ರಾಮಕ್ಕೆ ಬಂದು ಕೆಲವರ ಕೋವಿಡ್ ಪರೀಕ್ಷೆ ಮಾಡುತ್ತಿದ್ದರು. ನಾನು ಆರೋಗ್ಯವಂತನಾಗಿದ್ದು, ಯಾವುದೇ ರೋಗ ಲಕ್ಷಣಗಳು ನನ್ನಲ್ಲಿಲ್ಲದಿದ್ದರೂ ಕುತೂಹಲಕ್ಕಾಗಿ ಸ್ವಯಂ ಪ್ರೇರಿತನಾಗಿ ಪರೀಕ್ಷೆ ಮಾಡಿಸಿಕೊಂಡೆ. ನನ್ನ ಮಡದಿ ಕೂಡ ಪರೀಕ್ಷೆ ಮಾಡಿಸಿಕೊಂಡರು. ಫಲಿತಾಂಶ ಪಾಸಿಟಿವ್ ಎಂದು ತಿಳಿದಾಗ ಅಚ್ಚರಿಯೊಂದಿಗೆ ಗಾಬರಿಯಾಯಿತು. ಕ್ರಮೇಣ ಎಲ್ಲವೂ ಸರಿಹೋಯಿತು’.
ಹೀಗೆಂದವರು ಸೋಮವಾರಪೇಟೆ ಸಮೀಪದ ಬಳಗುಂದ ಗ್ರಾಮದ ನಿವಾಸಿ 47 ರ ಹರೆಯದ ಶ್ರೀಹರ್ಷ ಅವರು. ವೃತ್ತಿಯಲ್ಲಿ ವರ್ತಕರಾಗಿರುವ ಅವರು, ಜುಲೈ ತಿಂಗಳಿನಲ್ಲಿ ಕಾರ್ಯನಿಮಿತ್ತ ಬೆಂಗಳೂರಿಗೆ ಹೋಗಿ ಬಂದಿದ್ದರು. ಗ್ರಾಮಕ್ಕೆ ಆರೋಗ್ಯ ಕಾರ್ಯಕರ್ತರು ಆಗಮಿಸಿದ ಸಂದರ್ಭ ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವ ಕುತೂಹಲ ಮೂಡಿತು ಎಂದು ಹೇಳುವ ಅವರು, ತಮ್ಮ ಮಡದಿಯೊಂದಿಗೆ ತಾವು ಪರೀಕ್ಷೆ ಮಾಡಿಸಿಕೊಂಡುದಾಗಿ ಹೇಳಿದರು. ಇಬ್ಬರ ಫಲಿತಾಂಶ ಪಾಸಿಟಿವ್ ಬಂದಾಗ ಅಚ್ಚರಿಯೊಂದಿಗೆ ಗಾಬರಿ ಕೂಡ ಆಯಿತು ಎಂದ ಅವರು, ಮಡದಿಗೆ ಧೈರ್ಯ ಹೇಳಿದ್ದೇ ಅಲ್ಲದೆ ಇಬ್ಬರೂ ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಾದೆವು. ಒಂಭತ್ತು ದಿನಗಳ ಬಳಿಕ ಫಲಿತಾಂಶ ನೆಗೆಟಿವ್ ಬಂದಾಗ ಸಮಾಧಾನವಾಯಿತು ಎಂದ ಅವರು, ಆಸ್ಪತ್ರೆಯಲ್ಲಿ ಕಳೆದ 10 ದಿನಗಳ ಕಾಲ ವೈದ್ಯರು ಮತ್ತು ಸಿಬ್ಬಂದಿಗಳು ಬಹಳ ಚೆನ್ನಾಗಿ ನೋಡಿಕೊಂಡಿದ್ದಾರೆ ಎಂದರು.
ಹುಡುಗಾಟಕ್ಕಾಗಲಿ ಕುತೂಹಲಕ್ಕಾಗಿ ಆಗಲಿ ಆರೋಗ್ಯವಂತರಾರೂ ಕೋವಿಡ್ ಪರೀಕ್ಷೆಗೆ ಮುಂದಾಗಬೇಡಿ ಎಂದು ಜನರಿಗೆ ಕಿವಿಮಾತು ಹೇಳಿದ ಹರ್ಷ ಅವರು, ರೋಗ ಲಕ್ಷಣ ಕಂಡು ಬಂದಲ್ಲಿ ತಪ್ಪದೇ ಪರೀಕ್ಷೆ ಮಾಡಿಸಿಕೊಳ್ಳಿ, ಕಡ್ಡಾಯವಾಗಿ ಮಾಸ್ಕ್ ಧರಿಸುವ ಮೂಲಕ ಸಾಮಾಜಿಕ ಅಂತರವನ್ನು ಕಾಯ್ದುಕೊಂಡಲ್ಲಿ ಯಾರು ಹೆದರಬೇಕಾಗಿಲ್ಲ ಎಂದಿದ್ದಾರೆ.