ಮಡಿಕೇರಿ, ಆ. 13 : ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿಯಲ್ಲಿ ಭ್ರಷ್ಟಾಚಾರದ ಆರೋಪ ಎದುರಿಸುತ್ತಿರುವ ಪಿಡಿಒ ಅನಿಲ್‍ಕುಮಾರ್ ಅವರನ್ನು ಅಮಾನತಿನಲ್ಲಿಟ್ಟು ತನಿಖೆ ಮಾಡ ಬೇಕೆಂದು ಸಿಪಿಐಎಂ ಪಕ್ಷದ ನೆಲ್ಲಿಹುದಿಕೇರಿ ಶಾಖೆಯ ಪ್ರಮುಖ ಪಿ.ಆರ್. ಭರತ್ ಒತ್ತಾಯಿಸಿದ್ದಾರೆ.
ನೆಲ್ಲಿಹುದಿಕೇರಿಯಲ್ಲಿ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ತನ್ನ ಅಕ್ರಮಗಳನ್ನು ಮರೆ ಮಾಚುವ ಸಲುವಾಗಿ ಗ್ರಾಮ ಪಂಚಾಯಿತಿಗೆ ಸಂಬಂಧಿಸಿದ ಚೆಕ್ ಕಾಣೆಯಾಗಿರುವುದಾಗಿ ಪಿಡಿಒ ಅನಿಲ್ ಕುಮಾರ್, ಗ್ರಾಪಂ ಸಿಬ್ಬಂದಿ ವಿರುದ್ಧ ಸಿದ್ದಾಪುರ ಪೆÇಲೀಸ್ ಠಾಣೆಗೆ ದೂರು ನೀಡಿದ್ದಾರೆ ಎಂದರು.
ಗ್ರಾಪಂ ಖಾತೆಯಿಂದ 50ಸಾವಿರ ರೂ.ಗಳ ಚೆಕ್‍ವೊಂದನ್ನು ಸ್ವತಃ ಡ್ರಾ ಮಾಡಿರುವ ಪಿಡಿಒ ತನಗೆ ಇಷ್ಟ ಬಂದಂತೆ ಹಣ ಬಳಕೆ ಮಾಡುತ್ತಿದ್ದು, ಇವರಿಗೆ ಕೆಲವು ಮಾಜಿ ಸದಸ್ಯರ ಬೆಂಬಲ ಕೂಡಾ ಇದೆ ಎಂದು ಆರೋಪಿಸಿದ ಅವರು, ಹಾಗಾಗಿ ಅವರೆಲ್ಲರ ವಿರುದ್ಧವೂ ಸಮರ್ಪಕ ತನಿಖೆ ಆಗಬೇಕೆಂದು ಒತ್ತಾಯಿಸಿದರು. ಗ್ರಾಪಂ ಕಚೇರಿ ಒಳಗೆ ಕಾಂಗ್ರೆಸ್, ಎಸ್‍ಡಿಪಿಐ ಮತ್ತು ಬಿಜೆಪಿ ಸದಸ್ಯರು ಅತ್ಯಂತ ಸೌಹಾರ್ಧ ರೀತಿಯಲ್ಲಿದ್ದು, ತಮ್ಮ ಪಕ್ಷದ ಸಿದ್ಧಾಂತ ಮರೆತು ಅಕ್ರಮದಲ್ಲಿ ಭಾಗಿಯಾಗುತ್ತಿದ್ದಾರೆ ಎಂದು ಆರೋಪಿಸಿದರು. ಅಧ್ಯಕ್ಷರ ಅಧಿಕಾರ ಅವಧಿ ಮುಗಿದಿದ್ದರೂ ಅವರನ್ನು ಕಚೇರಿಗೆ ಕರೆಸಿ 3.5 ಲಕ್ಷ ರೂ. ಗಳ ಚೆಕ್‍ಗಳಿಗೆ ಸಹಿ ಮಾಡಿಸಿಕೊಂಡಿದ್ದಾರೆ. ಪಿಡಿಒ ನೆಲ್ಲಿಹುದಿಕೇರಿಯ ಯುವಕ ಸಂಘದೊಂದಿಗೆ ಸೇರಿ ನರೇಗಾ ಯೋಜನೆಯಡಿ ಕೆರೆ ಹೂಳೆತ್ತುವ ವಿಚಾರದಲ್ಲಿಯೂ ಅಕ್ರಮ ಎಸಗಿದ್ದಾರೆ ಎಂದು ಗಂಭೀರ ಆರೋಪ ಮಾಡಿದರು.
ಗ್ರಾ.ಪಂ.ಗೆ ಸಿಬ್ಬಂದಿ ನೇಮಕ ಮಾಡಬೇಕಾದರೆ ಅನುಸರಿಸಬೇಕಾದ ನಿಯಮಗಳನ್ನು ಗಾಳಿಗೆ ತೂರಿ ಇಲ್ಲದ ಹುದ್ದೆ ಸೃಷ್ಠಿ ಮಾಡಿ ಹತ್ತು ಸಾವಿರ ರೂ. ವೇತನ ನೀಡುತ್ತಿದ್ದಾರೆ. ಬರಡಿ ಅತ್ತಿಮಂಗಲ ರಸ್ತೆ ವಿಚಾರವಾಗಿ ನ್ಯಾಯಾಲಯಕ್ಕೆ ಯಾವುದೇ ದಾಖಲೆ ಒದಗಿಸದೆ ರಸ್ತೆ ಖಾಸಗಿ ವ್ಯಕ್ತಿ ಪಾಲಾಗಿದೆ ಎಂದರು. ಈ ಎಲ್ಲಾ ಅಕ್ರಮಗಳನ್ನು ಗ್ರಾಮಸ್ಥರಿಗೆ ತಿಳಿಸುವ ಸಲುವಾಗಿ ಮನೆಮನೆಗೆ ತಮಟೆ ಭಾರಿಸುವ ಮೂಲಕ ತೆರಳಿ ಪಕ್ಷ ವಿನೂತನ ಅಭಿಯಾನ ಹಮ್ಮಿ ಕೊಳ್ಳುವುದಾಗಿ ತಿಳಿಸಿದರು. ಗೋಷ್ಠಿಯಲ್ಲಿ ಪಕ್ಷದ ಮುಖಂಡ ಜೋಸ್ ಇದ್ದರು.