ಸೋಮವಾರಪೇಟೆ, ಆ. 12: ಕಳೆದ 2018ರಿಂದ ಸತತವಾಗಿ ತಾಲೂಕಿನ ಕಾಫಿ ಬೆಳೆಗಾರರು ಹಾಗೂ ಕೃಷಿಕರು ಅತಿವೃಷ್ಟಿಯಿಂದ ಬೆಳೆನಷ್ಟ ಅನುಭವಿಸುತ್ತಿದ್ದು, ಕಾಫಿ ಬೆಳೆಗಾರರ ಬದುಕು ದುಸ್ತರವಾಗಿದೆ. ಈ ಹಿನ್ನೆಲೆ ಬೆಳೆಗಾರರ ಸಾಲವನ್ನು ಮನ್ನಾ ಮಾಡಬೇಕೆಂದು ಸರ್ಕಾರವನ್ನು ಆಗ್ರಹಿಸಲು ತಾ.ಪಂ. ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಸೋಮವಾರಪೇಟೆ ತಾ.ಪಂ. ಸಭಾಂಗಣದಲ್ಲಿ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ನಡೆದ ಪ್ರಕೃತಿ ವಿಕೋಪ ಸಂಬಂಧ ವಿಶೇಷ ತುರ್ತು ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಂಡು ಸರ್ಕಾರಕ್ಕೆ ಸಲ್ಲಿಸಲು ತೀರ್ಮಾನಿಸಲಾಯಿತು.
ಕಳೆದ ಮೂರು ವರ್ಷಗಳಿಂದ ಕಾಫಿ ಬೆಳೆಗಾರರು ಹವಾಮಾನ ವೈಪರೀತ್ಯದಿಂದಾಗಿ ಬೆಳೆ ನಷ್ಟ ಅನುಭವಿಸುತ್ತಿದ್ದಾರೆ. ಕಾಫಿ ಫಸಲು ಈ ಬಾರಿಯೂ ನೆಲಕಚ್ಚಿದೆ. ಬೆಳೆಗಾರರು ಸಂಕಷ್ಟದಲ್ಲಿದ್ದು, ಸರಕಾರ ಬೆಳೆಗಾರರ ಸಂಪೂರ್ಣ ಸಾಲ ಮನ್ನಾ ಮಾಡಬೇಕಿದೆ ಎಂಬ ಅಭಿಪ್ರಾಯ ಸಭೆಯಲ್ಲಿ ವ್ಯಕ್ತಗೊಂಡಿತು.
ಹೆಚ್ಚು ಅನುದಾನ ತರಿಸಲು ಕ್ರಮ ಕೈಗೊಳ್ಳಿ: ಲೋಕೋಪಯೋಗಿ ಇಲಾಖೆಯ ಅಧಿಕಾರಿಗಳು ಖುದ್ದು ಸ್ಥಳ ಪರಿಶೀಲನೆ ನಡೆಸಿ, ಮಳೆಹಾನಿ ಸಂಬಂಧಿತ ಕಾಮಗಾರಿಗಳ ಪಟ್ಟಿಯನ್ನು ತಯಾರಿಸಬೇಕು ಎಂದು ಸದಸ್ಯ ಸತೀಶ್ ಅವರು ಅಭಿಯಂತರ ಮೋಹನ್‍ಕುಮಾರ್ ಅವರನ್ನು ಒತ್ತಾಯಿಸಿದರು. ಮಳೆಯಿಂದ ಹಾಳಾಗುವ ರಸ್ತೆಗಳನ್ನು ಮಳೆಹಾನಿ ಪಟ್ಟಿಗೆ ಸೇರಿಸಬೇಕು. ಇಲಾಖೆಯಿಂದ ತಾಲೂಕಿಗೆ ಹೆಚ್ಚಿನ ಅನುದಾನ ಬಿಡುಗಡೆಯಾಗುವಂತೆ ಮಾಡಬೇಕೆಂದು ತಾ.ಪಂ. ಉಪಾಧ್ಯಕ್ಷ ಅಭಿಮನ್ಯು ಕುಮಾರ್ ಸೂಚಿಸಿದರು.
ತಾ.ಪಂ. ಸದಸ್ಯರ ಕಡೆಗಣನೆ: ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗದಿಂದ ಮಳೆಹಾನಿ ಪಟ್ಟಿ ತಯಾರಿಸುವಾಗ ತಾಲೂಕು ಪಂಚಾಯಿತಿ ಸದಸ್ಯರನ್ನು ಕಡೆಗಣಿಸಲಾಗುತ್ತಿದೆ ಎಂದು ಸದಸ್ಯರು ಅಸಮಾಧಾನ ವ್ಯಕ್ತಪಡಿಸಿದರು. ಮಳೆಹಾನಿ ರಸ್ತೆಗಳ ಬಗ್ಗೆ ತಾ.ಪಂ ಸದಸ್ಯರಿಗೆ ಸಂಪೂರ್ಣ ಮಾಹಿತಿ ಇರುತ್ತದೆ. ಆದರೆ ಇಂಜಿನಿಯರ್‍ಗಳು ಹಾಗೂ ಗುತ್ತಿಗೆದಾರರು ಸೇರಿಕೊಂಡು ಕಾಮಗಾರಿಗಳ ಪಟ್ಟಿಗಳನ್ನು ತಯಾರಿಸುತ್ತಿದ್ದಾರೆ ಎಂದು ಉಪಾಧ್ಯಕ್ಷ ಎಂ.ಬಿ.ಅಭಿಮನ್ಯುಕುಮಾರ್, ಸದಸ್ಯರಾದ ಬಿ.ಬಿ.ಸತೀಶ್, ಧರ್ಮಪ್ಪ, ತಂಗಮ್ಮ ಅವರುಗಳು ಅಸಮಾಧಾನ ವ್ಯಕ್ತಪಡಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಅಭಿಯಂತರ ಕೀರ್ತನ್ ಈಗಾಗಲೇ ಹಾನಿ ಯಾಗಿರುವ ರಸ್ತೆಗಳನ್ನು ಪಟ್ಟಿ ಮಾಡಲಾಗಿದೆ. ಇದಕ್ಕೆ ಇನ್ನೂ ಅನುಮೋದನೆ ಸಿಕ್ಕಿಲ್ಲ. ಮುಂದುವರೆದು ಕಾಮಗಾರಿಗಳನ್ನು ಸೇರಿಸುವ ಅವಕಾಶವಿದೆ. ಒಟ್ಟು 211 ಕಿ.ಮೀ.ರಸ್ತೆ ಕಾಮಗಾರಿಗೆ ಅನುದಾನ ನೀಡುವಂತೆ ಜಿಲ್ಲಾಧಿಕಾರಿಗಳಿಗೆ ಕೋರಲಾಗಿದೆ ಎಂದು ಸಭೆಗೆ ತಿಳಿಸಿದರು.
ತಾ.ಪಂ. ಸದಸ್ಯರುಗಳು ನೀಡುವ ರಸ್ತೆ ಹಾನಿ ವಿವರಗಳನ್ನು ಪಟ್ಟಿಯಲ್ಲಿ ಸೇರಿಸುವಂತೆ ಕಾರ್ಯ ನಿರ್ವಹಣಾಧಿಕಾರಿ ಸುನಿಲ್ ಕುಮಾರ್ ಇಂಜಿನಿಯರ್‍ಗೆ ಸೂಚಿಸಿದರು.
ಲೋಕೋಪಯೋಗಿ ಇಲಾಖಾ ರಸ್ತೆಗಳ ಬದಿಗಳಲ್ಲಿ ಕುರುಚಲು ಗಿಡಗಳನ್ನು ತೆರವುಗೊಳಿಸುವ ಕಾರ್ಯ ಶೀಘ್ರ ಕೈಗೆತ್ತಿಕೊಳ್ಳುವಂತೆ ಅಭಿಯಂತರ ಮೋಹನ್‍ಕುಮಾರ್ ಅವರಿಗೆ ನಿರ್ದೇಶನ ನೀಡಲಾಯಿತು. ಹಾನಗಲ್‍ಶೆಟ್ಟಳ್ಳಿ-ಯಡೂರು ಮಾರ್ಗದ ರಸ್ತೆ ಕಾಮಗಾರಿ ನಡೆಸುವ ಸಂದರ್ಭ ಅಗತ್ಯ ಸ್ಥಳಗಳಲ್ಲಿ ತಡೆಗೋಡೆಗಳನ್ನು ನಿರ್ಮಿಸಬೇಕು ಎಂದು ಸದಸ್ಯೆ ತಂಗಮ್ಮ ಹೇಳಿದರು. ಮುಖ್ಯ ರಸ್ತೆ ನಿರ್ವಹಣೆ ಹಾಗೂ ಬದಿಯಲ್ಲಿನ ಕಾಡು ಕಡಿಸುವಂತೆ ಸದಸ್ಯ ಸತೀಶ್ ಹೇಳಿದರು.
ಶನಿವಾರಸಂತೆ ರಸ್ತೆ ಹಾಗೂ ಸೇತುವೆ, ದುಂಡಳ್ಳಿ ರಸ್ತೆ ದುರಸ್ತಿ ಕಾರ್ಯವನ್ನು ತಕ್ಷಣ ಕೈಗೆತ್ತಿಕೊಳ್ಳಬೇಕೆಂದು ಅಧ್ಯಕ್ಷೆ ಪುಷ್ಪಾ ರಾಜೇಶ್ ಅವರು ಅಭಿಯಂತರರಿಗೆ ಸೂಚಿಸಿದರು. ಶಾಂತಳ್ಳಿ ರಸ್ತೆಯಲ್ಲಿ ಒಂದು ಬದಿ ಕುಸಿತದ ಆತಂಕ ಎದುರಾಗಿದ್ದು, ತಡೆಗೋಡೆ ನಿರ್ಮಿಸುವಂತೆ ಸದಸ್ಯ ಧರ್ಮಪ್ಪ ಒತ್ತಾಯಿಸಿದರು. ತಡೆಗೋಡೆ ಕಾಮಗಾರಿಗೆ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಇಂಜಿನಿಯರ್ ಮೋಹನ್‍ಕುಮಾರ್ ಹೇಳಿದರು.
ತೋಟಗಾರಿಕಾ ಅಧಿಕಾರಿ ವಿರುದ್ಧ ಆರೋಪ: ತೋಟಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರು, ಜನಪ್ರತಿನಿಧಿಗಳ ಸಲಹೆಗಳನ್ನು ಗಣನೆಗೆ ತೆಗೆದುಕೊಳ್ಳುತ್ತಿಲ್ಲ. ವಿಶೇಷ ಸಭೆಗೂ ಆಗಮಿಸಿಲ್ಲ. ತಮ್ಮ ಇಲಾಖಾ ಸಿಬ್ಬಂದಿಗಳೊಂದಿಗೂ ದರ್ಪದಿಂದ ವರ್ತಿಸುತ್ತಿರುವ ಬಗ್ಗೆ ದೂರುಗಳು ಬಂದಿದ್ದು, ಜನಪ್ರತಿನಿಧಿಗಳ ಬಗ್ಗೆಯೂ ತಾತ್ಸಾರ ತೋರುತ್ತಿದ್ದಾರೆ. ಇದು ಹೀಗೆಯೇ ಮುಂದುವರೆದರೆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸದಸ್ಯರಾದ ತಂಗಮ್ಮ, ಸಬಿತಾ ಚನ್ನಕೇಶವ ಸೇರಿದಂತೆ ಇತರರು ದೂರಿದರು. ಈ ಬಗ್ಗೆ ಶಾಸಕರಿಗೆ ದೂರು ನೀಡಲಾಗುವದು ಎಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್ ಹೇಳಿದರು.
2 ದಿನದಲ್ಲಿ ಸಮಸ್ಯೆ ಇತ್ಯರ್ಥ: ಮಳೆಯಿಂದ ಹಾನಿಯಾಗಿದ್ದ ವಿದ್ಯುತ್ ಮಾರ್ಗದ ದುರಸ್ತಿ ಕಾರ್ಯ ಶೇ. 85ರಷ್ಟು ಪೂರ್ಣಗೊಂಡಿದೆ. ಇನ್ನೆರಡು ದಿನಗಳಲ್ಲಿ ಸಂಪೂರ್ಣವಾಗಿ ಸಮಸ್ಯೆ ಬಗೆಹರಿಯಲಿದೆ. ಹಾಸನ, ಮೈಸೂರಿನಿಂದಲೂ ಸಿಬ್ಬಂದಿಗಳು ಬಂದಿದ್ದಾರೆ ಎಂದು ಎಇಇ ಧನಂಜಯ್ ಸಭೆಗೆ ತಿಳಿಸಿದರು.
ಶನಿವಾರಸಂತೆ ಆಸ್ಪತ್ರೆಯ ಸಮೀಪ ಟ್ರಾನ್ಸ್‍ಫಾರ್ಮರ್ ಕಂಬ ಬೀಳುವ ಹಂತದಲ್ಲಿದ್ದು, ಸರಿಪಡಿಸುವಂತೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಹೇಳಿದರು. ಮರಗಳನ್ನು ತೆರವುಗೊಳಿಸುವ ಸಂದರ್ಭ ಸೆಸ್ಕ್ ಇಲಾಖೆಯೊಂದಿಗೆ ಅರಣ್ಯ ಇಲಾಖಾ ಸಿಬ್ಬಂದಿಗಳೂ ಕೈಜೋಡಿಸಬೇಕೆಂದು ಉಪಾಧ್ಯಕ್ಷ ಅಭಿಮನ್ಯುಕುಮಾರ್ ಸೂಚಿಸಿದರು.
ಗ್ರಾ.ಪಂ.ಗಳಿಗೆ ಆಡಳಿತಾಧಿಕಾರಿ ಗಳನ್ನು ನೇಮಿಸಲಾಗಿದ್ದು, ಸ್ಥಳೀಯ ತಾ.ಪಂ. ಹಾಗೂ ಜಿ.ಪಂ. ಸದಸ್ಯರಿಂದಲೂ ಸಲಹೆಗಳನ್ನು ಪಡೆಯಬೇಕು. ಅಭಿವೃದ್ಧಿ ಕಾರ್ಯಗಳ ಬಗ್ಗೆ ಜನಪ್ರತಿನಿಧಿಗಳೊಂದಿಗೆ ಚರ್ಚಿಸುವಂತಾಗಬೇಕೆಂದು ಸಭೆಯಲ್ಲಿ ತೀರ್ಮಾನಿಸಲಾಯಿತು. ಈ ಬಗ್ಗೆ ಕ್ರಮ ವಹಿಸಲು ತಾ.ಪಂ. ಕಾರ್ಯ ನಿರ್ವಹಣಾಧಿಕಾರಿಗೆ ಸೂಚಿಸಲಾಯಿತು.
ಕೋವಿಡ್ ಕೇರ್ ಸೆಂಟರ್: ಕೋವಿಡ್ ಸಂಬಂಧ ಈಗಾಗಲೇ ಕೂಡಿಗೆಯಲ್ಲಿ ಕೋವಿಡ್ ಕೇರ್ ಸೆಂಟರ್ ಸ್ಥಾಪಿಸಲಾಗಿದೆ. ಪ್ರಕರಣಗಳು ಹೆಚ್ಚಾದರೆ ಆಲೂರುಸಿದ್ದಾಪುರ ಹಾಗೂ ಕೊಡ್ಲಿಪೇಟೆಯ ವಸತಿ ಶಾಲೆಗಳನ್ನು ಬಳಸಿಕೊಳ್ಳಲಾಗುವದು. 10 ವರ್ಷಕ್ಕಿಂತ ಕಡಿಮೆ ಹಾಗೂ 60 ವರ್ಷಕ್ಕಿಂತ ಮೇಲ್ಪಟ್ಟವರನ್ನು ಮಡಿಕೇರಿಯ ಕೋವಿಡ್ ಆಸ್ಪತ್ರೆಗೆ ದಾಖಲಿಸ ಲಾಗುವದು ಎಂದು ತಹಶೀಲ್ದಾರ್ ಗೋವಿಂದರಾಜು ತಿಳಿಸಿದರು.
ಸೌಲಭ್ಯಕ್ಕೆ ಸೂಚನೆಯಿಲ್ಲ: ಸೀಲ್‍ಡೌನ್ ಪ್ರದೇಶದಲ್ಲಿರುವ ಮಂದಿಗೆ ಸರ್ಕಾರದಿಂದ ಯಾವದೇ ಪರಿಹಾರ ಲಭಿಸುತ್ತಿಲ್ಲ. ದಿನಬಳಕೆಯ ವಸ್ತುಗಳಿಗೂ ಪರಿತಪಿಸುವಂತಾಗಿದೆ ಎಂದು ಸದಸ್ಯರುಗಳು, ತಹಶೀಲ್ದಾರ್ ಗಮನ ಸೆಳೆದರು. ಸರ್ಕಾರದಿಂದ ಸೀಲ್‍ಡೌನ್ ಪ್ರದೇಶದ ಮಂದಿಗೆ ವಿಶೇಷ ಸೌಲಭ್ಯ ಕಲ್ಪಿಸುವ ಬಗ್ಗೆ ಯಾವದೇ ಸೂಚನೆಗಳು ಬಂದಿಲ್ಲ. ಸರ್ಕಾರದಿಂದ ಸೂಚನೆ ಬಂದರೆ ಕ್ರಮವಹಿಸಲಾಗುವದು ಎಂದು ತಹಶೀಲ್ದಾರ್ ಹೇಳಿದರು.
ವೇದಿಕೆಯಲ್ಲಿ ಸಾಮಾಜಿಕ ನ್ಯಾಯ ಸಮಿತಿ ಅಧ್ಯಕ್ಷ ಎಂ.ಕೆ. ವಿಜು ಚಂಗಪ್ಪ, ಕಾರ್ಯನಿರ್ವಹಣಾಧಿಕಾರಿ ಸುನಿಲ್‍ಕುಮಾರ್ ಉಪಸ್ಥಿತರಿದ್ದರು. ಸಭೆಯಲ್ಲಿ ವಿವಿಧ ಇಲಾಖಾಧಿಕಾರಿಗಳು ಭಾಗವಹಿಸಿದ್ದರು.