*ಗೋಣಿಕೊಪ್ಪಲು, ಆ. 12 : ವಿಶ್ವ ಆನೆ ದಿನಾಚರಣೆಯನ್ನು ನಾಗರಹೊಳೆ ವನ್ಯಜೀವಿ ವಿಭಾಗದ ಮತ್ತಿಗೋಡು ಸಾಕಾನೆ ಶಿಬಿರದಲ್ಲಿ ಸಡಗರದಿಂದ ಆಚರಿಸಲಾಯಿತು.

ಆನೆಗಳ ಮಾವುತರು ಹಾಗೂ ಕಾವಾಡಿಗಳು ಬೆಳಗಿನಿಂದಲೇ ತಮ್ಮ ಕುಟುಂಬಸ್ಥರೊಡಗೂಡಿ ಇಡೀ ಶಿಬಿರವನ್ನು ಸ್ವಚ್ಛಗೊಳಿಸಿದರು. ಬಳಿಕ ಶಿಬಿರದ 18 ಆನೆಗಳ ಮೈ ತೊಳೆದು ಅವುಗಳಿಗೆ ಸುಂದರವಾಗಿ ಬಣ್ಣ ಹಚ್ಚಿ ಅಲಂಕರಿಸಿದರು. ಕೊರಳಿಗೆ ಹೂ ಮಾಲೆ ಹಾಕಿ ಶೃಂಗರಿಸಿದರು. ಬಳಿಕ ಆನೆಗಳಿಗೆ ಆಹಾರ ನೀಡಿ ತಾವೂ ಊಟಮಾಡಿ ಆನಂದಿಸಿದರು. ಶಿಬಿರದ ತುಂಬ ಮಾವುತರ ಮತ್ತು ಕಾವಾಡಿಗಳ ಕುಟುಂಬದ ಸದಸ್ಯರು ಸಂಭ್ರಮದಿಂದ ಓಡಾಡಿಕೊಂಡಿದ್ದರು.

ಶಿಬಿರಕ್ಕೆ ಆಗಮಿಸಿದ ನಾಗರಹೊಳೆ ಹುಲಿ ಸಂರಕ್ಷಿತಾ ಪ್ರದೇಶದ ಉಪಅರಣ್ಯ ಸಂಕ್ಷಣಾಧಿಕಾರಿ ಹಾಗೂ ನಿರ್ದೇಶಕ ಡಿ.ಮಹೇಶ್ ಕುಮಾರ್ ಆನೆಗಳನ್ನು ಆರೋಗ್ಯಕರವಾಗಿ ನೋಡಿ ಕೊಳ್ಳುತ್ತಿರುವ ಮಾವುತರು ಮತ್ತು ಕಾವಾಡಿಗಳನ್ನು ಬಹುಮಾನ ನೀಡಿ ಸನ್ಮಾನಿಸಿದರು.

ಕಾಡಿನಲ್ಲಿದ್ದು, ಮನುಷ್ಯರ ಮೇಲೆ ಧಾಳಿ ಮಾಡುತ್ತಿದ್ದ ಆನೆಗಳನ್ನು ಹಿಡಿದು ಕಡಿಮೆ ಅವಧಿಯಲ್ಲಿ ಪಳಗಿಸಿದ ಗಣೇಶ್ ಆನೆ ಮಾವುತ ಹಾಗೂ ಕಾವಾಡಿಗೆ ಪ್ರಥಮ ಬಹುಮಾನ, ಮಹೇಂದ್ರ ಆನೆಯ ಕಾವಾಡಿ ಮತ್ತು ಮಾವುತರಿಗೆ ದ್ವಿತೀಯ ಬಹುಮಾನ, ಶ್ರೀಕಂಠ ಆನೆಯ ಮಾವುತ ಮತ್ತು ಕಾವಾಡಿಗೆ ತೃತೀಯ ಬಹುಮಾನ ನೀಡಿದರು.

ಉಳಿದ ಆನೆಗಳ ಮಾವುತರು ಮತ್ತು ಕಾವಾಡಿಗಳನ್ನು ಹೂ ಗುಚ್ಚ ನೀಡುವ ಮೂಲಕ ಅಭಿನಂದಿಸಿದರು.

ಬಳಿಕ ಮಾತನಾಡಿದ ಅವರು ಮಾತು ಬಾರದ ಬಲಶಾಲಿಯಾದ ಆನೆಗಳನ್ನು ಪಳಗಿಸುವುದು ಕಷ್ಟದಾಯಕವಾದುದು. ಇಂತಹ ಕೆಲಸವನ್ನು ಸುಸೂತ್ರವಾಗಿ ನಿರ್ವಹಿಸುವ ಮಾವುತರ ಕೆಲಸ ಅತ್ಯಂತ ಕ್ಲಿಷ್ಟಕರವಾದುದು. ಆನೆ ಒಗ್ಗಿಬಿಟ್ಟಿದೆ ಎಂದು ಯಾವುದೇ ಸಂದರ್ಭದಲ್ಲಿಯೂ ಮೈ ಮರೆಯಬಾರದು, ಅತ್ಯಂತ ಎಚ್ಚರಿಕೆಯಿಂದ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎ.ವಿ.ಸತೀಶ್, ಮತ್ತಿಗೋಡು ಶಿಬಿರದ ವಲಯ ಅರಣ್ಯಾಧಿಕಾರಿ ವೈ.ಕೆ.ಕಿರಣ್ ಕುಮಾರ್, ಪಶುವೈದ್ಯಾಧಿಕಾರಿಗಳಾದ ಮುಜೀಬುರ್ ರೆಹಮಾನ್, ಭವಿಷ್ಯಕುಮಾರ್ ಹಾಜರಿದ್ದರು.

-ಎನ್.ಎನ್. ದಿನೇಶ್