ಮಡಿಕೇರಿ, ಆ. 12: ತಾಯಿ ಕಾವೇರಿಯ ವಂಶ ಪಾರಂಪರ್ಯ ಅರ್ಚಕರಾದ ಹಿರಿಯ, ವಿವಿಧ ಸಂಘಟನೆಯ ಮುಖಂಡ ಹಾಗೂ ಬ್ರಾಹ್ಮಣ ಸಮುದಾಯದ ಹಿರಿಯರಾಗಿದ್ದ ದಿ|| ಶ್ರೀ ಟಿ.ಎಸ್ ನಾರಾಯಣಾಚಾರ್ ಅವರ ಬಗ್ಗೆ ಖಾಸಗಿ ದೂರದರ್ಶನ ಮಾಧ್ಯಮಗಳಲ್ಲಿ ಆಕ್ಷೇಪಾರ್ಹ ವಿಷಯಗಳನ್ನು ಪ್ರಸಾರ ಮಾಡುತ್ತಿರುವುದು ಕಂಡುಬಂದಿರುತ್ತದೆ.
ಅವರ ವೈಯಕ್ತಿಕ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲಿಸದೆ ಅವರ ಬಗ್ಗೆ ಇಲ್ಲ ಸಲ್ಲದ ಆರೋಪ ಮಾಡುತ್ತಿರುವುದು ಖಂಡನೀಯ. ಪ್ರಕೃತಿ ವಿಕೋಪದಂತಹ ಕಠಿಣ ಸಮಯದಲ್ಲಿ ಜನರಿಗೆ ಧೈರ್ಯ ತುಂಬಬೇಕಾದ ಪರಿಸ್ಥಿತಿಯಲ್ಲಿ, ಕೆಲ ಮಾಧ್ಯಮ ಮಿತ್ರರು ವೈಯಕ್ತಿಕ ತೇಜೋವಧೆ ಮಾಡುತ್ತಿರುವುದನ್ನು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿ, ಕೊಡಗು ಹಾಗೂ ಕೊಡಗು ಜಿಲ್ಲಾ ಬ್ರಾಹ್ಮಣ ಸಂಘಗಳ ಒಕ್ಕೂಟ ತೀವ್ರವಾಗಿ ಖಂಡಿಸುತ್ತದೆ.
ಇಡೀ ಬ್ರಾಹ್ಮಣ ಸಮಾಜ ದಿ|| ಶ್ರೀ ಟಿ.ಎಸ್ ನಾರಾಯಣಾಚಾರ್ ಮತ್ತು ಇತರರ ಕುಟುಂಬದ ಬೆಂಬಲಕ್ಕೆ ಇದ್ದೇವೆ ಎಂದು ಈ ಮೂಲಕ ತಿಳಿಯಪಡಿಸುತ್ತೇನೆ. ಬ್ರಾಹ್ಮಣ ಸಮಾಜದ ಬಗ್ಗೆ ಮತ್ತು ಯಾವುದೇ ಬ್ರಾಹ್ಮಣರ ಬಗ್ಗೆ ಇಲ್ಲ ಸಲ್ಲದ ಆಕ್ಷೇಪಾರ್ಹ, ಅವಹೇಳನಕಾರಿ ಪ್ರಸಾರದ ಬಗ್ಗೆ ಆಕ್ಷೇಪಣೆಯನ್ನು ಈ ಮೂಲಕ ಸಲ್ಲಿಸುತ್ತಿದ್ದೇವೆ ಎಂದು ನಿಧಿಯ ಅಧ್ಯಕ್ಷ ಎ. ಗೋಪಾಲಕೃಷ್ಣ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.