ಸೋಮವಾರಪೇಟೆ, ಆ. 13: ಸಮೀಪದ ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಗೆ ಒಳಪಡುವ ಕಕ್ಕೆಹೊಳೆ ಜಂಕ್ಷನ್ ಸಮೀಪದಲ್ಲಿ ತಡೆಗೋಡೆ ಕುಸಿದಿದ್ದು, ವಾಸದ ಮನೆಗೆ ಅಪಾಯ ತಂದೊಡ್ಡಿದೆ.
ಸ್ಥಳೀಯ ನಿವಾಸಿ ವಿನ್ಸೆಂಟ್ ಎಂಬವರು ತಮಗೆ ಸೇರಿದ ಮನೆಗೆ ನಿರ್ಮಿಸಿ ಕೊಂಡಿದ್ದ ತಡೆಗೋಡೆ ಮಳೆಗೆ ಕುಸಿದುಬಿದ್ದಿದ್ದು, ಶೌಚಾಲಯ ಸಂಪೂರ್ಣ ಹಾನಿಯಾಗಿದೆ. ಪಟ್ಟಣದ ತ್ಯಾಜ್ಯ ನೀರು ಕಕ್ಕೆಹೊಳೆಗೆ ಸೇರುವ ಸ್ಥಳದಲ್ಲಿ ಚೌಡ್ಲು ಗ್ರಾಮ ಪಂಚಾಯಿತಿ ವತಿಯಿಂದ ಜೆಸಿಬಿಯಿಂದ ಹೊಳೆಯ ಹೂಳು ತೆಗೆದಿದ್ದರ ಪರಿಣಾಮ, ಇದೀಗ ತಡೆಗೋಡೆ ಕುಸಿದು ಮನೆಗೆ ಅಪಾಯ ತಂದೊಡ್ಡಿದೆ ಎಂದು ವಿನ್ಸೆಂಟ್ ಅವರು ಆರೋಪಿಸಿದ್ದಾರೆ.
ಚೌಡ್ಲು ಗ್ರಾಮ ಪಂಚಾಯಿತಿಯಿಂದ ಕೊಲ್ಲಿಯನ್ನು ಅವೈಜ್ಞಾನಿಕವಾಗಿ ಅಗಲೀಕರಣ ಮಾಡಿದ್ದರಿಂದ, ತಡೆಗೋಡೆಗೆ ಹಾನಿಯಾಗಿದೆ. ಈಗಾಗಲೇ 40 ಅಡಿಗಳಷ್ಟು ತಡೆಗೋಡೆ ಕುಸಿದಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಮಳೆಯಾಗಿ ಕೊಲ್ಲಿಯಲ್ಲಿ ನೀರಿನ ಹರಿವು ಅಧಿಕಗೊಂಡರೆ ವಾಸದ ಮನೆಗೆ ಹಾನಿಯಾಗಲಿದೆ. ಈ ಹಿನ್ನೆಲೆ ಸರ್ಕಾರದಿಂದ ಅಗತ್ಯ ಕ್ರಮಕೈಗೊಳ್ಳಬೇಕು. ತಡೆಗೋಡೆ ಕುಸಿದಿರುವದಕ್ಕೆ ಪರಿಹಾರ ನೀಡಬೇಕೆಂದು ವಿನ್ಸೆಂಟ್ ಅವರು ಜಿಲ್ಲಾಧಿಕಾರಿ, ತಾಲೂಕು ತಹಸೀಲ್ದಾರ್, ಚೌಡ್ಲು ಗ್ರಾ.ಪಂ.ಗೆ ಮನವಿ ಸಲ್ಲಿಸಿದ್ದಾರೆ.