ತಲಕಾವೇರಿಯಲ್ಲಿ ತಾ. 6 ರಂದು ಭಯಾನಕ ದುರಂತ ಸಂಭವಿಸಿರುವ ಬೆನ್ನಲ್ಲೇ, ಕ್ಷೇತ್ರದ ಪ್ರಧಾನ ಅರ್ಚಕರಾಗಿದ್ದ ಟಿ.ಎಸ್. ನಾರಾಯಣಾಚಾರ್ ಅವರ ವಾಹನ ಚಾಲಕ ಜಯಂತ್ ಮೂಲಕ ವಿಷಯ ತಿಳಿಯುವದರೊಂದಿಗೆ, ಕೂಡಲೇ ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ಅಧೀಕ್ಷಕರ ಗಮನ ಸೆಳೆದು ನಿರಂತರ ಪರಿಶ್ರಮ ವಹಿಸಿರುವ ಅಧಿಕಾರಿಗಳ ಬಗ್ಗೆ ಗ್ರಾಮಸ್ಥರು ಶ್ಲಾಘನೀಯ ನುಡಿಯಾಡಿದ್ದಾರೆ.
ಮುಖ್ಯವಾಗಿ ಭಾಗಮಂಡಲ ಪೊಲೀಸ್ ಠಾಣಾಧಿಕಾರಿ ಹೆಚ್. ಮಹದೇವ್ ಅವರು, ಸಿಬ್ಬಂದಿಯೊಂದಿಗೆ ದುರಂತದ ಬೆನ್ನಲ್ಲೇ ಠಾಣಾ ಸಿಬ್ಬಂದಿಯನ್ನು ಬಳಸಿಕೊಂಡು, ತಲಕಾವೇರಿಗೆ ರಸ್ತೆ ಸಂಪರ್ಕ ಕಡಿತಗೊಂಡಿದ್ದರೂ, ಸಂಗಮ ಕ್ಷೇತ್ರದ ಜಲಪ್ರವಾಹವನ್ನು ದೋಣಿ ಮುಖಾಂತರ ಕ್ರಮಿಸಿದ್ದಾರೆ. ಬಳಿಕ ಆರೆಂಟು ಕಿ.ಮೀ. ಕಾಡು ಮೇಡುಗಳಲ್ಲಿ ಕಾಲ್ನಡಿಗೆ ಮೂಲಕ ಕ್ರಮಿಸಿ ದುರಂತವನ್ನು ಖಚಿತಪಡಿಸಿಕೊಂಡು ಮೇಲಧಿಕಾರಿಗಳಿಗೆ ಸಂದೇಶ ರವಾನಿಸಿದ್ದಾರೆ.
ಆ ಬೆನ್ನಲ್ಲೇ ತಹಶೀಲ್ದಾರ್ ಪಿ.ಎಸ್. ಮಹೇಶ್, ಡಿವೈಎಸ್ಪಿ ಬಿ.ಪಿ. ದಿನೇಶ್ಕುಮಾರ್ ಧಾವಿಸಿ, ಗ್ರಾಮಸ್ಥರ ಸಹಕಾರದಿಂದ ದುರಂತ ಸ್ಥಳಕ್ಕೆ ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಜನಪ್ರತಿನಿಧಿಗಳು, ಅಧಿಕಾರಿಗಳು ತಲಪುವಲ್ಲಿ ಶ್ರಮ ವಹಿಸಿರುವದು ಮರೆಯಲಾಗದು ಎಂದು ನೆನಪಿಸಿದ್ದಾರೆ. ಗ್ರಾ.ಪಂ. ಅಧಿಕಾರಿ ಮತ್ತು ಸಿಬ್ಬಂದಿ, ಆರೋಗ್ಯ ಕಾರ್ಯಕರ್ತರು, ಕಂದಾಯ ಸಿಬ್ಬಂದಿ ನಿರಂತರ ಶ್ರಮವಹಿಸುತ್ತಿರುವದಾಗಿ ಬೊಟ್ಟು ಮಾಡಿದ್ದಾರೆ.
ಅಲ್ಲದೆ ಭಾಗಮಂಡಲದ ಗುತ್ತಿಗೆದಾರ ಯತೀಶ್ ಹಾಗೂ ಜೆಸಿಬಿ ಮಾಲೀಕ ಮನೋಹರ್, ಲೋಕೋಪಯೋಗಿ ಅಭಿಯಂತರರ ಸಲಹೆಯಂತೆ ಭೂಕುಸಿತದಿಂದ ತೊಡಕಾಗಿದ್ದ ರಸ್ತೆ ಸಂಪರ್ಕ ತೆರವಿಗೆ ಮುಂದಾಗಿದ್ದರಿಂದ ಕಣ್ಮರೆಯಾಗಿದ್ದವರ ಶೋಧ ಕಾರ್ಯಕ್ಕೆ ಅನುಕೂಲವಾಗಿದೆ ಎಂದು ಅಲ್ಲಿನ ಪ್ರಮುಖರಾದ ಕುದುಕುಳಿ ಭರತ್, ಕಾಳನ ರವಿ, ಸೂರ್ತಲೆ ಕಾಶಿ, ಡಾಲಿ ಮೊದಲಾದವರು ಪ್ರಶಂಸಿಸಿದ್ದಾರೆ.
ಶವ ಪತ್ತೆಗೂ ಸಾಥ್ : ಅಲ್ಲದೆ ಎನ್ಡಿಆರ್ಎಫ್ ಸೇರಿದಂತೆ ಕಣ್ಮರೆಯಾದವರ ಶೋಧ ಕಾರ್ಯಕ್ಕೆ ಜೆಸಿಬಿ ಮತ್ತು ಹಿಟಾಚಿ ಯಂತ್ರಗಳೊಂದಿಗೆ ಅಲ್ಲಿನ ಸ್ಥಳೀಯ ಯುವಕರು ಸಾಥ್ ನೀಡಿರುವದಾಗಿ ಭಾಗಮಂಡಲ ಹಾಗೂ ತಲಕಾವೇರಿಯ ನಾಗರಿಕರು ಅಭಿಪ್ರಾಯ ಹಂಚಿಕೊಂಡಿದ್ದಾರೆ.