ಕೂಡಿಗೆ, ಆ. 13: ಕುಶಾಲನಗರದಲ್ಲಿರುವ ಚೆಸ್ಕಾಂ ವಿದ್ಯುತ್ ಶಾಖಾ ಕಚೇರಿಯನ್ನು ಕೂಡಿಗೆ ವೃತ್ತದಲ್ಲಿ ಆರಂಭ ಮಾಡಬೇಕು ಎಂದು ಕುಶಾಲನಗರ ಹೋಬಳಿ ವ್ಯಾಪ್ತಿಯ ಆರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಕುಶಾಲನಗರ ಹೋಬಳಿ ವ್ಯಾಪ್ತಿಯ ಕೂಡಿಗೆ, ಕೂಡುಮಂಗಳೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ ಗ್ರಾಮ ಪಂಚಾಯಿತಿಯ 32 ಉಪ ಗ್ರಾಮಗಳಿಗೆ ಅನುಕೂಲವಾಗುವಂತೆ ಈ ವ್ಯಾಪ್ತಿಯಲ್ಲಿ 20ಕ್ಕೂ ಹೆಚ್ಚು ಕೈಗಾರಿಕಾ ಘಟಕಗಳು ಇರುವುದರಿಂದ ವಿದ್ಯುತ್ ಸಮಸ್ಯೆಗಳನ್ನು ಬಗೆಹರಿಸಲು ಶಾಖಾಧಿಕಾರಿಗಳ Pಚೇರಿಯನ್ನು ತೆರೆದು ಶಾಖಾಧಿಕಾರಿಗಳ ನೇಮಕಗೊಳಿಸಿದಲ್ಲಿ ಅನುಕೂಲವಾಗಲಿದೆ.

ಕೂಡಿಗೆಯಲ್ಲಿ ವೃತ್ತ ಕಚೇರಿಯನ್ನು ಪ್ರಾರಂಭ ಮಾಡಬೇಕು ಎಂದು ಸಾರ್ವಜನಿಕರ ಆಗ್ರಹವಾಗಿದೆ. ಕಚೇರಿಯನ್ನು ಈ ಭಾಗದಲ್ಲಿ ತೆರೆಯುವುದರಿಂದ ಕೊಡಗಿನ ಗಡಿಭಾಗ ಶಿರಂಗಾಲ ಮತ್ತು ಸಿದ್ಧಲಿಂಗಪುರ, ಅಳುವಾರ, ಸೀಗೆಹೂಸೂರು, ಹುದುಗೂರು ಗ್ರಾಮಾಂತರ ಪ್ರದೇಶಗಳಲ್ಲಿ ಕಂಬಗಳ ನಿರ್ವಹಣೆ ಮತ್ತು ಮಾರ್ಗ ಸರಿಪಡಿಸುವಿಕೆ ಮತ್ತು ಅದೇ ರೀತಿಯಲ್ಲಿ ವಿದ್ಯುತ್ ತೆರಿಗೆಯನ್ನು ವಸೂಲಿ ಮಾಡಲು ಅನುಕೂಲವಾಗಲಿದೆ. ಶಾಖೆಯ ಪ್ರಾರಂಭಕ್ಕೆ ಬೇಕಾಗುವ ಕಚೇರಿಯನ್ನು ಪ್ರಾರಂಭಿಸಲು ಅನುಕೂಲಕರವಾದ ಕಟ್ಟಡ ಕೂಡಿಗೆಯಲ್ಲಿದೆ. ಅದರ ಸದುಪಯೋಗಿಸಿಕೊಂಡು ಕಚೇರಿಯನ್ನು ಪ್ರಾರಂಭಿಸಲು ಗ್ರಾಮಸ್ಥರು ಒತ್ತಾಯಿಸಿದ್ದಾರೆ.