ಸೋಮವಾರಪೇಟೆ, ಆ. 11: ಕಾರ್ಮಿಕರ ಹಾಗೂ ರೈತರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಜೆಸಿಟಿಯು (ಜಾಯಿಂಟ್ ಕಮಿಟಿ ಆಫ್ ಟ್ರೇಡ್ ಯೂನಿಯನ್) ತಾಲೂಕು ಸಮಿತಿ ವತಿಯಿಂದ ಸೋಮವಾರಪೇಟೆಯ ತಾಲೂಕು ಕಚೇರಿ ಎದುರು ಧರಣಿ ನಡೆಯಿತು.

ಕೇಂದ್ರ ಸರಕಾರ ಅಸಂಘಟಿತ ಕಾರ್ಮಿಕರಿಗೆ ಸಾಮಾಜಿಕ ಭದ್ರತಾ ಕಾಯ್ದೆ 2008ರ ಅನ್ವಯ ಪ್ರತಿವರ್ಷ ರೂ. 10 ಸಾವಿರ ಕೋಟಿ ವರ್ತುಲ ನಿಧಿ ಸ್ಥಾಪಿಸಬೇಕು. ರಕ್ಷಣಾ ವಲಯ, ರಕ್ಷಣಾ ಉಪಕರಣ ಕಾರ್ಖಾನೆ, ಸಾರಿಗೆ, ರೈಲ್ವೆ, ಜೀವ ವಿಮಾ ನಿಗಮ, ಬ್ಯಾಂಕ್, ಬಂದರು, ವಿಮಾನ ನಿಲ್ದಾಣ ಸೇರಿದಂತೆ ಸಾರ್ವಜನಿಕ ಉದ್ದಿಮೆಗಳನ್ನು ಖಾಸಗೀಕರಣ ಮಾಡಬಾರದು. ನೂತನ ಶಿಕ್ಷಣ ನೀತಿ ರದ್ದಾಗಬೇಕು ಎಂದು ಪ್ರತಿಭಟನೆಯಲ್ಲಿದ್ದ ಸಿಐಟಿಯು ಜಿಲ್ಲಾಧ್ಯಕ್ಷ ಪಿ.ಆರ್. ಭರತ್ ಒತ್ತಾಯಿಸಿದರು. ಬೇಡಿಕೆಗಳ ಮನವಿ ಪತ್ರವನ್ನು ಶಿರಸ್ತೇದಾರ್ ಮಹೇಶ್ ಅವರ ಮೂಲಕ ಕೇಂದ್ರ ಸರಕಾರಕ್ಕೆ ಸಲ್ಲಿಸಿದರು.

ಪತ್ರಿಭಟನೆಯಲ್ಲಿ ಎಐಟಿಯುಸಿ ಜಿಲ್ಲಾಧ್ಯಕ್ಷ ಹೆಚ್.ಎಂ. ಸೋಮಪ್ಪ, ಕಾರ್ಯದರ್ಶಿ ಪಿ.ಟಿ. ಸುಂದರ, ಸಂಚಾಲಕ ಶೇಷಪ್ಪ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಭಾಗೀರಥಿ, ಕಾರ್ಯದರ್ಶಿ ಸಾವಿತ್ರಿ, ಗ್ರಾಮ ಪಂಚಾಯಿತಿ ನೌಕರರ ಸಂಘದ ಕಾರ್ಯದರ್ಶಿ ಪಿ. ಉಮೇಶ್, ಕಾರ್ಮಿಕ ಮುಖಂಡರುಗಳಾದ ಹೂವಯ್ಯ, ಮಂಜುನಾಥ್, ನವೀನ್, ಮುತ್ತ ಮತ್ತಿತರರು ಉಪಸ್ಥಿತರಿದ್ದರು.