ಕುಶಾಲನಗರ, ಆ. 9: ಕಾವೇರಿ ನದಿ ಪ್ರವಾಹ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಕುಶಾಲನಗರ-ಮಡಿಕೇರಿ ರಾಜ್ಯ ಹೆದ್ದಾರಿ ಇದೀಗ ಸಂಚಾರಕ್ಕೆ ಮುಕ್ತಗೊಂಡಿದೆ. ಬೈಚನಹಳ್ಳಿಯ ತಾವರೆಕರೆ ಮತ್ತು ಗಂಧದಕೋಟಿ ಬಳಿ ರಸ್ತೆ ಜಲಾವೃತಗೊಂಡು ಕಳೆದ ಎರಡು ದಿನಗಳ ಕಾಲ ರಾಜ್ಯ ಹೆದ್ದಾರಿ ಸಂಪರ್ಕ ಕಡಿತಗೊಂಡಿತ್ತು. ಹಾರಂಗಿ ಮತ್ತು ಮಾದಾಪಟ್ಟಣ, ಗಂಧದಕೋಟಿ ಗ್ರಾಮ ಮಾರ್ಗವಾಗಿ ವಾಹನಗಳು ಸಂಚರಿಸುತ್ತಿದ್ದವು. ಉಳಿದಂತೆ ಕುಶಾಲನಗರ, ಗುಮ್ಮನ ಕೊಲ್ಲಿ-ಹಾರಂಗಿ-ಗುಡ್ಡೆಹೊಸೂರು ಮೂಲಕ ಮಡಿಕೇರಿ ಕಡೆಗೆ ಹೆದ್ದಾರಿ ರಸ್ತೆಗೆ ಸಂಪರ್ಕ ಕಲ್ಪಿಸಲಾಗಿತ್ತು. ಭಾನುವಾರ ಸಂಜೆ ವೇಳೆಗೆ ಪ್ರವಾಹ ಇಳಿಮುಖಗೊಂಡಿದ್ದು ಹೆದ್ದಾರಿಯಲ್ಲಿ ಭಾನುವಾರ ಸಂಜೆಯಿಂದ ವಾಹನ ಸಂಚಾರ ಮುಂದುವರೆದಿದೆ.

ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತ ವ್ಯಾಪ್ತಿಯ ಬಡಾವಣೆಗಳಿಗೆ ನುಗ್ಗಿದ ಪ್ರವಾಹ ನೀರು ಇಳಿಮುಖವಾಗುತ್ತಿದ್ದು ಬಹುತೇಕ ಮನೆಗಳಿಂದ ನೀರು ತೆರವುಗೊಂಡಿದೆ. ಕೊಪ್ಪ ಸೇತುವೆ ಬಳಿ ಮಾತ್ರ ಕಾವೇರಿ ನದಿ ತುಂಬಿ ಹರಿಯುತ್ತಿದ್ದು ಹಳೆಯ ಸೇತುವೆಯ ಬಳ್ಳದ ಬಾವಿಯಲ್ಲಿ ನೀರು ಹರಿಯುತ್ತಿದ್ದು ಅಪಾಯದ ಮಟ್ಟದಲ್ಲಿ ನದಿಯ ಹರಿವು ಕಂಡು ಬಂದಿದೆ. ಪಟ್ಟಣದ ವ್ಯಾಪ್ತಿಯಲ್ಲಿ ಬಹುತೇಕ ಮೋಡ ಕವಿದ ವಾತಾವರಣದೊಂದಿಗೆ ಅಲ್ಪಸ್ವಲ್ಪ ಮಳೆಯಾಗಿದೆ. -ಚಂದ್ರಮೋಹನ್