ಗೋಣಿಕೊಪ್ಪಲು, ಆ.10: ವೀರಾಜಪೇಟೆ ಸಮೀಪದ ಕುಂಜಿಲ ಕಕ್ಕಬ್ಬೆ ಪಂಚಾಯ್ತಿ ವ್ಯಾಪ್ತಿಗೆ ಸೇರಿರುವ ಮರಂದೋಡ ಗ್ರಾಮದಲ್ಲಿ ಕಾಡಾನೆಗಳ ಹಿಂಡು ಬೀಡುಬಿಟ್ಟಿದ್ದು ಈ ಭಾಗದ ಕಾಫಿ ಬೆಳೆಗಾರರ ತೋಟದಲ್ಲಿ ಕಾಣಿಸಿಕೊಂಡಿವೆ. ಪ್ರತಿ ದಿನ ಒಂದು ಕಾಫಿ ತೋಟದಿಂದ ಮತ್ತೊಂದು ಕಾಫಿ ತೋಟಕ್ಕೆ ಲಗ್ಗೆ ಇಡುತ್ತಿರುವ ಕಾಡಾನೆಗಳ ಹಿಂಡು ತೋಟದಲ್ಲಿರುವ ಫಸಲು ಭರಿತ ಕಾಫಿ ಗಿಡಗಳನ್ನು ಧ್ವ್ವಂಸಗೊಳಿಸುತ್ತಿವೆ.

ಅಲ್ಲದೆ ತೋಟದಲ್ಲಿರುವ ಇತರ ಬೆಳೆಗಳಾದ ಕಾಳುಮೆಣಸು, ಅಡಿಕೆ, ತೆಂಗು, ಬಾಳೆ ಗಿಡಗಳನ್ನು ಸಂಪೂರ್ಣ ಹಾನಿಪಡಿಸಿದ್ದು ಫಸಲಿಗೆ ಬಂದಿದ್ದ ಕಾಫಿ ಗಿಡಗಳು ನೆಲಕಚ್ಚಿವೆ. ಇದರಿಂದ ಈ ಭಾಗದ ಕಾಫಿ ಬೆಳೆಗಾರರು, ಕೂಲಿ ಕಾರ್ಮಿಕರು ಭಯಭೀತರಾಗಿದ್ದು, ಯಾರೂ ಕೂಡ ಕಳೆದ ಒಂದು ವಾರದಿಂದ ತೋಟ ಕೆಲಸಕ್ಕೆ ಮುಂದಾಗುತ್ತಿಲ್ಲ. ಸುದ್ದಿ ತಿಳಿದ ಸಮಾಜ ಸೇವಕ ಸಂಕೇತ್ ಪೂವಯ್ಯ ವಕೀಲರೊಂದಿಗೆ ಮರಂದೋಡ ಗ್ರಾಮದ ಮೇರಿಯಂಡ ಎಂ. ಬೋಪಣ್ಣ ಕಾಫಿ ತೋಟಕ್ಕೆ ಭೇಟಿ ನೀಡಿ ಸ್ಥಳೀಯ ಕಾಫಿ ಬೆಳೆಗಾರರು ಹಾಗೂ ಗ್ರಾಮಸ್ಥರೊಂದಿಗೆ ಸ್ಥಳ ಪರಿಶೀಲನೆ ನಡೆಸಿದರು.

ನಿರಂತರ ಕಾಡಾನೆ ಧಾಳಿಯಿಂದ ರೈತರ ಫಸಲು ನಷ್ಟಗೊಳ್ಳುತ್ತಿದ್ದು ಈ ಬಗ್ಗೆ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದೆ ಹಾಗೂ ನಷ್ಟಗೊಂಡ ರೈತನಿಗೆ ವೈಜ್ಞಾನಿಕ ಬೆಲೆ ನೀಡದೆ ಇರುವ ಹಿನ್ನಲೆಯಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ಕಾರ್ಯವೈಖರಿಯ ಬಗ್ಗೆ ಪ್ರಶ್ನಿಸಿ ನ್ಯಾಯಾಲಯದ ಮೆಟ್ಟಿಲೇರಿ ಅರಣ್ಯ ಇಲಾಖೆಯ ಅಧಿಕಾರಿಗಳ ಮೇಲೆ ಖಾಸಗಿ ಮೊಕದ್ದಮೆ ದಾಖಲು ಮಾಡಲು ಗ್ರಾಮಸ್ಥರ ಸಮ್ಮುಖದಲ್ಲಿ ನಿರ್ಧಾರ ಕೈಗೊಳ್ಳಲಾಯಿತು.

ಕೆಲವು ದಿನಗಳ ಹಿಂದೆ ತೋಟದ ಅನತಿ ದೂರದಲ್ಲಿರುವ ಕಾರ್ಮಿಕನೊಬ್ಬನ ಮೇಲೆ ಕಾಡಾನೆ ದಾಳಿ ನಡೆಸಿ ಪ್ರಾಣ ತೆಗೆದಿತ್ತು. ಆದರೆ ಅರಣ್ಯ ಅಧಿಕಾರಿಗಳು ಮಾತ್ರ ಇನ್ನು ಕೂಡ ಈ ಭಾಗದಲ್ಲಿ ಬೀಡುಬಿಟ್ಟಿರುವ ಕಾಡಾನೆಯನ್ನು ಸ್ಥಳಾಂತರ ಮಾಡುವ ಬಗ್ಗೆ ಯಾವುದೇ ಕ್ರಮ ಕೈಗೊಂಡಿಲ್ಲ. ಇದರಿಂದ ತೋಟದ ಕೆಲಸಕ್ಕೆ ಕಾರ್ಮಿಕರು ಆಗಮಿಸುತ್ತಿಲ್ಲ ಕಾಫಿ ಬೆಳೆಗಾರರು ಸಂಕಷ್ಟದಲ್ಲಿ ಸಿಲುಕಿದ್ದಾರೆ. ಏಳು ಎಂಟು ವರ್ಷದ ಕಾಫಿ ಗಿಡಗಳು ಸಂಪೂರ್ಣ ಹಾಳಾಗುತ್ತಿದ್ದರೂ ವೈಜ್ಞಾನಿಕ ಬೆಲೆ ನೀಡದೆ ಕಾಫಿ ಬೆಳೆಗಾರರೊಂದಿಗೆ ಇಲಾಖಾಧಿಕಾರಿಗಳು ಚೆಲ್ಲಾಟವಾಡುತ್ತಿರುವುದನ್ನು ಖಂಡಿಸಿ ಸರ್ವೊಚ್ಚ ನ್ಯಾಯಾಲಯ ಮೊರೆ ಹೋಗುವುದಾಗಿ ಸಂಕೇತ್ ಪೂವಯ್ಯ ತಿಳಿಸಿದರು.

ಗ್ರಾಮಸ್ಥರ ಮನವಿ ಮೇರೆ ಸಿಆರ್‍ಪಿಸಿ ಸೆಕ್ಷನ್ 200ರ ಪ್ರಕಾರ ಜಿಲ್ಲೆಯ ಅರಣ್ಯ ಇಲಾಖಾಧಿಕಾರಿಗಳ ಮೇಲೆ ನ್ಯಾಯಾಲಯದಲ್ಲಿ ಖಾಸಗಿ ಮೊಕದ್ದಮೆ ದಾಖಲು ಮಾಡುವ ಮೂಲಕ ಕಾಫಿ ಬೆಳೆಗಾರರಿಗೆ ಹಾಗೂ ಕಾರ್ಮಿಕರಿಗೆ ನ್ಯಾಯಕೊಡಿಸುವ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ವಕೀಲ ನರೇಂದ್ರ ಕಾಮತ್ ತಿಳಿಸಿದರು.

ಭೇಟಿಯ ಸಂದರ್ಭ ಕಾಫಿ ಬೆಳೆಗಾರರಾದ ಮೇರಿಯಂಡ ಬೋಪಣ್ಣ, ಮೇರಿಯಂಡ ಆದೇಶ್‍ಬೋಪಯ್ಯ, ಗಣೇಶ್ ಸೋಮಯ್ಯ, ವಕೀಲರಾದ ಮುದ್ದಯ್ಯ, ಚಂಗಪ್ಪ, ನಿಖಿಲ್ ಪೊನ್ನಣ್ಣ, ಮಾಚಂಗಡ ಗಣೇಶ್, ಚೊಯಮಾಡಂಡ ಹರೀಶ್ ಮಾದಪ್ಪ, ಮಲೆಯರ ಕಟ್ಟಿ ಭೀಮಯ್ಯ ಸೇರಿದಂತೆ ಕಾರ್ಮಿಕರಾದ ಆನಂದ, ಸಿದ್ದು, ಶಂಕರ್ ಸೇರಿದಂತೆ ಗ್ರಾಮಸ್ಥರು ಉಪಸ್ಥಿತರಿದ್ದರು.

-ಹೆಚ್.ಕೆ. ಜಗದೀಶ್