ಮಡಿಕೇರಿ, ಆ. 10: ಕೊಡಗು ಜಿಲ್ಲೆಯ ಮಡಿಕೇರಿ ತಾಲೂಕಿನ ಒಟ್ಟು 26 ಗ್ರಾಮ ಪಂಚಾಯಿತಿಗಳ ಚುನಾಯಿತ ಸದಸ್ಯರ ಅವಧಿ ಕ್ರಮವಾಗಿ ಜೂನ್-2020 ಮತ್ತು ಜುಲೈ-2020ರ ಮಾಹೆಯಲ್ಲಿ ಮುಕ್ತಾಯವಾಗಿದ್ದು, ಈ ಗ್ರಾಮ ಪಂಚಾಯಿತಿಗಳಿಗೆ ಸಾರ್ವತ್ರಿಕ ಚುನಾವಣೆಯನ್ನು ನಡೆಸುವ ಬಗ್ಗೆ ರಾಜ್ಯ ಚುನಾವಣಾ ಆಯೋಗದ ನಿರ್ದೇಶನದಂತೆ ಹಾಲಿ ಇರುವ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯನ್ನು ಅಳವಡಿಸಿಕೊಂಡು ಗ್ರಾಮ ಪಂಚಾಯಿತಿಗಳ ಕ್ಷೇತ್ರವಾರು ಮತದಾರರ ಪಟ್ಟಿಯನ್ನು ತಯಾರಿಸಿ ಕರಡು ಮತದಾರರ ಪಟ್ಟಿಯನ್ನು ತಾ. 7 ರಂದು ತಹಶೀಲ್ದಾರ್, ಗ್ರಾಮ ಪಂಚಾಯಿತಿ, ಕಂದಾಯ ಪರಿವೀಕ್ಷಕರ ಮತ್ತು ಗ್ರಾಮ ಲೆಕ್ಕಿಗರ ಕಚೇರಿಗಳಲ್ಲಿ ಸಾರ್ವಜನಿಕ ಮಾಹಿತಿಗಾಗಿ ಪ್ರಕಟಿಸಲಾಗಿದೆ.

ಸಾರ್ವಜನಿಕರು ಸದರಿ ಮತದಾರರ ಪಟ್ಟಿಯನ್ನು ಪರಿಶೀಲಿಸಿಕೊಂಡು ಯಾವುದೇ ಲೋಪದೂಷಗಳಿದ್ದಲ್ಲಿ, ಮತದಾರರ ಹೆಸರು ಮತ್ತು ವಾಸವಿರುವ ಕ್ಷೇತ್ರದ ವ್ಯಾಪ್ತಿಯಲ್ಲಿ ಇರದೆ ಬೇರೆ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾದಲ್ಲಿ ಮತ್ತು ನಗರ ಪ್ರದೇಶದ ಮತದಾರರ ಹೆಸರನ್ನು ಅಥವಾ ವಿಧಾನಸಭಾ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಯಾಗದೇ ಇರುವ ಹೆಸರುಗಳನ್ನು ಗ್ರಾಮ ಪಂಚಾಯಿತಿ ಚುನಾವಣೆಗೆ ತಯಾರಿಸಲಾಗಿರುವ ಮತದಾರರ ಪಟ್ಟಿಯಲ್ಲಿ ಸೇರ್ಪಡೆಯಾಗಿದ್ದಲ್ಲಿ ಮಾತ್ರ ಲಿಖಿತ ಆಕ್ಷೇಪಣೆಗಳನ್ನು ತಾ. 14 ರೊಳಗೆ ತಾಲೂಕು ಕಚೇರಿಗೆ ಸಲ್ಲಿಸುವಂತೆ ಮಡಿಕೇರಿ ತಹಶೀಲ್ದಾರರು ಕೋರಿದ್ದಾರೆ.