ಸುಂಟಿಕೊಪ್ಪ, ಆ. 10: ಇಲ್ಲಿಗೆ ಸಮೀಪದ ಕೆದಕಲ್ ಗ್ರಾಮ ಪಂಚಾಯಿತಿಗೆ ಸೇರಿದ ಹಾಲೇರಿ ಬೆಟ್ಟ ಕುಸಿಯುವ ಹಂತದಲ್ಲಿದೆ ಎಂದು ಅಲ್ಲಿ ನಿವಾಸಿಗಳು ಭಯಭೀತರಾಗಿದ್ದಾರೆ. ಕಳೆದ ವರ್ಷ ಹಾಲೇರಿ ಗ್ರಾಮದ ಭಂಡಾರಿ ತೋಟ ಮೇಲ್ಭಾಗದಲ್ಲಿದ್ದು, ಅದು ಕುಸಿದ ಪರಿಣಾಮ ನಾಲ್ಕು ಮನೆಗಳು ದ್ವಂಸಗೊಂಡು ದನ, ಕರುಗಳು ಮಣ್ಣಿನಡಿಯಲ್ಲಿ ಸಿಲುಕಿ ಪ್ರಾಣ ಕಳೆದುಕೊಂಡವು. ಆದರೆ ಅಲ್ಲಿ ವಾಸ ಮಾಡುವ ಜನರು ಮುನ್ನೆಚ್ಚರಿಕೆಯಿಂದ ಬದುಕುಳಿದರು.

ಆದರೆ ಇತ್ತೀಚಿನ ದಿನಗಳಲ್ಲಿ ಸುರಿಯುತ್ತಿರುವ ಮಳೆ, ಗಾಳಿಯಿಂದ ಅಲ್ಲಿ ವಾಸ ಮಾಡುವ ಹಲವಾರು ಕುಟುಂಬಗಳು ದಿನಾ ಭಯದಿಂದ ಜೀವನ ಸಾಗಿಸಬೇಕಾಗಿದೆ. ಇಲ್ಲಿ ಸುಮಾರು ಇಪ್ಪತ್ತು ಕುಟುಂಬಗಳು ನಮ್ಮನ್ನು ಬೇರೆಡೆಗೆ ಸ್ಥಳಾಂತರ ಮಾಡಿ ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ. ಆದರೂ ಕೆಲ ಕುಟುಂಬದವರು ಹಾಲೇರಿಯಲ್ಲಿನ ಮನೆಯನ್ನು ತೊರೆದು ಸಂಬಂಧಿಕರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ ಎಂದು ಅಲ್ಲಿನ ನಿವಾಸಿ ಅಣ್ಣು ತಿಳಿಸಿದ್ದಾರೆ.