ಮಡಿಕೇರಿ, ಆ. 10: ಮೇಕೇರಿ ಬಿಳಿಗೇರಿ ಪಂಚಾಯಿತಿ ವ್ಯಾಪ್ತಿಯ ಮಹಿಳೆಯೊಬ್ಬರು ಕಳೆದ ಎರಡು ದಿನಗಳ ಹಿಂದೆ ಬಿಳಿಗೇರಿ ಸಮೀಪದ ಹೊಳೆಗೆ ಬಿದ್ದ ನಂತರ ಎರಡು ದಿನಗಳಿಂದ ಹತ್ತು ಹಲವು ರಕ್ಷಣಾ ಪಡೆಗಳು ಕಾರ್ಯಾಚರಣೆ ನಡೆಸಿದರೂ ಮೃತದೇಹ ಸಿಕ್ಕಿರಲಿಲ್ಲ.
ಸುದ್ದಿ ತಿಳಿದ ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಕೊಡಗು ರೆಸ್ಕ್ಯೂ ಮತ್ತು ರಿಲೀಫ್ ತಂಡದ ಅಮೀರ್ ಕ್ರಿಯೇಟಿವ್ ಖಲೀಲ್ ತಂಡ ಇಂದು ಬೆಳಿಗ್ಗೆ ಕಾರ್ಯಾಚರಣೆ ಆರಂಭಿಸಿ ಮಧ್ಯಾಹ್ನ ವೇಳೆಗೆ ಸಾಹಸಮಯವಾಗಿ ಮೃತದೇಹವನ್ನು ಹೊರತೆಗೆಯಲಾಯಿತು. ಮಾಜಿ ಗ್ರಾಮ ಪಂಚಾಯಿತಿ ಸದಸ್ಯÀ ಅಬ್ದುಲ್ ಖಾದರ್ ಉಸ್ತುವಾರಿ ವಹಿಸಿದ್ದರು. ಹಾಕತ್ತೂರುವಿನ ಈಜುಗಾರರು, ಮಡಿಕೇರಿಯ ಪೊಲೀಸ್ ರೆಸ್ಕ್ಯೂ ತಂಡ, ಸ್ಥಳೀಯ ಜನರು ಹಾಗೂ ಅಗ್ನಿಶಾಮಕ ದಳದ ನೆರವಿನಿಂದ ಈ ಕಾರ್ಯ ಸಾಧ್ಯವಾಗಿದ್ದು ಮಡಿಕೇರಿ ಪೊಲೀಸ್ ರೆಸ್ಕ್ಯೂ ತಂಡದ ಅಧಿಕಾರಿ ಚಂದ್ರಶೇಖರ್ ಅವರೂ ಹಾಜರಿದ್ದು ನೇತೃತ್ವ ವಹಿಸಿದ್ದರು.
ಬಿಳಿಗೇರಿಯ ಕಾರ್ಮಿಕ ವರ್ಗದ ಮೋಹನ ಎಂಬವರ ಪತ್ನಿ ಉಷಾ (37) ಅವರ ಮೃತದೇಹ ಇದಾಗಿದ್ದು ಈ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಿಕೊಳ್ಳಲಾಗಿದೆ. ಎರಡು ದಿನಗಳ ಹಿಂದೆ ಉಷಾ ಅವರು ತಮ್ಮ 23 ವರ್ಷದ ಪುತ್ರಿ ಸಹಿತ ಬೇಸರದಿಂದ ಬಿಳಿಗೇರಿ ಬಳಿಯ ಈ ಹೊಳೆಗೆ ಹಾರಿದರು. ಆದರೆ, ವಿಷಯದ ಸುಳಿವು ದೊರೆತು ಅವರ ಹಿಂದೆಯೇ ಧಾವಿಸಿದ್ದ ಉಷಾಳ ಪತಿ ಮೋಹನ ತನ್ನ ಪುತ್ರಿಯನ್ನು ನೀರಿನಿಂದ ತಕ್ಷಣ ಎತ್ತಿ ಪ್ರಾಣ ರಕ್ಷಣೆ ಮಾಡಿದ್ದರು. ಆದರೆ ಪತ್ನಿಯನ್ನು ಉಳಿಸಲು ಸಾಧ್ಯವಾಗಿರಲಿಲ್ಲ .ಇಂದು ಆಕೆಯ ಶವವನ್ನು ಹೊರತೆಗೆಯಲಾಯಿತು. ಮನೆಯಲ್ಲಿ ಹಿರಿಯರೊಬ್ಬರ ಕಿರಿ ಕಿರಿಯಿಂದ ಬೇಸತ್ತುದೇ ಈ ದುರ್ಘಟನೆಗೆ ಕಾರಣವೆನ್ನಲಾಗಿದೆ.