*ಕೊಡ್ಲಿಪೇಟೆ, ಆ. 9: ಮಳೆಯ ಆರ್ಭಟದಿಂದ ಹದಗೆಟ್ಟು ಹೋಗಿರುವ ವಿದ್ಯುತ್ ಸಮಸ್ಯೆಯನ್ನು ಸರಿಪಡಿಸಲು ಇಲಾಖಾ ಸಿಬ್ಬಂದಿಗಳು ಶಕ್ತಿಮೀರಿ ಶ್ರಮ ಪಡುತ್ತಿದ್ದು, ಅಲ್ಲಲ್ಲಿ ಸ್ಥಳೀಯರು ಸ್ವಯಂಪ್ರೇರಣೆಯಿಂದ ದುರಸ್ತಿ ಕಾರ್ಯಕ್ಕೆ ಕೈಜೋಡಿಸುತ್ತಿದ್ದಾರೆ.
ಅದರಂತೆ ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯ ಬ್ಯಾಡಗೊಟ್ಟ ಗ್ರಾಮದಲ್ಲಿ ಸ್ಥಳೀಯರು ಸೆಸ್ಕ್ ಸಿಬ್ಬಂದಿಗಳೊಂದಿಗೆ ಕೈಜೋಡಿಸಿ ಶ್ರಮದಾನ ನಡೆಸಿದ್ದರ ಫಲವಾಗಿ ನಾಲ್ಕು ದಿನಗಳ ನಂತರ ಗ್ರಾಮಕ್ಕೆ ಬೆಳಕು ಬಂದಿದೆ.
ಭಾರೀ ಮಳೆ-ಗಾಳಿಯ ಆರ್ಭಟಕ್ಕೆ ಮರಗಳು ಬಿದ್ದು ವಿದ್ಯುತ್ ಕಂಬಗಳು ಧರಾಶಾಹಿಯಾಗಿದ್ದ ಹಿನ್ನೆಲೆಯಲ್ಲಿ ಕಳೆದ ನಾಲ್ಕೈದು ದಿನಗಳಿಂದ ಬ್ಯಾಡಗೊಟ್ಟ ವ್ಯಾಪ್ತಿಯಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಇದರಿಂದಾಗಿ ಸ್ಥಳೀಯ ನಿವಾಸಿಗಳು ಕತ್ತಲೆಯಲ್ಲಿ ದಿನದೂಡಿದ್ದರು.
ನಿನ್ನೆಯಿಂದ ಕೊಡ್ಲಿಪೇಟೆ ವ್ಯಾಪ್ತಿಯಲ್ಲಿ ಮಳೆ ಬಿಡುವು ನೀಡಿದ್ದರಿಂದಾಗಿ ಸೆಸ್ಕ್ ಸಿಬ್ಬಂದಿಗಳು ವಿದ್ಯುತ್ ಮಾರ್ಗದ ದುರಸ್ತಿಗೆ ಮುಂದಾಗಿದ್ದು, ಇವರೊಂದಿಗೆ ಸ್ಥಳೀಯ ನಿವಾಸಿಗಳಾದ ಹನೀಫ್, ತಪ್ಸೀರ್, ಸುಲ್ತಾನ್, ತೌಫೀಕ್, ಲತೀಫ್, ನಾಸೀರ್, ರಫೀಕ್, ತಸ್ರೀಫ್, ಅಜೀಜ್ ಸೇರಿದಂತೆ ಇತರರು ಕೈಜೋಡಿಸಿ, ವಿದ್ಯುತ್ ಮಾರ್ಗ ದುರಸ್ತಿಗೆ ಸಹಕರಿಸಿದರು.
ಈ ಭಾಗದಲ್ಲಿ ತುಂಡಾಗಿದ್ದ ವಿದ್ಯುತ್ ಕಂಬಗಳನ್ನು ಬದಲಾಯಿಸಿ, ತಂತಿಯನ್ನು ದುರಸ್ತಿಪಡಿಸಿದ ನಂತರ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಲಭಿಸಿತು.