ಕಣಿವೆ, ಆ. 9: ಕಾವೇರಿ ಕಣಿವೆಯ ಪ್ರಮುಖ ಜಲಾಶಯಗಳಲ್ಲಿ ಒಂದಾಗಿರುವ ಹಾರಂಗಿ ಜಲಾಶಯದ ಎದುರು ಪ್ರತಿ ವರ್ಷದ ಮಳೆಗಾಲದಲ್ಲಿ ಪ್ರವಾಹ ಏರ್ಪಡುವುದರಿಂದ ಈ ಭಾಗದ ನಿವಾಸಿಗಳು ಹಾಗೂ ಪ್ರವಾಸಿಗರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಎತ್ತರದ ಸೇತುವೆಯನ್ನು ಹಾರಂಗಿ ನದಿಗೆ ಅಡ್ಡಲಾಗಿ ನಿರ್ಮಿಸಬೇಕೆಂದು ಹುಲುಗುಂದ ಗ್ರಾಮಸ್ಥರು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸೋಮಣ್ಣ ಅವರಿಗೆ ಮನವಿ ಅರ್ಪಿಸಿದರು.

ಹಾರಂಗಿ ಜಲಾಶಯಕ್ಕೆ ಶಾಸಕ ರಂಜನ್ ಹಾಗೂ ಸಂಸದ ಪ್ರತಾಪ್ ಸಿಂಹ ಅವರೊಂದಿಗೆ ಧಾವಿಸಿದ ಸಂದರ್ಭ ಗ್ರಾಮಸ್ಥರ ಪರವಾಗಿ ಪಂಚಾಯತಿ ಸದಸ್ಯ ಭಾಸ್ಕರ್ ನಾಯಕ್ ಮನವಿ ಸಲ್ಲಿಸಿದರು. ಪ್ರತಿ ವರ್ಷದ ಮಳೆಗಾಲದಲ್ಲಿ ಜಲಾಶಯಕ್ಕೆ ಒಳಹರಿವು ಹೆಚ್ಚಾದಾಗ ಅಷ್ಟೇ ನೀರನ್ನು ನದಿಗೆ ಹರಿ ಬಿಟ್ಟಾಗ ಬಹುದೊಡ್ಡ ಪ್ರವಾಹ ಉಂಟಾಗಿ ಸಾರ್ವಜನಿಕರಿಗೆ ಕೆಲ ದಿನಗಳ ಕಾಲ ಸಂಪರ್ಕ ಹಾಗೂ ಸಂಚಾರ ಇಲ್ಲದೇ ಸಂಕಷ್ಟ ಎದುರಾಗುತ್ತದೆ. ಆದ್ದರಿಂದ ಸಚಿವರು ಗಮನ ಹರಿಸಿ ಸಮಸ್ಯೆ ಬಗೆಹರಿಸಬೇಕೆಂದು ಭಾಸ್ಕರ್ ನಾಯಕ್ ಮನವಿ ಮಾಡಿದ್ದಾರೆ.