ತಲಕಾವೇರಿ, ಆ. 9: ಕೊಡಗು ಜಿಲ್ಲೆಗೆ ಅಪ್ಪಳಿಸಿರುವ ಪ್ರಾಕೃತಿಕ ವಿಕೋಪದ ಸಂದರ್ಭ ಎಲ್ಲಾ ಪಕ್ಷಗಳ ನಾಯಕರು ಒಂದಾಗಿ ರಾಜಕೀಯ ಭೇದ ಮರೆತು ಶಾಶ್ವತ ಪರಿಹಾರ ಕಾರ್ಯಕ್ರಮವನ್ನು ಯೋಜಿಸಿ, ಸರಕಾರದ ಮೂಲಕ ಜಾರಿಗೊಳಿಸ ಬೇಕಾಗಿದೆ ಎಂದು ರಾಜ್ಯ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಮುಕ್ತ ಮಾತುಗಳನ್ನಾಡಿದ್ದಾರೆ. ತಲಕಾವೇರಿಯಲ್ಲಿ ದುರಂತ ಸ್ಥಳಕ್ಕೆ ಭೇಟಿ ನೀಡಿ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತ ನಾಡುತ್ತಿದ್ದರು. ರಾಜ್ಯ ಸರಕಾರವು ಮುಂಗಡ ಪತ್ರದಲ್ಲಿ ಕೊಡಗು ಜಿಲ್ಲೆಗೆ ವಿಶೇಷ ಪ್ಯಾಕೇಜ್ ಅನ್ನು ಅಳವಡಿಸ ಬೇಕು ಎಂದು ಕೂಡ ಅವರು ಈ ಸಂದರ್ಭ ಆಗ್ರಹಿಸಿದರು. ಜಿಲ್ಲೆಯಲ್ಲಿ ತೃತೀಯ ವರ್ಷ ಇಂತಹ ದುರಂತ ಮರುಕಳಿಸಿದೆ. ಈ ಸಂದರ್ಭ ಕೊಡಗಿನ ಜನರ ಸಮಸ್ಯೆಯನ್ನು ಅರಿತುಕೊಂಡು ಪರಿಹಾರ ಸೂತ್ರಕ್ಕೆ ಕೈಜೋಡಿಸುವು ದಕ್ಕಾಗಿ ತಾನೂ ಕೂಡ ಆಗಮಿಸಿರು ವುದಾಗಿ ಅವರು ಮಾಹಿತಿಯಿತ್ತರು. ಕೊಡಗಿನ ಕೃಷಿಕರು ಕಾಫಿ ಬೆಳೆ ಗಾರರು ತೀವ್ರ ಬವಣೆಗೆ ಒಳಗಾಗಿ ದ್ದಾರೆ. ಪ್ರವಾಸೋದ್ಯಮವು ನೆಲ ಕಚ್ಚಿದೆ. ಇಂತಹ ಸಂದರ್ಭ ಶಾಶ್ವತ ಪರಿಹಾರ ಕಲ್ಪಿಸುವುದೊಂದೇ ದಾರಿ ಯಾಗಿದೆ. ದೇಶಕ್ಕೆ ಅಪ್ರತಿಮ ಸೈನಿಕರನ್ನು ನೀಡಿದ ಜಿಲ್ಲೆ ಕೊಡಗು. ಅಲ್ಲದೆ, ಜೀವನದಿ ಕಾವೇರಿಯ ತವರೂರು ಕೂಡ ಆಗಿದೆ.

(ಮೊದಲ ಪುಟದಿಂದ) ಕರ್ನಾಟಕದಲ್ಲಿ ವಿಲೀನಗೊಂಡ ಸಂದರ್ಭದಲ್ಲಿಯೂ ರಾಜ್ಯಕ್ಕೆ ರೂ. 10 ಲಕ್ಷ ತೆರಿಗೆಯನ್ನು ಕೊಡಗು ಜಿಲ್ಲೆ ನೀಡಿದೆ. ಇಂತಹ ನಾಡನ್ನು ರಕ್ಷಿಸಲು ಎಲ್ಲರೂ ಮುಂದಾಗಬೇಕಿದೆ ಎಂದು ಅವರು ಅಭಿಪ್ರಾಯಪಟ್ಟರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯೆ ವೀಣಾ ಅಚ್ಚಯ್ಯ, ಕೆ.ಪಿ.ಸಿ.ಸಿ. ಉಸ್ತುವಾರಿ ಮಂಜುಳಾ ರಾಜ್, ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ, ರಾಜ್ಯ ಮಹಿಳಾ ಘಟಕದ ಅಧ್ಯಕ್ಷೆ ಪುಷ್ಪ ಅಮರನಾಥ್, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ. ಮಂಜುನಾಥ್ ಕುಮಾರ್, ಕೆ.ಪಿ.ಸಿ.ಸಿ. ಪ್ರಮುಖರಾದ ಕೆ.ಪಿ. ಚಂದ್ರಕಲಾ, ಚಂದ್ರಮೌಳಿ, ತಲಕಾವೇರಿ ದೇವಾಲಯ ಸಮಿತಿ ಅಧ್ಯಕ್ಷ ಬಿ.ಎಸ್. ತಮ್ಮಯ್ಯ, ಬಿ.ಎಸ್. ರಮಾನಾಥ್ ಇನ್ನಿತರರಿದ್ದರು.

ವರದಿ : ಕೆ.ಡಿ. ಸುನಿಲ್, ಸಿಂಚು