ಗೋಣಿಕೊಪ್ಪಲು, ಆ.9: ಮುಂಜಾನೆಯ ವೇಳೆ ಬಾಳೆ ತೋಟಕ್ಕೆ ನುಗ್ಗಿದ ಕಾಡಾನೆಯ ಹಿಂಡು ಬೆಳೆದು ನಿಂತಿದ್ದ ಬಾಳೆ ಫಸಲುಗಳನ್ನು ಬಹುತೇಕ ನಷ್ಟಗೊಳಿಸಿದೆ. ಮೈಸೂರು, ಗೋಣಿಕೊಪ್ಪ ಮುಖ್ಯರಸ್ತೆಯ ಹರಿಶ್ಚಂದ್ರಪುರದ ಕೂಗಳತೆಯ ದೂರದಲ್ಲಿ ಇರುವ ಕೆ.ವೈ. ರಾಜೀತ್ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆ ಹಿಂಡು ತೋಟದಲ್ಲಿದ್ದ ಬಾಳೆ ಫಸಲನ್ನು ಸಂಪೂರ್ಣ ನಾಶಪಡಿಸಿದೆ.
ಇದರಿಂದಾಗಿ ತೋಟದ ಮಾಲೀಕ ಕೆ.ವೈ. ರಾಜೀತ್‍ರವರಿಗೆ ಲಕ್ಷಕ್ಕೂ ಅಧಿಕ ನಷ್ಟ ಸಂಭವಿಸಿದೆ. ಭಾನುವಾರ ಮುಂಜಾನೆ ವೇಳೆ ತೋಟಕ್ಕೆ ಬಂದ ಕಾಡಾನೆಗಳ ಗುಂಪು ಬಾಳೆ ಗಿಡಗಳನ್ನು ಹಾಳು ಮಾಡಿರುವುದಲ್ಲದೆ, ತೋಟದಲ್ಲಿರುವ ಅಡಿಕೆ, ಕಾಫಿ ಹಾಗೂ ತೆಂಗಿನ ಗಿಡಗಳನ್ನು ಆನೆಗಳು ದ್ವಂಸಗೊಳಿಸಿವೆ.
ಮಳೆಯ ಹಿನ್ನೆಲೆಯಲ್ಲಿ ಕಾರ್ಮಿಕರಿಗೆ ಕಾಡಾನೆಯ ಹಿಂಡು ತೋಟಕ್ಕೆ ಲಗ್ಗೆಇಟ್ಟಿದ್ದ ಬಗ್ಗೆ ಗಮನಕ್ಕೆ ಬಂದಿರಲಿಲ್ಲ. ಬೆಳಿಗ್ಗೆ ಎಂದಿನಂತೆ ತೋಟಕ್ಕೆ ತೆರಳಿದ ಕಾರ್ಮಿಕರಿಗೆ ವಿಷಯ ತಿಳಿದು ಮಾಲೀಕರು ಬಂದು ಪರಿಶೀಲನೆ ನಡೆಸಿದ ಸಂದರ್ಭದಲ್ಲಿ ತೋಟದಲ್ಲಿದ್ದ ಫಸಲುಭರಿತ ಬಾಳೆಗಿಡಗಳು ಬಹುತೇಕ ಹಾಳಾಗಿವೆ. ಪ್ರಸ್ತುತ ವರ್ಷದಲ್ಲಿ ಇದೇ ತೋಟಕ್ಕೆ ಮೂರನೇ ಬಾರಿ ಕಾಡಾನೆ ಹಿಂಡು ದಾಳಿ ನಡೆಸಿದ್ದು, ಅರಣ್ಯ ಇಲಾಖೆ ಈ ಬಗ್ಗೆ ಯಾವುದೇ ರೀತಿಯ ಕ್ರಮಕೈಗೊಳ್ಳದೇ ಇರುವುದು ಸಾರ್ವಜನಿಕರ ಅಸಮಾಧಾನಕ್ಕೆ ಕಾರಣವಾಗಿದೆ.
ಪಟ್ಟಣದ ಅನತಿ ದೂರದಲ್ಲಿ ಕಾಡಾನೆಯ ಹಿಂಡು ತೋಟಕ್ಕೆ ನುಗ್ಗಿದ ಪರಿಣಾಮ ಇಲ್ಲಿನ ನಾಗರಿಕರು ಭಯಭೀತಗೊಂಡಿದ್ದಾರೆ.
- ಹೆಚ್.ಕೆ.ಜಗದೀಶ್