ಆನೆಗಳ ರಕ್ಷಣೆಗೆ ಕ್ರಮದ ದಾಖಲೆ ಬಿಡುಗಡೆ
ನವದೆಹಲಿ, ಆ. 10: ವಿಶ್ವ ಆನೆಗಳ ಸಂರಕ್ಷಣೆ ಜಾಗೃತಿ ದಿನದ ಸಂದರ್ಭದಲ್ಲಿ ಆನೆಗಳ ಸಂರಕ್ಷಣೆಗಾಗಿ ದೇಶದಲ್ಲಿ ಕೈಗೊಳ್ಳಲಾಗುತ್ತಿರುವ ಕ್ರಮಗಳ ಮಾಹಿತಿ ಇರುವ ದಾಖಲೆಗಳನ್ನು ಪರಿಸರ ಮತ್ತು ಅರಣ್ಯ ಸಂರಕ್ಷಣೆ ಸಚಿವ ಪ್ರಕಾಶ್ ಜಾವಡೇಕರ್ ಇಂದು ಬೆಳಿಗ್ಗೆ ಬಿಡುಗಡೆ ಮಾಡಿದರು. ಅರಣ್ಯ ಸಂಪತ್ತು ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಆನೆಗಳು ಮಾನವ ವಸತಿ ಪ್ರದೇಶಗಳತ್ತ ಬರುವ ಪ್ರಕರಣಗಳು ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಆನೆಗಳು ಮತ್ತು ಮಾನವರ ನಡುವಣ ಸಂಘರ್ಷ ತಗ್ಗಿಸಲು ಕೈಗೊಳ್ಳಲಾಗುತ್ತಿರುವ ಕ್ರಮಗಳನ್ನು ಸಚಿವರು ವಿವರಿಸಿದರು.
ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣ
ಬೆಂಗಳೂರು, ಆ.10 : ಕರ್ನಾಟಕ ಎಸ್ಎಸ್ಎಲ್ ಸಿ ಫಲಿತಾಂಶಗಳು ಪ್ರಕಟವಾಗಿದ್ದು, ಈ ಬಾರಿ ಶೇ.71.80 ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಈ ಬಗ್ಗೆ ಇಂದು ಶಿಕ್ಷಣ ಸಚಿವ ಸುರೇಶ್ ಕುಮಾರ್ ಅವರು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದರು. ರಾಜ್ಯಾದ್ಯಂತ 8,48,203 ವಿದ್ಯಾರ್ಥಿಗಳು ಪರೀಕ್ಷೆ ನೋಂದಾಯಿಸಿಕೊಂಡಿದ್ದು, ಈ ಪೈಕಿ 8,11,050 ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. 19, 086 ವಿದ್ಯಾರ್ಥಿಗಳ ಕೊರತೆಯುಂಟಾಗಿತ್ತು. ರಾಜ್ಯಾದ್ಯಂತ 34 ಶೈಕ್ಷಣಿಕ ಜಿಲ್ಲೆಗಳ 22 ಕೇಂದ್ರಗಳಲ್ಲಿ ಮೌಲ್ಯಮಾಪನ ಮಾಡಲಾಗಿತ್ತು ಎಂದು ಹೇಳಿದರು. ಕೊರೊನಾ ಸೋಂಕಿನ ಭೀತಿಯಿಂದ 18,067 ವಿದ್ಯಾರ್ಥಿಗಳು ಮೊದಲು ಪರೀಕ್ಷೆ ಬರೆಯದೆ, ಪೂರಕ ಪರೀಕ್ಷೆಗೆ ಹಾಜರಾಗಿದ್ದರು. 227 ಮೌಲ್ಯಮಾಪನ ಕೇಂದ್ರಗಳಲ್ಲಿ ಮೌಲ್ಯಮಾಪನ ನಡೆಯಿತು. 52,219 ಮೌಲ್ಯಮಾಪಕರು ಉತ್ತರಪತ್ರಿಕೆಗಳ ಮೌಲ್ಯಮಾಪನ ಮಾಡಿದ್ದಾರೆ ಎಂದು ಮಾಹಿತಿ ನೀಡಿದರು. ಈ ವರ್ಷ ಶೇ.71.80 ಮಂದಿ ಅಂದರೆ 5, 82, 314 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಕಳೆದ ವರ್ಷ 73.70 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದರು. ಈ ಬಾರಿ ಚಿಕ್ಕಬಳ್ಳಾಪುರ ಜಿಲ್ಲೆಗೆ ಪ್ರಥಮ ಸ್ಥಾನ ಲಭಿಸಿದ್ದು, ಬೆಂಗಳೂರು ಗ್ರಾಮಾಂತರ ದ್ವಿತೀಯ ಮಧುಗಿರಿ ತೃತೀಯ, ಮಂಡ್ಯ ಜಿಲ್ಲೆಗೆ ನಾಲ್ಕನೇ ಸ್ಥಾನ ಲಭಿಸಿದೆ. ಯಾದಗಿರಿ ಕೊನೆಯ ಸ್ಥಾನ ಲಭಿಸಿದೆ. 2, 28, 734 ವಿದ್ಯಾರ್ಥಿಗಳು ಅನುತೀರ್ಣರಾಗಿದ್ದಾರೆ. ಈ ಪೈಕಿ ಸರ್ಕಾರಿ ಶಾಲೆಗಳ ಶೇ.72.79 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಅನುದಾನಿತ ಶಾಲೆಗಳ ಶೇ. 70.60 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅನುದಾನ ರಹಿತ ಶಾಲೆಗಳ ಶೇ.83.12ಮಂದಿ ವಿದ್ಯಾರ್ಥಿಗಲು ಉತ್ತೀರ್ಣರಾಗಿದ್ದಾರೆ. ಪ್ರತೀ ಬಾರಿಯಂತೆಯೂ ಈ ಬಾರಿಯೂ ಬಾಲಕಿಯರದ್ದೇ ಮೇಲುಗೈ ಸಾಧಿಸಿದ್ದಾರೆ. ಈ ಬಾರಿ ಶೇ.66.41 ಬಾಲಕರು ಉತ್ತೀರ್ಣರಾಗಿದ್ದು, ಶೇ.77.74ರಷ್ಟು ಬಾಲಕಿಯರು ಉತ್ತೀರ್ಣರಾಗಿದ್ದಾರೆ. 6 ಮಂದಿ ವಿದ್ಯಾರ್ಥಿಗಳು 625ಕ್ಕೆ 625 ಅಂಕಗಳನ್ನು ಗಳಿಸಿದ್ದು, ಕಳೆದ ಬಾರಿ ಇಬ್ಬರು ಮಾತ್ರ ಈ ಸಾಧನೆ ಗೈದಿದ್ದರು. ಅಂತೆಯೇ ಈ ಬಾರಿ 11 ಮಂದಿ 625ಕ್ಕೆ 624 ಅಂಕಗಳನ್ನು ಪಡೆದಿದ್ದು, ಕಳೆದ ಬಾರಿ 11 ಇಷ್ಚು ಅಂಕಗಳಿಸಿದ್ದರು. ಇನ್ನು ನಗರ ಪ್ರದೇಶದಲ್ಲಿ ಶೇ.73.41 ರಷ್ಟು ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದು, ಗ್ರಾಮೀಣ ಭಾಗದ ಶೇ.77.18 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಅಂತೆಯೇ ಕನ್ನಡ ಮಾಧ್ಯಮದ ಶೇ. 70.49 ವಿದ್ಯಾರ್ಥಿಗಳು ಮತ್ತು ಆಂಗ್ಲ ಮಾಧ್ಯಮದ ಶೇ.84.98 ಮಂದಿ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ.
ಸಿಎಂ ಬಿಎಸ್ವೈ ಆಸ್ಪತ್ರೆಯಿಂದ ಬಿಡುಗಡೆ
ಬೆಂಗಳೂರು, ಆ.10 : ಕೊರೋನಾ ಮಹಾಮಾರಿಗೆ ತುತ್ತಾಗಿದ್ದ ಸತತ 9 ದಿನಗಳ ಕಾಲ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರು ಇಂದು ಸಂಜೆ ಬಿಡುಗಡೆ ಆಗಿದ್ದಾರೆ. ಕೊರೊನಾ ಟೆಸ್ಟ್ ನಲ್ಲಿ ನೆಗೆಟಿವ್ ಬಂದಿದ್ದರಿಂದ ಯಡಿಯೂರಪ್ಪನವರನ್ನು ಬಿಡುಗಡೆ ಮಾಡಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಪೊಲೀಸರ ಬಿಗಿ ಭದ್ರತೆಯಲ್ಲಿ ಬಿಎಸ್ ಯಡಿಯೂರಪ್ಪನವರನ್ನು ಆಸ್ಪತ್ರೆಯಿಂದ ಮನೆಗೆ ಕರೆದೊಯ್ಯಲಾಗಿದ್ದು ಅವರು ಸಾಗುವ ಮಾರ್ಗದ ಸುತ್ತಮುತ್ತ ಭದ್ರತೆ ಒದಗಿಸಲಾಗಿದೆ. ಆಗಸ್ಟ್ 2ರಂದು ಬಿಎಸ್ ಯಡಿಯೂರಪ್ಪನವರು ಆಸ್ಪತ್ರೆಗೆ ದಾಖಲಾಗಿದ್ದು ಇಂದು ಬಿಡುಗಡೆ ಆಗಿದ್ದಾರೆ
ಕಾಂಗ್ರೆಸ್ನಿಂದ ಜನಧ್ವನಿ ಹೋರಾಟ
ಬೆಂಗಳೂರು, ಆ.10 : ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಜನ್ಮದಿನವನ್ನು ಬಿಜೆಪಿ ಸರ್ಕಾರದ ವಿರುದ್ಧದ ಹೋರಾಟದ ದಿನವನ್ನಾಗಿ ಆಚರಿಸಲು ಕಾಂಗ್ರೆಸ್ ನಿರ್ಧರಿಸಿದೆ. ದೇವರಾಜ ಅರಸು ಜಾರಿಗೆ ತಂದಿದ್ದ ಕ್ರಾಂತಿಕಾರಕ ಉಳುವವನೇ ಭೂಮಿಯ ಹೊಲದೊಡೆಯ ಕಾನೂನಿಗೆ ವಿರುದ್ಧವಾಗಿ ಬಿಜೆಪಿ ಸರ್ಕಾರ ಜಾರಿಗೊಳಿಸಿರುವ ಉಳ್ಳವನೇ ಭೂಮಿಯ ಒಡೆಯ ಎಂಬ ಕಾನೂನು ವಿರುದ್ಧದ ಹೋರಾಟಕ್ಕೆ ಈ ದಿನವನ್ನು ಬಳಸಿಕೊಳ್ಳಲು ನಿರ್ಧರಿಸಿದೆ. ಜತೆಗೆ ಎಪಿಎಂಸಿ ಕಾಯಿದೆ ತಿದ್ದುಪಡಿ, ಕೊರೋನಾ ಭ್ರಷ್ಟಾಚಾರ ಸೇರಿದಂತೆ ಜನ ವಿರೋಧಿ ನೀತಿಗಳ ವಿರುದ್ಧ ಆ.20 ರಂದು ‘ಜನಧ್ವನಿ' ಹೆಸರಿನಲ್ಲಿ ಕಾಂಗ್ರೆಸ್ ಹೋರಾಟಕ್ಕೆ ಕರೆ ನೀಡಿದೆ. ಸರ್ಕಾರದ ಇತ್ತೀಚಿನ ಜನವಿರೋಧಿ ನೀತಿಗಳು, ಜನ ಮತ್ತು ರೈತರ ವಿರುದ್ಧವಾದ ಕಾನೂನುಗಳ ಜಾರಿ, ನೆರೆ ಹಾನಿ ಅಧ್ಯಯನ ಪ್ರವಾಸ ಕುರಿತು ಕೆಪಿಸಿಸಿ ಕಚೇರಿಯಲ್ಲಿ ಡಿ.ಕೆ.ಶಿವಕುಮಾರ್ ಪಕ್ಷದ ಮುಖಂಡರೊಂದಿಗೆ ಸಭೆ ನಡೆಸಿದರು.
ವಿಶ್ವದ ಮೊದಲ ಕೋವಿಡ್ ಲಸಿಕೆ
ಮಾಸ್ಕೋ, ಆ.10 : ಡಬ್ಲ್ಯುಎಚ್ಒ ಸೇರಿದಂತೆ ಹಲವಾರು ಕಡೆಗಳಿಂದ ಸುರಕ್ಷತೆಯ ಬಗೆಗಿನ ಕಾಳಜಿಯ ಹೊರತಾಗಿಯೂ ಅಕ್ಟೋಬರ್ನಲ್ಲಿ ಸಮೂಹ ವ್ಯಾಕ್ಸಿನೇಷನ್ (ಮಾಸ್ ವ್ಯಾಕ್ಸಿನೇಷನ್) ಪ್ರಾರಂಭಕ್ಕೆ ಮುನ್ನ ಈ ವಾರ ವಿಶ್ವದ ಮೊದಲ ಕೋವಿಡ್ -19 ಲಸಿಕೆಯನ್ನು ಬಿಡುಗಡೆಗೊಳಿಸುವ ಯೋಜನೆಯನ್ನು ರಷ್ಯಾ ಮುಂದುವರಿಸಿದೆ. ರಷ್ಯಾದ ಉಪ ಆರೋಗ್ಯ ಸಚಿವ ಒಲೆಗ್ ಗ್ರಿಡ್ನೆವ್ ಅವರು ಆ.12 ರಂದು ಕೋವಿಡ್ -19 ಲಸಿಕೆ ನೊಂದಾವಣೆ ಯೋಜನೆಯನ್ನು ಹೊಂದಿದ್ದಾಗಿ ಹೇಳಿದ್ದಾರೆ. ಕೋವಿಡ್ ನಿಂದ ಅತಿ ಹೆಚ್ಚು ಪೀಡಿತವಾದ ಜಗತ್ತಿನ ನಾಲ್ಕನೇ ರಾಷ್ಟ್ರ ರಷ್ಯಾ ಆಗಿದ್ದು ಯುಎಸ್, ಬ್ರೆಜಿಲ್ ಮತ್ತು ಭಾರತದ ನಂತರದ ಸ್ಥಾನದಲ್ಲಿದೆ, ಈ ವಾರ ದೇಶವು ವಿಶ್ವದ ಮೊದಕ ಕೋವಿಡ್ ಲಸಿಕೆ ಬಿಡುಗಡೆಯನ್ನು ಗಮಲೇಯ ಸಂಶೋಧನಾ ಸಂಸ್ಥೆ ಮತ್ತು ರಷ್ಯಾದ ರಕ್ಷಣಾ ಸಚಿವಾಲಯ ಜಂಟಿಯಾಗಿ ನೆರವೇರಿಸಲಿದೆ ಎಂದು ಒಲೆಗ್ ಗ್ರಿಡ್ನೆವ್ ಹೇಳಿರುವುದಾಗಿ ಸ್ಪುಟ್ನಿಕ್ ಸುದ್ದಿ ಸಂಸ್ಥೆ ವರದಿ ಮಾಡಿದೆ. ಆಗಸ್ಟ್ 3 ರಂದು, ಲಸಿಕೆಯ ಕ್ಲಿನಿಕಲ್ ಪ್ರಯೋಗಗಳಲ್ಲಿ ಭಾಗವಹಿಸುವವರ "ಅಂತಿಮ ವೈದ್ಯಕೀಯ ಪರೀಕ್ಷೆ" ಬರ್ಡೆಂಕೊ ಮುಖ್ಯ ಮಿಲಿಟರಿ ಕ್ಲಿನಿಕಲ್ ಆಸ್ಪತ್ರೆಯಲ್ಲಿ ನಡೆಯಿತು ಎಂದು ರಷ್ಯಾದ ರಕ್ಷಣಾ ಸಚಿವಾಲಯ ಹೇಳಿಕೆಯಲ್ಲಿ ತಿಳಿಸಿದೆ. ವ್ಯಾಕ್ಸಿನೇಷನ್ನಿಂದಾಗಿ ಎಲ್ಲಾ ಸ್ವಯಂಸೇವಕರು ಸ್ಪಷ್ಟ ರೋಗನಿರೋಧಕ ಪ್ರತಿಕ್ರಿಯೆಯನ್ನು ಹೊಂದಿದ್ದಾರೆಂದು ಫಲಿತಾಂಶಗಳು ಸ್ಪಷ್ಟವಾಗಿ ಬಂದಿದೆ, ಸ್ವಯಂಸೇವಕರ ಕೆಲಸದಲ್ಲಿ ಯಾವುದೇ ಅಡ್ಡಪರಿಣಾಮಗಳು ಅಥವಾ ಅಸಹಜತೆ ಕಾಣಿಸಿಲ್ಲ ಎಂದು ಸಚಿವಾಲಯ ಹೇಳಿದೆ.
ಚಿನ್ನ ಮತ್ತು ಬೆಳ್ಳಿ ಬೆಲೆ ಗಗನಕ್ಕೆ
ನವದೆಹಲಿ, ಆ.10 : ಕೊರೋನಾ ಸಂಕಷ್ಟದ ಸಮಯದಲ್ಲೂ ಭಾರತದಲ್ಲಿ ಚಿನ್ನ ಮತ್ತು ಬೆಳ್ಳಿ ಬೆಲೆ ಗಗನಕ್ಕೇರಿದೆ. ಚಿನ್ನದ ಬೆಲೆಯಲ್ಲಿ 238 ರುಪಾಯಿ ಹೆಚ್ಚಾಗಿದ್ದು 10 ಗ್ರಾಂ ಚಿನ್ನದ ಬೆಲೆ 56,122 ರುಪಾಯಿ ಆಗಿದೆ. ಇದೇ ವೇಳೆ ಬೆಳ್ಳಿ ಬೆಲೆಯಲ್ಲೂ 960 ರುಪಾಯಿ ಹೆಚ್ಚಾಗಿದ್ದು 1 ಕೆಜಿ ಬೆಲೆ 76,520 ರುಪಾಯಿ ಆಗಿದೆ. ಈ ಹಿಂದಿನ ವಹಿವಾಟಿನ ಪ್ರಕಾರ ಚಿನ್ನದ ದರ 10 ಗ್ರಾಂಗೆ 55,884 ರೂಪಾಯಿ ಇತ್ತು. ಸೋಮವಾರ 75,560 ರೂಪಾಯಿ ಇದ್ದ ಕೆ.ಜಿ ಬೆಳ್ಳಿಯ ದರ 960 ರೂಗಳ ಏರಿಕೆ ಕಂಡಿದ್ದು ಈಗ 76,520 ರೂಪಾಯಿಗಳಾಗಿದೆ.ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಔನ್ಸ್ ಚಿನ್ನದ ಬೆಲೆ 2,035 ಡಾಲರ್ ಗಳಿದ್ದು, ಬೆಳ್ಳಿಯ ಬೆಲೆ ಒಂದು ಔನ್ಸ್ ಗೆ 28.31 ಅಮೆರಿಕನ್ ಡಾಲರ್ ನಷ್ಟಿದೆ.