ಕುಶಾಲನಗರ, ಆ. 9 : ಪ್ರವಾಹಪೀಡಿತ ಕುಶಾಲನಗರ ಪಟ್ಟಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು ಪಟ್ಟಣ ಪಂಚಾಯ್ತಿ ಮೂಲಕ ಸರಬರಾಜು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ.

ನದಿ ತಟದ ಬಹುತೇಕ ಬಡಾವಣೆಗಳು ಜಲಾವೃತ ಸ್ಥಿತಿಯಲ್ಲಿದ್ದು ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಬೈಚನಹಳ್ಳಿ ಬಳಿ ನೀರು ಪೂರೈಕೆ ಯಂತ್ರಾಗಾರ ಮುಳುಗಡೆಯಾಗಿರುವ ಕಾರಣ ಕುಡಿಯುವ ನೀರು ಸರಬರಾಜು ಸಮಸ್ಯೆ ಎದುರಾಗಿದೆ.

ನದಿಯಿಂದ ನೀರೆತ್ತುವ ಯಂತ್ರಗಾರ ಮುಳುಗಡೆ ಕಾರಣ ಉಂಟಾಗಿರುವ ಸಮಸ್ಯೆಯಿಂದ ಕಳೆದ ಮೂರು ದಿನಗಳಿಂದ ಕುಡಿಯುವ ನೀರು ಪೂರೈಕೆ ಸ್ಥಗಿತಗೊಂಡಿದೆ.

ಈ ಹಿನ್ನೆಲೆಯಲ್ಲಿ ಕುಶಾಲನಗರ ಪಟ್ಟಣ ಪಂಚಾಯ್ತಿ ಮೂಲಕ ಟ್ಯಾಂಕರ್‍ಗಳಲ್ಲಿ ಅಗತ್ಯವಿರುವ ಬಡಾವಣೆಗಳಿಗೆ ನೀರು ಸರಬರಾಜು ಮಾಡಲಾಗುತ್ತಿದೆ. ಪ್ರವಾಹ ಕಡಿಮೆಯಾಗಿ ಯಂತ್ರಾಗಾರ ಕಾರ್ಯ ಆರಂಭಿಸುವ ತನಕ ಇದೇ ವ್ಯವಸ್ಥೆ ಮುಂದುವರೆಯಲಿದೆ ಎಂದು ಕುಶಾಲನಗರ ಪಪಂ ಮುಖ್ಯಾಧಿಕಾರಿ ಸುಜಯ್ ಕುಮಾರ್ ಮಾಹಿತಿ ನೀಡಿದ್ದಾರೆ.