ಶೇ. 100 ರಷ್ಟು ಕೋವಿಡ್‍ನಿಂದ ಗುಣಮುಖರಾಗಬಹುದಾಗಿದೆ. ಸಹಜವಾಗಿ ಬರುವ ಶೀತ, ಜ್ವರ, ಕೆಮ್ಮು ಮಾದರಿಯಲ್ಲೇ ಇದೊಂದು ಹೊಸ ರೀತಿಯ ಸಮಸ್ಯೆಯೇ ಹೊರತು ಮತ್ತೇನಿಲ್ಲ. ನಾನು ಪದೇ ಪದೇ ನನ್ನ ಅನುಭವದಂತೆ ಹೇಳುತ್ತೇನೆ ಯಾರೂ ಹೆದರಬೇಡಿ... ಇದು ಬಿಟ್ಟಂಗಾಲದವರಾದ ಬೆಂಗಳೂರಿನಲ್ಲಿ ಉದ್ಯೋಗದಲ್ಲಿರುವ ರಂಜನ್ ಅವರ ಧೈರ್ಯದ ಮಾತು.
ಬೆಂಗಳೂರಿನಿಂದ ಬಿಟ್ಟಂಗಾಲದ ಮನೆಗೆ ಆಗಮಿಸಿದ್ದ ಇವರು ಸಹಜವಾಗಿದ್ದರು... ಆದರೆ ನಂತರ ಸಣ್ಣ ಜ್ವರ ಬಂದ ಕಾರಣದಿಂದ ವೀರಾಜಪೇಟೆ ಆಸ್ಪತೆಗೆ ತೆರಳಿದಾಗ ವೈದ್ಯರು ಸೂಕ್ತ ಚಿಕಿತ್ಸೆ ನೀಡಿ ಬಳಿಕ ಕೋವಿಡ್ ಪರೀಕ್ಷೆಗೆ ಸೂಚಿಸಿದ್ದರು. ಇದರಂತೆ ಟೆಸ್ಟ್ ಮಾಡಿಸಿಕೊಂಡು ಮತ್ತೆ ಮನೆಗೆ ಮರಳಿದ್ದೆ. ವರದಿ ಬರುವ ಮುಂಚಿತವಾಗಿ ನನಗೆ ಬಂದಿದ್ದ ಶೀತ-ಜ್ವರ ವಾಸಿಯಾಗಿತ್ತು. ಆದರೆ ಕೆಲದಿನ ತಡವಾಗಿ ವರದಿ ಪಾಸಿಟಿವ್ ಬಂದ ಕಾರಣದಿಂದ ನಿಯಮದಂತೆ ಮಡಿಕೇರಿಯ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ದಾಖಲಾಗಿದ್ದೆ... ಅಲ್ಲಿ. ವೈದ್ಯರು... ಶುಶ್ರೂಷಕಿಯರು ಸ್ನೇಹಿತರ ರೀತಿಯಲ್ಲಿ ಉತ್ತಮ ರೀತಿಯ ಸ್ಪಂದನ - ಚಿಕಿತ್ಸೆ ನೀಡಿದ್ದು ಕೆಲವೇ ದಿನದಲ್ಲಿ ಆಸ್ಪತ್ರೆಯಿಂದ ಮರಳಿದ್ದೇನೆ ಎಂದು ರಂಜನ್ ಸ್ಮರಿಸಿದರು.
ದೃಶ್ಯ ಮಾಧ್ಯಮದಲ್ಲಿ ಬರುವ ವಿಚಾರದಿಂದ ಜನ ತುಸು ಭಯಭೀತರಾಗುತ್ತಿದ್ದಾರೆಯೇ ಹೊರತು ಇದಕ್ಕೆ ಹೆದರಬೇಕಾಗಿಲ್ಲ. ತಮಗಾದ ಒಂದೇ ಸಮಸ್ಯೆ ಎಂದರೆ ಕೋವಿಡ್ ಪರೀಕ್ಷಾ ವರದಿ ಬರುವದು ತಡವಾದದ್ದು ಮಾತ್ರ... ಇದು ಸ್ವಲ್ಪ ಗೊಂದಲಕ್ಕೆಡೆಯಾಯಿತು ಎಂದು ಅನುಭವ ಹಂಚಿಕೊಂಡ ರಂಜನ್ ಯಾರೂ ಹೆದರುವ ಅಗತ್ಯವಿಲ್ಲ. ತಾವು ಸಂಪೂರ್ಣ ಗುಣಮುಖರಾಗಿದ್ದು, ಈಗಾಗಲೇ ಕೆಲಸಕ್ಕೆ ಮರಳಿರುವುದಾಗಿ ತಿಳಿಸಿದರು.