ವೀರಾಜಪೇಟೆ, ಆ. 8: ಪಟ್ಟಣದ ಬೆಟ್ಟ ಪ್ರದೇಶದ ನಿವಾಸಿಗಳಿಗೆ ಶಾಶ್ವತ ಸೂರು ಒದಗಿಸುವ ನಿಟ್ಟಿನಲ್ಲಿ ಚೆÀಂಬೆಬೆಳ್ಳೂರು ಗ್ರಾಮ ಪಂಚಾಯಿತಿ ವಾಪ್ತಿಯ ಐಮಂಗಲದಲ್ಲಿ ನಾಲ್ಕು ಎಕರೆ ಜಾಗವನ್ನು ಗುರುತಿಸಲಾಗಿದ್ದು ಶೀಘ್ರದಲ್ಲಿಯೆ ಕಾಗದ ಪತ್ರಗಳನ್ನು ಪರಿಶೀಲಿಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳಿಗೆ ಉಸ್ತುವಾರಿ ಸಚಿವ ವಿ. ಸೋಮಣ್ಣ ಹೇಳಿದರು.

ಕಳೆದ ಬಾರಿ ಸುರಿದ ಭಾರಿ ಮಳೆಗೆ ಮಲೆತಿರಿಕೆ ಬೆಟ್ಟದಲ್ಲಿ ಬಿರುಕು ಕಾಣಿಸಿಕೊಂಡ ಹಿನೆÀ್ನಲೆಯಲ್ಲಿ ಈ ಬಾರಿ ಮುಂಜಾಗ್ರತಾ ಕ್ರಮವಾಗಿ ಬೆಟ್ಟ ಪ್ರದೇಶದ ನಿವಾಸಿಗಳನ್ನು ಅಲ್ಲಿಂದ ಸ್ಥಳಾಂತರ ಮಾಡಲು ಜಿಲ್ಲಾಡಳಿತ ನೀಡಿದ ಸ್ಥಳವನ್ನು ವೀಕ್ಷಣೆ ಮಾಡಲು ಬಂದ ಉಸ್ತುವಾರಿ ಸಚಿವರು ಅಲ್ಲಿನ ನಿವಾಸಿಗಳೊಂದಿಗೆ ಮಾತನಾಡಿ, ಶಾಶ್ವತ ಸೂರು ಕಟ್ಟಿಕೊಡಲು ಈಗಾಗಲೇ ಐಮಂಗಲದಲ್ಲಿ 4 ಎಕರೆ ಜಾಗವನ್ನು ಗುರುತಿಸಲಾಗಿದೆ. ಜಾಗದ ಮಾಲೀಕರು ಇಚ್ಚಾ ಪತ್ರವನ್ನು ನೀಡಿದ್ದಾರೆ. ಸದ್ಯದ ಪರಿಸ್ಥಿತಿಯಲ್ಲಿ 400 ಗುಂಪು ಮನೆಗಳನ್ನು ನಿರ್ಮಿಸಬಹುದಾಗಿದೆ. ಉಳಿದಂತೆ ಪಕ್ಕದಲ್ಲಿಯೆ ಮತ್ತೊಂದು ಖಾಸಗಿ ಜಾಗವನ್ನು ಗುರುತಿಸಲಾಗಿದ್ದು, ಮುಂದಿನ ಸುತ್ತಿನಲ್ಲಿ ಉಳಿದ ಮನೆಗಳನ್ನು ನಿರ್ಮಿಸಿಕೊಡಲಾ ಗುವುದು ಎಂದರು.

ಕಳೆದ ಬಾರಿ ಬಿರುಕು ಬಿಟ್ಟ ಬೆಟ್ಟ ಪ್ರದೇಶವನ್ನು ಗಣಿ ಮತ್ತು ಭೂ ವಿಜ್ಞಾನಿಗಳು ಪರಿಶೀಲನೆ ನಡೆಸಿ 57 ಮನೆಗಳಿಗೆ ತೀವ್ರ ಹಾನಿಯಾಗಲಿದ್ದು, ವಾಸಕ್ಕೆ ಯೋಗ್ಯವಿಲ್ಲ ಎಂದು ವರದಿ ನೀಡಿದ್ದಾರೆ. ಬೆಟ್ಟ ಕುಸಿಯದಂತೆ ಶಾಶ್ವತ ತಡಗೋಡೆ ನಿರ್ಮಿಸಲು ಟೆಂಡರ್ ಪ್ರಕ್ರಿಯೆ ನಡೆದಿದೆ. ಕೋವಿಡ್ ಬಂದ ಕಾರಣ ತಾತ್ಕಾಲಿಕ ತಡೆಯಾಗಿದೆ. ಮುಂದಿನ ಸಾಲಿನಲ್ಲಿ ತಡೆಗೋಡೆ ಪೂರ್ಣಗೊಳಿಸಲಾಗುವುದು ಎಂದರು. ವಾರ್ಡ್ ಸದಸ್ಯ ಡಿ.ಪಿ ರಾಜೇಶ್ ಹಾಗೂ ಸುಶ್ಮಿತಾ ಬೆಟ್ಟ ನಿವಾಸಿಗಳ ಸಮಸ್ಯೆಯನ್ನು ಉಸ್ತುವಾರಿ ಸಚಿವರ ಮುಂದಿಟ್ಟರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ ಬೆಟ್ಟ ಪ್ರದೇಶದ ಎಲ್ಲರನ್ನು ಸ್ಥಳಾಂತರ ಮಾಡುವುದು ಬೇಡ. ಯಾರು ಅಪಾಯದ ಅಂಚಿನಲ್ಲಿ ಇದ್ದಾರೆ ಅವರನ್ನು ಕೂಡಲೇ ಬೇರೆಡೆಗೆ ಸ್ಥಳಾಂತರಿಸಿ ಮೂಲಭೂತ ಸೌಕರ್ಯ ಒದಗಿಸಿ ಎಂದು ಹೇಳಿದರು

ಪ್ರಶಂಸೆ: ಕಳೆದ ಎರಡು ವರ್ಷದಿಂದ ಪ.ಪಂ. ಮುಖ್ಯಾಧಿಕಾರಿಯಾಗಿರುವ ಶ್ರೀಧರ್ ಅವರ ಕಾರ್ಯವೈಖರಿಯ ಬಗ್ಗೆ ಸಚಿವರು ಪ್ರಶಂಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಸುನೀಲ್ ಸುಬ್ರಮಣಿ, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ, ತಹಶೀಲ್ದಾರ್ ನಂದೀಶ್, ಮುಖ್ಯಾಧಿಕಾರಿ ಶ್ರೀಧರ್, ಅಭಿಯಂತರ ಹೇಮಕುಮಾರ್, ಮತ್ತಿತರರು ಉಪಸ್ಥಿತರಿದ್ದರು.