ಸೋಮವಾರಪೇಟೆ, ಆ. 8: ಕಳೆದ ನಾಲ್ಕೈದು ದಿನಗಳ ಕಾಲ ಸತತವಾಗಿ ಸುರಿದ ಮಳೆ ಹಾಗೂ ಗಾಳಿಯ ಆರ್ಭಟಕ್ಕೆ ಸೋಮವಾರಪೇಟೆ ತಾಲೂಕು ವ್ಯಾಪ್ತಿಯಲ್ಲಿ ಒಟ್ಟು 113 ಮನೆಗಳಿಗೆ ಹಾನಿಯಾಗಿದೆ.106 ಮನೆಗಳು ಭಾಗಶಃ ಹಾನಿಗೊಳಗಾಗಿದ್ದರೆ, 5 ಮನೆಗಳು ಸಂಪೂರ್ಣ ನಾಶವಾಗಿದ್ದು, ಮತ್ತೆರಡು ಮನೆಗಳು ತೀವ್ರ ಸ್ವರೂಪದಲ್ಲಿ ಜಖಂಗೊಂಡಿವೆ. ಇದರೊಂದಿಗೆ 3 ಗುಡಿಸಲು ನಾಶವಾಗಿದ್ದು, ಒಂದು ಜಾನುವಾರು ಮೃತಪಟ್ಟಿದೆ. 4 ಕೊಟ್ಟಿಗೆಗಳಿಗೆ ಹಾನಿಯಾಗಿದೆ.ಹಾನಿಗೀಡಾದ ಮನೆಗಳಿಗೆ ತಾಲೂಕು ಆಡಳಿತದಿಂದ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಪರಿಹಾರಕ್ಕಾಗಿ ಸರ್ಕಾರಕ್ಕೆ ವರದಿ ಸಲ್ಲಿಸುವ ಸಿದ್ಧತೆ ನಡೆಸುತ್ತಿದ್ದಾರೆ. ಕೇವಲ 5 ದಿನಗಳ ಕಾಲ ಸುರಿದ ಭಾರೀ ಮಳೆ-ಗಾಳಿಯಿಂದಾಗಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು, ಹಾನಿಗೊಳಗಾದ ಸಾರ್ವಜನಿಕರು ಪರಿಹಾರಕ್ಕಾಗಿ ಎದುರು ನೋಡುವಂತಾಗಿದೆ.ಭಾರೀ ಗಾಳಿಗೆ ಹಲವಷ್ಟು ಭಾಗದಲ್ಲಿ (ಮೊದಲ ಪುಟದಿಂದ) ಮನೆಗಳ ಛಾವಣಿ ಜಖಂಗೊಂಡಿದ್ದರೆ, ಮಳೆಯಿಂದಾಗಿ ಅತೀ ಶೀತ ಉಂಟಾಗಿ ವಾಸದ ಮನೆಗಳ ಗೋಡೆ ಕುಸಿದು ನಷ್ಟ ಸಂಭವಿಸಿದೆ. ಸುಂಟಿಕೊಪ್ಪ ಮತ್ತು ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಯಲ್ಲಿ ತಲಾ ಒಂದೊಂದು ಮನೆ ಸಂಪೂರ್ಣ ಹಾನಿಗೀಡಾಗಿದ್ದು, ಸುಂಟಿಕೊಪ್ಪ ಹೋಬಳಿಯಲ್ಲಿ 2 ಮನೆಗಳು ತೀವ್ರ ಪ್ರಮಾಣದಲ್ಲಿ ಹಾನಿಗೀಡಾಗಿವೆ ಎಂದು ಕಂದಾಯ ಇಲಾಖಾಧಿಕಾರಿಗಳು ತಹಶೀಲ್ದಾರ್ ಕಚೇರಿಗೆ ವರದಿ ನೀಡಿದ್ದಾರೆ. ಸುಂಟಿಕೊಪ್ಪ ಹೋಬಳಿಯಲ್ಲಿ ಒಟ್ಟು 19 ಮನೆಗಳು, ಕುಶಾಲನಗರದಲ್ಲಿ 7, ಸೋಮವಾರಪೇಟೆ ಹೋಬಳಿ ವ್ಯಾಪ್ತಿಯಲ್ಲಿ 32, ಶಾಂತಳ್ಳಿಯಲ್ಲಿ 10 ಮನೆ ಹಾಗೂ 2 ಕೊಟ್ಟಿಗೆ, ಶನಿವಾರಸಂತೆಯಲ್ಲಿ 13 ಮನೆ ಹಾಗೂ 2 ಗುಡಿಸಲು, ಕೊಡ್ಲಿಪೇಟೆ ಹೋಬಳಿ ವ್ಯಾಪ್ತಿಯಲ್ಲಿ 32 ಮನೆಗಳಿಗೆ ಹಾನಿಯಾಗಿದೆ. ನಿನ್ನೆ ತಡರಾತ್ರಿ ಹಾನಗಲ್ಲುಬಾಣೆ ಗ್ರಾಮದ ಲೀಲಾ ಕೃಷ್ಣಪ್ಪ ಅವರಿಗೆ ಸೇರಿದ ವಾಸದ ಮನೆಯ ಗೋಡೆ ಕುಸಿದು ಬಿದ್ದು, ನಷ್ಟ ಸಂಭವಿಸಿದೆ. ಸ್ಥಳಕ್ಕೆ ಗ್ರಾಮ ಲೆಕ್ಕಾಧಿಕಾರಿ ಹೇಮಾವತಿ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂಬಳ್ಳಿ ಗ್ರಾಮದ ಚಂಗಪ್ಪ ಎಂಬವರಿಗೆ ಸೇರಿದ ವಾಸದ ಮನೆಯ ಛಾವಣಿ ಹಾರಿ ಹೋಗಿದ್ದು, ಸಾವಿರಾರು ರೂಪಾಯಿ ನಷ್ಟ ಸಂಭವಿಸಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಸುರೇಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ನಿನ್ನೆ ಮಧ್ಯಾಹ್ನದ ನಂತರದಿಂದ ಮಳೆಯ ಆರ್ಭಟ ಕಡಿಮೆಯಾಗಿದ್ದು, ಇಂದು ತಿಳಿಯಾದ ವಾತಾವರಣ ಕಂಡುಬಂತು. ಗಾಳಿಯ ರಭಸವೂ ಕಡಿಮೆಯಾಗಿದ್ದು, ಸಾರ್ವಜನಿಕರು ಸಮಾಧಾನದ ನಿಟ್ಟುಸಿರು ಬಿಡುವಂತಾಯಿತು. ಸಂಜೆ ವೇಳೆಗೆ ಮತ್ತೆ ಮಳೆ ಬಿರುಸುಗೊಂಡಿತು.
ಗದ್ದೆಗಳಿಗೆ ನೀರು : ತಾಲೂಕಿನ ಶಾಂತಳ್ಳಿ ಹೋಬಳಿ ವ್ಯಾಪ್ತಿಗೊಳಪಡುವ ತೋಳೂರುಶೆಟ್ಟಳ್ಳಿ-ಇನಕನಹಳ್ಳಿ ಗ್ರಾಮದಲ್ಲಿ ಹೊಳೆಯ ನೀರು ಗದ್ದೆಗಳಿಗೆ ನುಗ್ಗಿದ್ದು, ನಾಟಿ ಮಾಡಿದ್ದ ಪೈರು ನಾಶವಾಗುವ ಆತಂಕ ಸೃಷ್ಟಿಯಾಗಿದೆ. ಗ್ರಾಮದ ಕುಮಾರಪ್ಪ ಅವರ ಗದ್ದೆಗೆ ಹೊಳೆ ನೀರು ನುಗ್ಗಿದ್ದರೆ, ವಸಂತರಾಜು ಅವರ ಗದ್ದೆಯ ಬದಿಯಲ್ಲಿ ಬರೆಕುಸಿದು ನಾಟಿ ಮಾಡಿದ್ದ ಗದ್ದೆ ಮಣ್ಣಿನಿಂದ ಆವೃತಗೊಂಡಿದೆ.
ಇನ್ನು ಪುಷ್ಪಗಿರಿ ಬೆಟ್ಟಶ್ರೇಣಿ ಪ್ರದೇಶದ ಶಾಂತಳ್ಳಿ, ಬೆಟ್ಟದಳ್ಳಿ, ಕುಡಿಗಾಣ, ಕೊತ್ನಳ್ಳಿ, ಬೀದಳ್ಳಿ, ಹಂಚಿನಳ್ಳಿಯಲ್ಲಿ ಉತ್ತಮ ಮಳೆಯಾಗುತ್ತಿರುವ ಬಗ್ಗೆ ವರದಿಯಾಗಿದೆ. ಪಟ್ಟಣದ ಸುತ್ತಮುತ್ತಲ ಗ್ರಾಮೀಣ ಭಾಗದಲ್ಲಿ ಮಳೆಯ ಪ್ರಮಾಣದಲ್ಲಿ ಇಳಿಕೆಯಾಗಿದೆ. ಗಾಳಿ-ಮಳೆ ಕಡಿಮೆಯಾಗಿರುವದರಿಂದ ವಿದ್ಯುತ್ ಮಾರ್ಗದ ಲೈನ್‍ಗಳನ್ನು ದುರಸ್ತಿಗೊಳಿಸುವಲ್ಲಿ ಸೆಸ್ಕ್ ಇಲಾಖೆ ಮಗ್ನವಾಗಿದೆ.
ಗ್ರಾಮೀಣ ಪ್ರದೇಶಗಳಿಗೆ ಕಳೆದ 5 ದಿನಗಳಿಂದ ವಿದ್ಯುತ್ ಸ್ಥಗಿತಗೊಂಡಿದ್ದು, ಕೂತಿ, ತೋಳೂರುಶೆಟ್ಟಳ್ಳಿ, ನಗರಳ್ಳಿ, ಕುಡಿಗಾಣ, ಕುಂದಳ್ಳಿ, ಶಾಂತಳ್ಳಿ, ಹರಗ, ಕಿರಗಂದೂರು ಸೇರಿದಂತೆ ಇತರ ಗ್ರಾಮಗಳು ಇಂದಿಗೂ ಕಾರ್ಗತ್ತಲಿನಲ್ಲಿವೆ.
ಕೊಡ್ಲಿಪೇಟೆ ಹೋಬಳಿಯಾದ್ಯಂತ ಭಾರೀ ಹಾನಿ
*ಕೊಡ್ಲಿಪೇಟೆ : ಆರ್ಭಟಿಸಿದ ಆಶ್ಲೇಷ ಮಳೆಯಿಂದಾಗಿ ಕೊಡ್ಲಿಪೇಟೆ ಹೋಬಳಿಯಾದ್ಯಂತ ಭಾರೀ ಪ್ರಮಾಣದ ಹಾನಿ ಸಂಭವಿಸಿದೆ.
ಮಳೆಯೊಂದಿಗೆ ಭಾರೀ ಪ್ರಮಾಣದಲ್ಲಿ ಗಾಳಿಯೂ ಬೀಸಿದ್ದರಿಂದ ಹಲವಾರು ಮನೆಗಳು ಜಖಂಗೊಂಡಿವೆ. ನೂರಾರು ಮರಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳು ಧರೆಗುರುಳಿವೆ.
ಕೊಡ್ಲಿಪೇಟೆ ಪಂಚಾಯತಿ ವ್ಯಾಪ್ತಿಯ ಕಸೂರು ಗ್ರಾಮದ ಮೊಹಿದ್ದೀನ್ ಶೇಖ್ ಅಹ್ಮದ್ ಅವರ ಮನೆಯ ಮೇಲ್ಚಾವಣಿಯ ಸುಮಾರು 30 ಶೀಟುಗಳು ಗಾಳಿಗೆ ಹಾರಿಹೋಗಿ, ವಾಸಕ್ಕೆ ಅಯೋಗ್ಯವಾಗಿದೆ. ಪರಿಣಾಮ ಈ ಕುಟುಂಬ ಬೇರೆಯವರ ಮನೆಯಲ್ಲಿ ಆಶ್ರಯ ಪಡೆಯುತ್ತಿದೆ.
ನವಗ್ರಾಮದ ತಾರ ದೇವರಾಜ್ ಅವರ ಮನೆಯ ಒಂದು ಗೋಡೆ ಸಂಪೂರ್ಣವಾಗಿ ಕುಸಿದು ಬಿದ್ದಿದೆ. ಮಾದ್ರೆ ಗ್ರಾಮದ ಕೆಂಚಮ್ಮ ಅವರ ಮನೆಯ ಗೋಡೆಗಳು ಕುಸಿದ ಪರಿಣಾಮ ಹೆಚ್ಚಿನ ಹಾನಿ ಸಂಭವಿಸಿದೆ. ಇವರ ಮನೆ ವಾಸಕ್ಕೆ ಯೋಗ್ಯವಿಲ್ಲದಂತಾಗಿದ್ದು, ನೂತನ ಮನೆಯನ್ನೇ ನಿರ್ಮಿಸಿಕೊಳ್ಳಬೇಕಿದೆ.
ಬ್ಯಾಡಗೊಟ್ಟದ ನಬೀಸಾ ಅವರ ಮನೆಯ ಹಿಂಭಾಗ ಎರಡು ಮರಗಳು ಬಿದ್ದು ಶೌಚಾಲಯಕ್ಕೆ ಹಾನಿಯಾಗಿದೆ. ಬ್ಯಾಡಗೊಟ್ಟ ಶಾಲೆಯ ಸಮೀಪ ವಾಸವಿರುವ ಎ.ಬಿ. ಅಬ್ದುಲ್ಲಾ ಅವರ ಮನೆಯ ಹಿಂಭಾಗ ಮರಬಿದ್ದು ಸಿಮೆಂಟ್ ಶೀಟುಗಳು ಪುಡಿಯಾಗಿವೆ.
ಬೆಸೂರು ಪಂಚಾಯತಿ ವ್ಯಾಪ್ತಿಯ ಅರೆಹಳ್ಳಿ ಗ್ರಾಮದ ಕುಮಾರ್ ಅವರ ಮನೆಯ ಮೇಲೆ ವಿದ್ಯುತ್ ಕಂಬ ಬಿದ್ದ ಪರಿಣಾಮ ಮನೆಯ ಹೆಂಚುಗಳು ಪುಡಿಯಾಗಿವೆ. ಬ್ಯಾಡಗೊಟ್ಟ ಶಾಲೆಯ ಪಕ್ಕದ ನಿವಾಸಿ ಫಾರೂಕ್ ಎಂಬವರ ಮನೆಯ ಹಿಂಭಾಗ ಬರೆ ಕುಸಿದಿದ್ದು, ಸುತ್ತಮುತ್ತಲಿನ 4 ಮನೆಗಳಿಗೆ ಆತಂಕ ಎದುರಾಗಿದೆ.
ಸ್ಥಳೀಯ ಗ್ರಾಮ ಪಂಚಾಯಿತಿ ಇತ್ತ ಗಮನ ಹರಿಸಿ ನರೇಗಾ ಸೇರಿದಂತೆ ಇನ್ನಿತರ ಯೋಜನೆಗಳ ಮೂಲಕ ತಡೆಗೋಡೆ ನಿರ್ಮಿಸಲು ಕ್ರಮ ಕೈಗೊಳ್ಳಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಹಾನಿಗೀಡಾದ ಸ್ಥಳಗಳಿಗೆ ಕಂದಾಯ ಪರಿವೀಕ್ಷಕ ಮನು ಕುಮಾರ್ ಹಾಗೂ ಗ್ರಾಮ ಲೆಕ್ಕಿಗರಾದ ಚೈತ್ರ ಅವರುಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕೊಡ್ಲಿಪೇಟೆ ಹೋಬಳಿ ಕಂದಾಯ ಗ್ರಾಮ ವ್ಯಾಪ್ತಿಯಲ್ಲಿ 25 ಕ್ಕೂ ಅಧಿಕ ಮನೆಗಳಿಗೆ ಮಳೆಯಿಂದ ಹಾನಿಯಾದ ಬಗ್ಗೆ ಮಾಹಿತಿ ಲಭ್ಯವಾಗಿದೆ. ಸದರಿ ಮನೆಗಳನ್ನು ಆಯಾ ವೃತ್ತದ ಗ್ರಾಮ ಲೆಕ್ಕಿಗರು ಪರಿಶೀಲಿಸಿದ್ದು, ತಾಲೂಕು ಆಡಳಿತಕ್ಕೆ ವರದಿ ನೀಡಿದ್ದಾರೆ.
ಕೊಡ್ಲಿಪೇಟೆಯ ಹೊಸಮುನ್ಸಿಪಾಲಿಟಿ ವಿಭಾಗದ ಕೆ.ಆರ್. ಚಂದ್ರಶೇಖರ್ ಅವರ ತೋಟಕ್ಕೆ ಹೋಗುವ ರಸ್ತೆಯಲ್ಲಿ ಮರ ಬಿದ್ದು ಎರಡು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ಇದೇ ವಿಭಾಗದ ಶೌಕತ್ ಎಂಬವರ ಮನೆಯ ಮುಂಭಾಗ ನಿಲ್ಲಿಸಿದ್ದ ಗೂಡ್ಸ್ ಆಟೋ ಮೇಲೆ ಮರ ಬಿದ್ದು ಆಟೋ ಜಖಂಗೊಂಡಿದೆ.
ಇದರೊಂದಿಗೆ ಹೊನ್ನೆಕೋಡಿ ಗ್ರಾಮದ ವರಪ್ರಸಾದ್ ಅವರ ಮನೆಗೆ ಹೋಗುವ ದಾರಿಯಲ್ಲಿ ಮರ ಬಿದ್ದು ಐದು ವಿದ್ಯುತ್ ಕಂಬಗಳು ನೆಲಕ್ಕುರುಳಿವೆ. ಬ್ಯಾಡಗೊಟ್ಟ ಜಿ.ಬಿ.ಎಂ.ರಸ್ತೆಯ ನಿವಾಸಿ ಬಿ.ಎಂ.ಮಹಮ್ಮದ್ ರವರ ಮನೆಯ ಮುಂಭಾಗ ಮೂರು ವಿದ್ಯುತ್ ಕಂಬಗಳು ಮುರಿದುಬಿದ್ದಿವೆ. ಶನಿವಾರಸಂತೆ ಮುಖ್ಯ ರಸ್ತೆಯಲ್ಲಿ ಅವರೆದಾಳುವರೆಗೂ ಸುಮಾರು ಏಳು ಮರಗಳು ಬಿದ್ದ ಪರಿಣಾಮ ಹಲವು ವಿದ್ಯುತ್ ಕಂಬಗಳಿಗೆ ಹಾನಿಯಾಗಿದೆ.
ಒಟ್ಟಾರೆ ಕೊಡ್ಲಿಪೇಟೆ ಹೋಬಳಿಯಾದ್ಯಂತ ಸುಮಾರು 30 ಕ್ಕೂ ಅಧಿಕ ವಿದ್ಯುತ್ ಕಂಬಗಳು ನೆಲಕ್ಕುರುಳಿದ್ದು, ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಕೊಡ್ಲಿಪೇಟೆ ಭಾಗದಲ್ಲಿ ವಿದ್ಯುತ್ ಸಮಸ್ಯೆ ನೀಗಿಸಲು ಸೆಸ್ಕ್ ಸಿಬ್ಬಂದಿಗಳು ಸಮರೋಪಾದಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಮನೆ ಕುಸಿತ
ಕೂಡಿಗೆ : ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಹಾರಂಗಿ ಗ್ರಾಮದ ಮಾರಮ್ಮ ಎಂಬವರಿಗೆ ಸೇರಿದ ಮನೆ ಕುಸಿದಿದೆ
ಸ್ಥಳಕ್ಕೆ ಕೂಡುಮಂಗಳೂರು ಗ್ರಾಮ ಪಂಚಾಯತಿ ಸದಸ್ಯ ಬಾಸ್ಕರ್ ನಾಯಕ್ ಗ್ರಾಮ ಲೆಕ್ಕಾಧಿಕಾರಿ ಗುರುದರ್ಶನ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪರಿಹಾರ ನೀಡುವ ಭರವಸೆ ನೀಡಿದ್ದಾರೆ.
ನೂರಾರು ಮನೆಗಳೂ ಜಲಾವೃತ
ಕುಶಾಲನಗರ : ಕುಶಾಲನಗರದಲ್ಲಿ ಕೆಲವು ಬಡಾವಣೆಗಳ ನೂರಾರು ಮನೆಗಳು ಜಲಾವೃತಗೊಂಡಿದ್ದು ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಕಾವೇರಿ ನದಿಯಲ್ಲಿ ಭಾರೀ ಪ್ರವಾಹ ಉಂಟಾಗಿದ್ದು ನದಿಯ ಎರಡೂ ಬದಿಗಳಲ್ಲಿ ತಗ್ಗುಪ್ರದೇಶದ ಎಕರೆಗಟ್ಟಲೆ ಭೂಮಿ ಮುಳುಗಡೆಯಾಗಿದ್ದು ಕುಶಾಲನಗರ ಪಟ್ಟಣದ ವ್ಯಾಪ್ತಿಯ ಕುವೆಂಪು ಬಡಾವಣೆ, ಸಾಯಿ, ಬಸಪ್ಪ, ಶೈಲಜಾ, ಯೋಗಾನಂದ, ರಸೂಲ್ ಮತ್ತು ಇಂದಿರಾ ಬಡಾವಣೆಯ 200 ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿವೆ.
ಕೊಪ್ಪ ಸೇತುವೆ ತಳಭಾಗಕ್ಕೆ ನದಿ ನೀರು ತಲುಪಿದ್ದು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ಮಧ್ಯಾಹ್ನ ವೇಳೆಗೆ ಮೇಲ್ಭಾಗದ ಬಡಾವಣೆಗಳಲ್ಲಿ ಅಲ್ಪ ಪ್ರಮಾಣದ ನೀರು ಇಳಿಕೆಯಾದರೂ ಬಹುತೇಕ ಮನೆಗಳು ಇನ್ನೂ ಮುಳುಗಡೆಯಾಗಿರುವ ದೃಶ್ಯ ಗೋಚರಿಸಿದೆ.
ಕೆರೆಗೆ ಬಿದ್ದ ಮರ
ಚೆಟ್ಟಳ್ಳಿ: ಚೆಟ್ಟಳ್ಳಿಯ ಚೇರಳ ಶ್ರೀಮಂಗಲ ಗ್ರಾಮದ ಕೊಳಂಬೆ ಚಂದ್ರಶೇಖರ್ ಅವರ ಕೆರೆಗೆ ಸಮೀಪದ ತೋಟದ ಬಾರಿ ಗಾತ್ರದ ಮರವೊಂದು ಬಿದ್ದು ಹಾನಿ ಉಂಟಾಗಿದೆ. ಕೆರೆಯಲ್ಲಿದ್ದ ಮೀನುಮರಿಗಳು ಸಾವನ್ನಪ್ಪಿದೆ.
ಕುಶಾಲನಗರ -ಸಿದ್ದಾಪುರ ರಸ್ತೆ ಜಲಾವೃತ
ಗುಡ್ಡೆಹೊಸೂರು : ಇಲ್ಲಿಗೆ ಸಮೀಪದ ತೆಪ್ಪದಕಂಡಿ ಬಳಿ ಸಿದ್ದಾಪುರ ಮುಖ್ಯರಸ್ತೆಯಲ್ಲಿ ಅಪಾರ ಪ್ರಮಾಣದಲ್ಲಿ ನೀರು ತುಂಬಿದ್ದು, ಹಲವಾರು ವಾಹನಗಳು ಆನೆಕಾಡು ಪಕ್ಕದಲ್ಲಿರುವ ಸಿದ್ದಾಪುರ ಸಂಪರ್ಕರಸ್ತೆಯ ಮೂಲಕ ಸಂಚರಿಸುತ್ತಿವೆ.
ಚೆಟ್ಟಳ್ಳಿಯಲ್ಲಿ ಮಳೆಯಿಂದಾಗಿ ಬಾರಿ ನಷ್ಟ
ಚೆಟ್ಟಳ್ಳಿ : ಚೆಟ್ಟಳ್ಳಿ ಗ್ರಾಮಪಂಚಾಯಿತಿಯ ಚೇರಳ ಶ್ರೀಮಂಗಲ ಗ್ರಾಮ ಮುಳ್ಳಂಡ ಧನುಕಾಳಪ್ಪ. ಮುಳ್ಳಂಡ ತಿಮ್ಮಯ್ಯ, ಮುಳ್ಳಂಡ ಕಾಶಿದೇವಯ್ಯ, ಮುಳ್ಳಂಡ ಮಾಯಮ್ಮ ಅವರ ತೋಟದ ಬರೆ ಜರಿದು ನಷ್ಟ ಸಂಭವಿಸಿದೆ. ಮತ್ತೊಂದು ಕಡೆ ಮರಬಿದ್ದ ಪರಿಣಾಮ ತೋಡು ತೊರೆಗಳು ಮುಚ್ಚಿದ ಪರಿಣಾಮ ಕೆಸರು ಮಣ್ಣು ನಾಟಿ ಕಾರ್ಯ ಮುಗಿಸಿದ ಗದ್ದೆಯನ್ನು ಆವರಿಸಿದೆ.
ಗಾಳಿ ಮಳೆಗೆ ಹಾನಿ
ಸುಂಟಿಕೊಪ್ಪ : ಕಂಬಿಬಾಣೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ನಲ್ಲೂರು ಗ್ರಾಮದ ಕುಟ್ಟಿಗೇರಿ ಪೈಸಾರಿಯಲ್ಲಿ ಗಾಳಿ ಮಳೆಯಿಂದ ಮನೆಗಳು ಹಾಗೂ ಸೇತುವೆ ತಡೆಗೋಡೆಗಳು ಮುರಿದು ಬಿದ್ದಿವೆ.
ಚಿಕ್ಲಿಹೊಳೆ ಜಲಾಶಯದ ಹಿನ್ನೀರು ಪ್ರದೇಶವಾದ ಕುಟ್ಟಿಗೇರಿ ಪೈಸಾರಿ ಹೊಳೆಯ ದಡದಲ್ಲಿ 23 ಕುಟುಂಬಗಳು ನೆಲೆಸಿದ್ದು, ಹೊಳೆಯ ನೀರು ಉಕ್ಕಿ ಹರಿದ ಪರಿಣಾಮ ಮುಸ್ತಫಾ ಎಂಬವರ ಮನೆಯು ಸಂಪೂರ್ಣ ನೆಲಸಮಗೊಂಡಿದೆ. ಸೂರ ಮಹಮ್ಮದ್ ಎಂಬವರ ಮನೆಯ ಹಿಂಬದಿಯ ಗೋಡೆ ಕುಸಿದು ಬಿದ್ದಿದೆ. ಪೀಟರ್ ಎಂಬವರ ಮನೆಯು ಹಾನಿಗೊಂಡಿದೆ. ಇದರಿಂದ ಮನೆ ಸೇರಿದಂತೆ ಮನೆಯ ಸಾಮಗ್ರಿಗಳು ಹಾನಿಯಾಗಿದೆ.
ಮಹಾಮಳೆಯಿಂದ ಜಲಚರಗಳಿಗೂ ಹಾನಿ
*ಸಿದ್ದಾಪುರ: ಜಿಲ್ಲೆಯನ್ನು ಕಾಡುತ್ತಿರುವ ಮಹಾಮಳೆ ಕೃಷಿ ಕ್ಷೇತ್ರ, ಮನೆಗಳು ಮಾತ್ರವಲ್ಲದೆ ಜಲಚರಗಳಿಗೂ ಹಾನಿ ಉಂಟು ಮಾಡಿದೆ.
ಚೆಟ್ಟಳ್ಳಿಯ ಚೇರಳ ಶ್ರೀಮಂಗಲ ಗ್ರಾಮದ ಕೊಳಂಬೆ ಚಂದ್ರಶೇಖರ್ ಅವರ ಕೆರೆಯಲ್ಲಿ ಸಾಕಾಣಿಕೆ ಮಾಡಲಾಗಿದ್ದ ಸಾವಿರಾರು ಮೀನುಗಳು ಸತ್ತು ಹೋಗಿವೆ. ಸನಿಹದ ತೋಟದ ಭಾರೀ ಗಾತ್ರದ ಮರವೊಂದು ಬಿದ್ದ ಪರಿಣಾಮ ಕೆರೆಗೆ ಹಾನಿಯಾಗಿರುವುದಲ್ಲದೆ ಮೀನುಗಳೆಲ್ಲ ಸಾವಿಗೀಡಾಗಿವೆ.
ಸೋಮವಾರಪೇಟೆ ತಾ.ಪಂ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಅವರು ಸ್ಥಳಕ್ಕೆ ಭೇಟಿ ನೀಡಿ ನಷ್ಟದ ಬಗ್ಗೆ ಪರಿಶೀಲಿಸಿದರು. ಎರಡರಿಂದ ಮೂರು ಕೆಜಿ ತೂಕದ ಸಾವಿರಾರು ಮೀನುಗಳು ಸಾವಿಗೀಡಾಗಿದ್ದು, ತಾ.ಪಂ ಮೂಲಕ ಸೂಕ್ತ ಪರಿಹಾರ ದೊರಕಿಸಿಕೊಡುವುದಾಗಿ ಮಣಿಉತ್ತಪ್ಪ ಭರವಸೆ ನೀಡಿದರು.
ದುಬಾರೆ ತೀರ ಮುಳುಗಡೆ
ಕಣಿವೆ: ಜಿಲ್ಲೆಯ ಪ್ರಮುಖ ಪ್ರವಾಸಿ ತಾಣ ದುಬಾರೆ ತೀರ ಕಾವೇರಿ ನದಿ ಪ್ರವಾಹದಿಂದಾಗಿ ಮುಳುಗಡೆಯಾಗಿದೆ. ದುಬಾರೆಯ ಹೋಟೆಲ್ ಹಾಗೂ ವಾಣಿಜ್ಯ ಮಳಿಗೆಗಳು ಜಲಾವೃತಗೊಂಡಿವೆ. ಇದರಿಂದಾಗಿ ನಷ್ಟ ಉಂಟಾಗಿದೆ ಎಂದು ಕೆ.ಎಸ್.ರತೀಶ್ ತಿಳಿಸಿದ್ದಾರೆ.
-ವರದಿ : ವಿಜಯ್, ರಾಜುರೈ, ನಾಗರಾಜಶೆಟ್ಟಿ, ನರೇಶ್, ವಾಸು, ಸುಧಿ, ಧರ್ಮ, ಮೂರ್ತಿ, ಗಣೇಶ್, ಕಾಳಯ್ಯ