ಸೋಮವಾರಪೇಟೆ, ಆ. 8: ಕಳೆದ 5 ದಿನಗಳಿಂದ ಕತ್ತಲೆಯಲ್ಲಿದ್ದ ಕಿಬ್ಬೆಟ್ಟ ಗ್ರಾಮಸ್ಥರು ಇಂದು ಸೆಸ್ಕ್ ಇಲಾಖೆಯೊಂದಿಗೆ ಕೈಜೋಡಿಸಿ, ಗ್ರಾಮಕ್ಕೆ ವಿದ್ಯುತ್ ಸಂಪರ್ಕವನ್ನು ಪಡೆದುಕೊಳ್ಳುವಲ್ಲಿ ಸಫಲರಾಗಿದ್ದಾರೆ.
ಭಾರೀ ಗಾಳಿ ಮಳೆಯಿಂದಾಗಿ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಕಲ್ಪಿಸುವ ತಂತಿಗಳ ಮೇಲೆ ಮರಬಿದ್ದು, ಕಂಬಗಳು ತುಂಡಾಗಿದ್ದರಿಂದ ಕಳೆದ 5 ದಿನಗಳಿಂದ ಕಿಬ್ಬೆಟ್ಟ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ಇರಲಿಲ್ಲ. ಪಟ್ಟಣಕ್ಕೆ ಹತ್ತಿರದಲ್ಲೇ ಇರುವ ಗ್ರಾಮವಾದರೂ ಸಹ ವಿದ್ಯುತ್ ಒದಗಿಸಲು ಸೆಸ್ಕ್ ಸಿಬ್ಬಂದಿಗಳಿಗೂ ಸಾಧ್ಯವಾಗಿರಲಿಲ್ಲ.
ಈ ಹಿನ್ನೆಲೆ ಸೆಸ್ಕ್ ಕಚೇರಿಗೆ ತೆರಳಿದ ಗ್ರಾಮಸ್ಥರು, ಓರ್ವ ಲೈನ್ಮೆನ್ನನ್ನು ಗ್ರಾಮಕ್ಕೆ ಕರೆದೊಯ್ದು, ಅವರ ಸೂಚನೆಯಂತೆ ವಿದ್ಯುತ್ ಮಾರ್ಗವನ್ನು ದುರಸ್ತಿಪಡಿಸಿದರು.
ಮರ ಬಿದ್ದು ತುಂಡಾಗಿದ್ದ 4 ವಿದ್ಯುತ್ ಕಂಬಗಳನ್ನು ಸ್ಥಳೀಯರೇ ಬದಲಾಯಿಸಿದರು. ಇದರೊಂದಿಗೆ ವಿದ್ಯುತ್ ಮಾರ್ಗದಲ್ಲಿ ಬಿದ್ದಿದ್ದ ಸುಮಾರು 20ಕ್ಕೂ ಅಧಿಕ ಮರಗಳನ್ನು ತೆರವುಗೊಳಿಸಿ, ಬೆಂಡಾಗಿದ್ದ ಕಂಬಗಳನ್ನು ಸರಿಪಡಿಸಿದರು.
ಮಧ್ಯಾಹ್ನದ ವೇಳೆಗೆ ಶ್ರಮದಾನವೂ ಪೂರ್ಣಗೊಂಡಿದ್ದು, ಮಧ್ಯಾಹ್ನದ ನಂತರ ಗ್ರಾಮಕ್ಕೆ ವಿದ್ಯುತ್ ಸಂಪರ್ಕ ದೊರೆಯಿತು. ಗ್ರಾಮದ ಪ್ರಮುಖರಾದ ಕಿಬ್ಬೆಟ್ಟ ಮಧು, ಗಿರೀಶ್, ನಾರಾಯಣ, ಕುಮಾರ, ಲಿಂಗರಾಜು, ಪ್ರವೀಣ್, ಗಣೇಶ್, ಮಂದಣ್ಣ, ನವೀನ್ ಸೇರಿದಂತೆ 40ಕ್ಕೂ ಅಧಿಕ ಮಂದಿ ಶ್ರಮದಾನದಲ್ಲಿ ಭಾಗಿಯಾಗಿದ್ದರು.