ಮಡಿಕೇರಿ, ಆ. 8: ಸುಂಟಿಕೊಪ್ಪ ಮಹಾಲಕ್ಷ್ಮೀ ತೋಟದಲ್ಲಿ 3 ಕಾಡಾನೆಗಳು ವಾಸ್ತವ್ಯ ಹೂಡಿದ್ದು, ಕಾಫಿ ಗಿಡಗಳು, ಪಂಪ್‍ಸೆಟ್ ಸೇರಿದಂತೆ ತೋಟದ ಮಾಲೀಕ ಅಪ್ಪಯ್ಯ ಅವರ ಮನೆಯ ಅಂಗಳದಲ್ಲಿನ ಗಿಡಗಳನ್ನು ಧ್ವಂಸಪಡಿಸಿವೆ. ಇಂದು ತಮ್ಮ ತೋಟಕ್ಕೆ ಆನೆಗಳು ನುಗ್ಗಿರುವ ಕುರಿತು ಮಾಲೀಕ ಅಪ್ಪಯ್ಯ ಅವರು ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಕುಶಾಲನಗರ ಆರ್.ಎಫ್.ಓ. ಅನನ್ಯಕುಮಾರ್ ಇಲಾಖೆಯ ಸಿಬ್ಬಂದಿಯನ್ನು ಕಳುಹಿಸಿ ಆನೆಯನ್ನು ಅಟ್ಟಿಸಲು ಸೂಚಿಸಿದ್ದಾರೆ. ಸ್ಥಳಕ್ಕೆ ಬಂದ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆ ನಡೆಸಿದ್ದು, ಆನೆಗಳು ಸಿಗದೆ ಹಿಂತೆರಳಿದ್ದಾರೆ.

ಆನೆಗಳ ಹಾವಳಿ ಕುರಿತು ಅಪ್ಪಯ್ಯ ಅವರು ಇಲಾಖೆಗೆ ಕರೆ ಮಾಡಿದ್ದು, ಸ್ಥಳಕ್ಕೆ ಭೇಟಿ ನೀಡಿದ ಸಿಬ್ಬಂದಿ, ಉಸ್ತುವಾರಿ ಸಚಿವರ ಕಾರ್ಯಕ್ರಮ ಇದ್ದುದರಿಂದ ಅವಸರದ ಕಾರ್ಯಾಚರಣೆ ನಡೆಸಿ, ಆನೆಗಳು ಇಲ್ಲ ಎಂದು ಹೇಳಿ ಹಿಂತೆರಳಿದ್ದು, ಸಿಬ್ಬಂದಿ ಹೋದ ನಂತರವೂ ಇಲ್ಲಿ ಆನೆಗಳು ತಮ್ಮ ತೋಟದಲ್ಲೇ ಇದ್ದದ್ದು, ಸಿಬ್ಬಂದಿ ಗಡಿಬಿಡಿಯಿಂದ ವಾಪಾಸು ಹೋಗಿ ರುವುದಾಗಿ ಅಪ್ಪಯ್ಯ ‘ಶಕ್ತಿ’ಯೊಂದಿಗೆ ಅರಣ್ಯ ಇಲಾಖೆ ಸಿಬ್ಬಂದಿಯ ನಿರ್ಲಕ್ಷ್ಯತನದ ಬಗ್ಗೆ ಬೇಸರ ವ್ಯಕ್ತಪಡಿಸಿದ್ದಾರೆ.

ಈ ವ್ಯಾಪ್ತಿಯಲ್ಲಿ ದನಗಳಿಗಿಂತ ಆನೆಗಳೇ ಹೆಚ್ಚಿದ್ದು, ಇವುಗಳು ತೋಟಕ್ಕೆ ನುಗ್ಗಿ ಗಿಡ ಧ್ವಂಸಪಡಿಸುವುದು ಸರ್ವೇ ಸಾಮಾನ್ಯ ವಾಗಿದೆ. ಸೋಲಾರ್ ಬೇಲಿ, ರೈಲು ಕಂಬಿಗಳನ್ನು ಅಳವಡಿಸುವ ಕಾರ್ಯಕ್ಕೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕೆಂದು ಅವರು ಒತ್ತಾಯಿಸಿದ್ದಾರೆ.