ಮಡಿಕೇರಿ, ಆ. 8: ಕೊಡಗು ಜಿಲ್ಲೆಯಲ್ಲಿ ಕಳೆದ ಹಲವು ದಿನಗಳಿಂದ ಭಾರೀ ಗಾಳಿ - ಮಳೆಯೊಂದಿಗೆ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದ್ದ ಪರಿಸ್ಥಿತಿ ಇಂದು ಒಂದಷ್ಟು ತಹಬದಿಗೆ ಬಂದಂತಿದೆ. ಜಿಲ್ಲೆಯಾದ್ಯಂತ ತಾ. 8ರಂದು ವಾಯು - ವರುಣನ ಆರ್ಭಟ ತುಸು ತಗ್ಗಿದಂತಿತ್ತು. ಇದರಿಂದಾಗಿ ಕೆಲದಿನಗಳಿಂದ ಪ್ರಯಾಸದ ಬದುಕು ನಡೆಸುವಂತಾಗಿದ್ದ ಜನರು ಒಂದಷ್ಟುನಿರಾಳಗೊಂಡಿದ್ದಾರೆ. ಆದರೂ ಕಾವೇರಿ, ಲಕ್ಷ್ಮಣತೀರ್ಥ ಸೇರಿದಂತೆ ವಿವಿಧ ನದಿಪಾತ್ರಗಳು, ತೋಡು - ತೊರೆಗಳಲ್ಲಿ ಏರಿಕೆಯಾಗಿರುವ ನೀರಿನ ಮಟ್ಟ ಯಥಾಸ್ಥಿತಿಯಲ್ಲಿ ಮುಂದುವರಿದಿದ್ದು, ಇನ್ನಷ್ಟೆ ಇಳಿಮುಖವಾಗಬೇಕಿದೆ. ಮಳೆ ಇಳಿಮುಖವಾಗಿರುವ ಹಿನ್ನೆಲೆಯಲ್ಲಿ ಬೇತ್ರಿ, ತಾವರೆಕೆರೆ, ಕರಡಿಗೋಡು ಸೇರಿದಂತೆ ಹಲವೆಡೆ ಉಂಟಾಗಿದ್ದ ರಸ್ತೆ ಸಂಪರ್ಕ (ಮೊದಲ ಪುಟದಿಂದ) ಕಡಿತ ಪರಿಸ್ಥಿತಿ ತೆರವುಗೊಳ್ಳುತ್ತಿದೆ. ವರುಣನ ಆರ್ಭಟ ಒಂದಷ್ಟು ತಗ್ಗಿದರೂ ಮೋಡ ಕವಿದ ವಾತಾವರಣ ಮುಂದುವರಿದಿದೆ. ಭಾರೀ ದುರಂತಕ್ಕೆ ಕಾರಣವಾಗಿರುವುದರೊಂದಿಗೆ ಕಳೆದ ನಾಲ್ಕು ದಿನಗಳಿಂದ ಸತತವಾಗಿ ಮಳೆ ಹೆಚ್ಚು ಬೀಳುತ್ತಿದ್ದ ಭಾಗಮಂಡಲ ಹೋಬಳಿಯಲ್ಲಿ ಕಳೆದ ದಿನಗಳಷ್ಟು ತೀವ್ರತೆ ಇಲ್ಲದಿದ್ದರೂ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯ ಇತರ ಹೋಬಳಿಗಳಿಗಿಂತ ಈ ವ್ಯಾಪ್ತಿಯಲ್ಲೇ ಹೆಚ್ಚಿನ ಮಳೆಯಾಗಿವೆ. ಜಿಲ್ಲಾಡಳಿತದ ಮಾಹಿತಿಯಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 4.22 ಇಂಚು ಮಳೆಯಾಗಿದ್ದರೆ, ಭಾಗಮಂಡಲದಲ್ಲಿ 8.22 ಇಂಚು ಮಳೆ ಬಿದ್ದಿದೆ. ಮಡಿಕೇರಿ ತಾಲೂಕಿನಲ್ಲಿ 6.32, ವೀರಾಜಪೇಟೆಯಲ್ಲಿ 4.30 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 1.98 ಇಂಚು ಸರಾಸರಿ ಮಳೆ 24 ಗಂಟೆಯಲ್ಲಿ ದಾಖಲಾಗಿದೆ.

ಹೋಬಳಿವಾರು ವಿವರ

ಮಡಿಕೇರಿ ತಾಲೂಕಿನಲ್ಲಿ ಮಡಿಕೇರಿ ಕ.ಸ.ಬಾ. 3.28, ಸಂಪಾಜೆ 6.96, ಭಾಗಮಂಡಲ 8.22, ನಾಪೋಕ್ಲು 6.81 ಇಂಚು ಮಳೆಯಾಗಿದೆ.

ವೀರಾಜಪೇಟೆ ತಾಲೂಕಿನಲ್ಲಿ ವೀರಾಜಪೇಟೆ ಕ.ಸ.ಬಾ. 4.52, ಹುದಿಕೇರಿ 4.52, ಅಮ್ಮತ್ತಿ 2.36, ಪೊನ್ನಂಪೇಟೆ 4.20, ಶ್ರೀಮಂಗಲ 5.44, ಬಾಳೆಲೆ 4.80 ಇಂಚು ಮಳೆ ಬಿದ್ದಿದೆ.

ಸೋಮವಾರಪೇಟೆ ತಾಲೂಕಿನಲ್ಲಿ ಸೋಮವಾರಪೇಟೆ ಕ.ಸ.ಬಾ. 1.11, ಶಾಂತಳ್ಳಿ 5.16, ಕೊಡ್ಲಿಪೇಟೆ 3.03, ಶನಿವಾರಸಂತೆ 1, ಕುಶಾಲನಗರ 0.45 ಹಾಗೂ ಸುಂಟಿಕೊಪ್ಪಕ್ಕೆ 1.24 ಇಂಚು ಮಳೆಯಾಗಿದೆ.

ಮುಂದುವರಿದ ಪ್ರವಾಹ

ನಾಪೆÇೀಕ್ಲು : ನಾಪೆÇೀಕ್ಲು ವ್ಯಾಪ್ತಿಯಲ್ಲಿ ಇಂದು ಬೆಳಿಗ್ಗೆಯಿಂದ ಮಳೆ ಸಂಪೂರ್ಣ ಸ್ಥಗಿತಗೊಂಡಿದೆ. ಆದರೆ, ಜೀವನದಿ ಕಾವೇರಿ ತುಂಬಿ ಹರಿಯುತ್ತಿದ್ದು, ಕಾವೇರಿ ನದಿ ಪ್ರವಾಹದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡು ಬಂದರೂ ರಸ್ತೆ ಸಂಪರ್ಕ ಕಡಿತ ಮುಂದುವರಿದಿದೆ. ಮಳೆಯ ಪ್ರಮಾಣ ಇದೇ ರೀತಿ ಮುಂದುವರಿದರೆ ರಸ್ತೆ ಸಂಪರ್ಕ ಸಂಚಾರಕ್ಕೆ ಮುಕ್ತವಾಗಲಿದೆ ಎನ್ನುವ ಮಾತುಗಳು ಸಾರ್ವಜನಿಕರಲ್ಲಿ ಕೇಳಿ ಬರುತ್ತಿದೆ. ಉಳಿದಂತೆ ಈ ವ್ಯಾಪ್ತಿಯ ಹೊಳೆ, ತೊರೆ, ತೋಡುಗಳಲ್ಲಿ ಉಂಟಾದ ಪ್ರವಾಹ ಇಳಿಮುಖಗೊಂಡಿದ್ದು, ಎಲ್ಲಾ ರಸ್ತೆ ಸಂಪರ್ಕಗಳು ಸಂಚಾರಕ್ಕೆ ಮುಕ್ತವಾಗಿದೆ. ಗಾಳಿ ಮಳೆ ಪ್ರಮಾಣ ಕಡಿಮೆಗೊಂಡ ಹಿನ್ನೆಲೆಯಲ್ಲಿ ಯಾವುದೇ ಅನಾಹುತ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ.

ಮನೆಯ ಒಳಗೆ ವರತೆ : ನಾಪೆÇೀಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಕೇರಿ ಬೊಮ್ಮಂಜಕೇರಿ ನಿವಾಸಿ ಪುಲ್ಲೇರ ಬಿದ್ದಪ್ಪ ಅವರ ಮನೆಯ ಒಳಗಡೆ ವರತೆ ಕಾಣಿಸಿಕೊಂಡಿದ್ದು, ಸಮಸ್ಯೆ ಉಂಟಾಗಿದೆ. ವರತೆಯಿಂದಾಗಿ ಮನೆ ಒಳಗೆ ಸಂಪೂರ್ಣವಾಗಿ ನೀರು ತುಂಬಿದ್ದು, ಮೋಟಾರ್ ಮೂಲಕ ನೀರು ಹೊರ ಹಾಕುವ ಕಾರ್ಯ ಕೈಗೊಳ್ಳಲಾಗಿದೆ ಎಂದು ಮನೆಯ ಮಾಲಿಕ ಬಿದ್ದಪ್ಪ ‘ಶಕ್ತಿ’ಗೆ ತಿಳಿಸಿದ್ದಾರೆ.

ಮಣ್ಣು ಕುಸಿತ

ಚೆಯ್ಯಂಡಾಣೆ ಗ್ರಾಮ ಪಂಚಾಯಿತಿಯ ಚೇಲಾವರ ಗ್ರಾಮದಲ್ಲಿ ಕೊಳಿಮಾಡು ಕುಟ್ಟಪ್ಪ, ಕಲಾವತಿ, ಕೋಳಿಮಾಡು ಸಣ್ಣಪ್ಪ ಇವರ ಮನೆಗಳು ಭಾಗಶಃ ಹಾನಿಗೆ ತುತ್ತಾಗಿ ವಾಸ ಮಾಡಲು ಯೋಗ್ಯ ಇಲ್ಲದ ರೀತಿಯಲ್ಲಿದೆ. ಸ್ಥಳಕ್ಕೆ ಕಂದಾಯ ಇಲಾಖೆಯ ಅಧಿಕಾರಿಗಳು ಗ್ರಾಮಲೆಕ್ಕಿಗರು ಸ್ಥಳ ಪರಿಶೀಲನೆ ಮಾಡಿದ್ದಾರೆ. ನರಿಯಂದಡ ಗ್ರಾಮದ ತೋಟಂಬೈಲು ಕುಟುಂಬಸ್ಥರ ಐನುಮನೆಯ ಮುಂದೆ ಮಣ್ಣು ಜರಿದು ಹೋಗಿದೆ. ಸುದ್ದಿ ತಿಳಿದು ಸ್ಥಳಕ್ಕೆ ದೌಡಾಯಿಸಿದ ಜಿಲ್ಲಾ ಪಂಚಾಯಿತಿ ಸದಸ್ಯ ನೆಲ್ಲಚಂಡ ಕಿರಣ್ ಕಾರ್ಯಪ್ಪ ಅವರು ಹಾನಿಗೊಳಗಾದ ಕುಟುಂಬ ಸದಸ್ಯರ ಜೊತೆಯಲ್ಲಿ ಮಾತನಾಡಿ ಸರ್ಕಾರದ ಕಂದಾಯ ಇಲಾಖೆಯಿಂದ ಸೂಕ್ತ ಪರಿಹಾರಕ್ಕಾಗಿ ಕಂದಾಯ ಇಲಾಖೆಯ ಅಧಿಕಾರಿಗಳಿಗೆ ಸೂಚನೆ ನೀಡಿ ಒದಗಿಸುವ ಭರವಸೆ ನೀಡಿದ್ದಾರೆ.

ಮಡಿಕೇರಿ ತಾಲೂಕಿನ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕೋಡಿರ ಪ್ರಶನ್ನ ತಮ್ಮಯ್ಯ, ಚೆಯ್ಯಂಡಾಣೆ ಬಿಜೆಪಿ ಸ್ಥಾನೀಯ ಸಮಿತಿ ಅಧ್ಯಕ್ಷ ಪೆÇಕ್ಕಳಂಡ್ರ ಧನೋಜ್, ನರಿಯಂದಡ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಬೆಳಿಯಂಡ್ರ ರತೀಶ್ (ಶರಣು) ನರಿಯಂದಡ - ಎಡಪಾಲ ಕ್ಷೇತ್ರದ ಮಾಜಿ ಪಂಚಾಯಿತಿ ಸದಸ್ಯ ತೋಟಂಬೈಲು ಅನಂತ್‍ಕುಮಾರ್, ಮಡಿಕೇರಿ ಗ್ರಾಮಾಂತರ ಯುವ ಮೋರ್ಚಾ ಸದಸ್ಯ ಪವನ್ ತೋಟಂಬೈಲು ಸ್ಥಳದಲ್ಲಿ ಹಾಜರಿದ್ದರು.

ಬೀಳುವ ಹಂತದಲ್ಲಿ ಮನೆ

ಕುಂದಚೇರಿ ಗ್ರಾ.ಪಂ. ವ್ಯಾಪ್ತಿಯ ಸಿಂಗತ್ತೂರು ಗ್ರಾಮದ ಕುದುಪಜೆ ಗಣಪತಿ ಅವರ ಮನೆಯ ಮುಂದೆ ತಾ. 6ರ ಮಧ್ಯರಾತ್ರಿ ಭಾರೀ ಮಳೆಯಿಂದ ಮಣ್ಣು ಕುಸಿತ ಉಂಟಾಗಿದ್ದು, ಮನೆಯ ಮುಂಭಾಗದ ಅಂಗಳ ಕುಸಿದಿದೆ. ಮನೆಯಲ್ಲಿರುವ 8 ಮಂದಿ ಪಕ್ಕದ ಶೆಡ್‍ನಲ್ಲಿ ವಾಸ್ಯವ್ಯ ಹೂಡಿದ್ದಾರೆ. ಮಧ್ಯರಾತ್ರಿ ಬರೆ ಕುಸಿಯುವ ಸದ್ದು ಕೇಳುತ್ತಿದ್ದಂತೆ ತಕ್ಷಣವೇ ಮನೆಯವರು ಪಕ್ಕದಲ್ಲಿರುವ ಶೆಡ್‍ನಲ್ಲಿ ಆಶ್ರಯ ಪಡೆದಿದ್ದಾರೆ. ಮನೆಯು ಬೀಳುವ ಹಂತದಲ್ಲಿದ್ದು, ಕುಟುಂಬದವರು ಆತಂಕದಲ್ಲಿದ್ದಾರೆ. ಮನೆಯ ಮುಂದಿನ ಗದ್ದೆಯು ಸಂಪೂರ್ಣ ಜಲಾವೃತಗೊಂಡಿದೆ.

ಮನೆಗೆ ಹಾನಿ

ಪೆರಾಜೆ: ಜಿಲ್ಲೆಯಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಗಾಳಿ, ಮಳೆಗೆ ಪೆರಾಜೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದಾಸರಹಿತ್ತಲು ಖದಿಜಮ್ಮ ಅವರ ಮನೆ ಮೇಲೆ ಮರಬಿದ್ದು ಹಾನಿ ಸಂಭವಿಸಿದ ಘಟನೆ ವರದಿಯಾಗಿದೆ.

ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ಹಳೆ ತಾಲೂಕು ಸಮೀಪದ ಕುಂಬಾರಕೇರಿ ನಿವಾಸಿ ಸರ್ಫುದ್ದಿನ್ ಎಂಬವರ ಮನೆ ಗಾಳಿ-ಮಳೆಯಿಂದಾಗಿ ಹಾನಿ.

ಸಂಪರ್ಕ ಕಡಿತ

ಭಾಗಮಂಡಲ ಸನಿಹದ ಅಯ್ಯಂಗೇರಿಯ ಗೊಲ್ಲರ ಕೇರಿ ಹಾಗೂ ಅಯ್ಯಂಗೇರಿ ರಸ್ತೆಯಲ್ಲಿದ್ದ ಸೇತುವೆ ಕುಸಿತಗೊಂಡಿದ್ದು, ಸಂಪರ್ಕ ಕಡಿತಗೊಂಡಿದೆ. ಗೊಲ್ಲರಕೇರಿಗೆ ತೆರಳಿದ್ದ ವಾಹನಗಳು ಇತ್ತ ಬರಲಾರದೆ ಅಲ್ಲಿಯೆ ಸಿಲುಕಿಕೊಂಡಿವೆ.

ಸಣ್ಣಪುಲಿಕೋಟು ಗ್ರಾಮದ ತಿಮ್ಮಯ್ಯ ಅವರ ಮನೆ ಮೇಲೆ ಮರಬಿದ್ದು ಸಂಪೂರ್ಣ ಹಾನಿಯಾಗಿದೆ.

ಮಸೀದಿ ಜಲಾವೃತ

ನಾಪೋಕ್ಲು ಸನಿಹದ ಕೊಟ್ಟಮುಡಿಯಲ್ಲಿ ಕಾವೇರಿ ಪ್ರವಾಹದಿಂದಾಗಿ ಕೊಟ್ಟಮುಡಿ ಮಸೀದಿ ಜಲಾವೃತಗೊಂಡಿದೆ.

ರಸ್ತೆಯಲ್ಲಿ ಹೊಂಡ

ಹೊದ್ದೂರು-ಹೊದವಾಡ, ಕೊಟ್ಟಮುಡಿ ಸಂಪರ್ಕ ರಸ್ತೆ ಮಧ್ಯಭಾಗದಲ್ಲಿ ಹೊಂಡ ನಿರ್ಮಾಣವಾಗಿದ್ದು, ಸಂಪರ್ಕ ಕಡಿತಗೊಂಡಿದೆ.

-ವರದಿ: ಪ್ರಭಾಕರ್, ದುಗ್ಗಳ, ಸುನಿಲ್, ಕಿರಣ್