ಮಡಿಕೇರಿ, ಆ. 8: ಜಿಲ್ಲೆಯಾ ದ್ಯಂತ 5 ದಿನಗಳಿಂದ ಸುರಿಯುತ್ತಿರುವ ತೀವ್ರ ಮಳೆಯಿಂದಾಗಿ ಭೂಕುಸಿತ, ಬರೆ ಕುಸಿತಗಳು ಉಂಟಾಗಿದ್ದು, ತೀವ್ರ ಹಾನಿ ಸಂಭವಿಸಿದೆ. ಹಲವೆಡೆ ರಸ್ತೆ ಸಂಪರ್ಕಗಳು ಕಡಿತವಾಗಿದ್ದು, ಇನ್ನು ಹಲವೆಡೆ ಮನೆ-ಮಠಗಳಿಗೆ ನೀರು ನುಗ್ಗಿದ್ದು, ನಿವಾಸಿಗಳು ಸಂಬಂಧಿಕರ ಮನೆಗೆ ಹಾಗೂ ಪರಿಹಾರ ಕೇಂದ್ರಗಳಿಗೆ ಸ್ಥಳಾಂತರಗೊಂಡಿದ್ದಾರೆ.

ಜಿಲ್ಲೆಯಾದ್ಯಂತ 52 ಸ್ಥಳಗಳನ್ನು ಪ್ರವಾಹ ಪೀಡಿತ ಸ್ಥಳಗಳೆಂದು ಗುರುತಿಸಲಾಗಿದೆ. 14 ಕಡೆಗಳಲ್ಲಿ ಭೂಕುಸಿತ ಉಂಟಾಗಿದೆ. ಒಟ್ಟು 649 ಮಂದಿಗೆ ಜಿಲ್ಲೆಯಾದ್ಯಂತ 9 ಪರಿಹಾರ ಕೇಂದ್ರಗಳಲ್ಲಿ ಆಶ್ರಯ ನೀಡಲಾಗಿದೆ. ಪರಿಹಾರ ಕೇಂದ್ರಗಳಲ್ಲಿನ ಪ್ರತಿಯೊಬ್ಬರಿಗೂ ಕೋವಿಡ್-19 ಪರೀಕ್ಷೆ ನಡೆಸಿ, ಸೋಂಕು ದೃಢಪಟ್ಟಲ್ಲಿ ಆಸ್ಪತ್ರೆಗೆ ಸೇರಿಸಬೇಕಾಗಿ ಹಾಗೂ ‘ನೆಗೆಟಿವ್’ ವರದಿ ಬಂದಲ್ಲಿ ಸಾಮಾಜಿಕ ಅಂತರ ಕಾಯ್ದುಕೊಂಡು ಪರಿಹಾರ ಕೇಂದ್ರಗಳಲ್ಲಿ ಇರಿಸಬೇಕೆಂದು ಸಚಿವ ವಿ. ಸೋಮಣ್ಣ ಇಂದು ನಡೆದ (ಮೊದಲ ಪುಟದಿಂದ) ಸಭೆಯಲ್ಲಿ ಅಧಿಕಾರಿಗಳಿಗೆ ಸೂಚಿಸಿದರು.

ಖಾಸಗಿ ಕಟ್ಟಡದಲ್ಲಿ ಆಶ್ರಯ ಸಿದ್ದಾಪುರ: ನೆಲ್ಲಿಹುದಿಕೇರಿ ಪಟ್ಟಣದ ದಿನೇಶ್ ಎಂಬವರಿಗೆ ಸೇರಿದ ಕಟ್ಟಡದಲ್ಲಿ 14 ಸಂತ್ರಸ್ತ ಕುಟುಂಬಗಳ 50 ಮಂದಿ ಆಶ್ರಯ ಪಡೆಯುತ್ತಿದ್ದಾರೆ ಇವರಿಗೆ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜ್, ಗ್ರಾಮಲೆಕ್ಕಿಗ ಸಂತೋಷ್ ಹಾಗೂ ಪಿಡಿಒ ಅನಿಲ್ ಕುಮಾರ್ ನೇತೃತ್ವದಲ್ಲಿ ಸಂತ್ರಸ್ತರಿಗೆ ಅಗತ್ಯ ಆಹಾರ ಪದಾರ್ಥಗಳನ್ನು ಒದಗಿಸಿಕೊಡಲಾಗುತ್ತಿದೆ. ಈ ಬಾರಿ ಕೊರೊನಾ ವೈರಸ್ ಜಿಲ್ಲೆಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಹೆಚ್ಚಿನ ಮಂದಿ ಸಂತ್ರಸ್ತರು ಪರಿಹಾರ ಕೇಂದ್ರಕ್ಕೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ.

ಸಿದ್ದಾಪುರ: ಕರಡಿಗೋಡು ಗ್ರಾಮದ ನದಿತೀರದಲ್ಲಿ 50ಕ್ಕೂ ಅಧಿಕ ಮನೆಗಳು ಜಲಾವೃತಗೊಂಡಿದ್ದು 15ಕ್ಕೂ ಅಧಿಕ ಮನೆಗಳು ಮುಳುಗಡೆ ಗೊಂಡಿವೆ. ಈ ಹಿನ್ನೆಲೆ ಸಂತ್ರಸ್ತ ಕುಟುಂಬಗಳಿಗೆ ಕರಡಿಗೋಡು ಸರಕಾರಿ ಪ್ರಾಥಮಿಕ ಶಾಲೆ, ಕರಡಿಗೋಡು ಬಸವೇಶ್ವರ ಸಮುದಾಯ ಭವನದಲ್ಲಿ ಆಶ್ರಯ ಕಲ್ಪಿಸಲಾಗಿದೆ.

ವೀರಾಜಪೇಟೆ ತಹಶೀಲ್ದಾರ್ ನಂದೀಶ್‍ಕುಮಾರ್ ನೇತೃತ್ವದಲ್ಲಿ, ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಹರೀಶ್, ಗ್ರಾಮ ಲೆಕ್ಕಿಗ ಅನೀಶ್ ಸ್ಥಳದಲ್ಲಿದ್ದು, ಕಂದಾಯ ಇಲಾಖೆ ವತಿಯಿಂದ ಪರಿಹಾರ ಕೇಂದ್ರದಲ್ಲಿ ಆಹಾರಗಳನ್ನು ತಯಾರಿಸಿ ಸಂತ್ರಸ್ತರಿಗೆ ನೀಡಲಾಗುತ್ತಿದೆ. ಇದಲ್ಲದೆ ಕೊಂಡಂಗೇರಿ ಸಂತ್ರಸ್ತರಿಗೆ ಅಲ್ಲಿನ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಪರಿಹಾರ ಕೇಂದ್ರ ತೆರೆಯಲಾಗಿದೆ ಗ್ರಾಮಲೆಕ್ಕಿಗ ಗೌಡಜ ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸ್ಥಳದಲ್ಲಿ ಹಾಜರಿದ್ದು ಆಹಾರ ಪದಾರ್ಥಗಳನ್ನು ನೀಡಲಾಗುತ್ತಿದೆ.

ಸಿದ್ದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ನದಿತೀರದ ಜಲಾವೃತಗೊಂಡ ಮನೆಗಳಿಗೆ ಗ್ರಾಮ ಪಂಚಾಯಿತಿ ಆಡಳಿತಾಧಿಕಾರಿ ಶಿವಕುಮಾರ್ ಹಾಗೂ ಪಿಡಿಓ ವಿಶ್ವನಾಥ್ ಭೇಟಿ ನೀಡಿ ಅಗತ್ಯ ಕ್ರಮಗಳನ್ನು ಕೈಗೊಂಡಿದ್ದಾರೆ ಅಲ್ಲದೆ ನದಿ ತೀರದ ನಿವಾಸಿಗಳು ಸುರಕ್ಷಿತ ಸ್ಥಳದಲ್ಲಿ ಆಶ್ರಯ ಪಡೆಯುವಂತೆ ಸೂಚನೆ ನೀಡಿದ್ದಾರೆ.

ಜಿಎಂಪಿಎಸ್ ಶಾಲೆ ಕರಡಿಗೋಡು

ಕರಡಿಗೋಡು ಜಿಎಂಪಿಎಸ್ ಶಾಲೆಯನ್ನು ಪರಿಹಾರ ಕೇಂದ್ರವನ್ನಾಗಿ ಮಾರ್ಪಡಿಸಿದ್ದು, 21 ಕುಟುಂಬಗಳನ್ನೊಳಗೊಂಡ 42 ಮಂದಿ ಆಶ್ರಯ ಪಡೆದಿದ್ದಾರೆ. 19 ಪುರುಷರು ಹಾಗೂ 23 ಮಹಿಳೆಯರು ಇಲ್ಲಿ ವಸತಿ ಪಡೆದಿದ್ದು, 4 ಮಂದಿ 10 ವರ್ಷ ಒಳಗಿನವರು ಹಾಗೂ 10 ಮಂದಿ 60 ವರ್ಷಕ್ಕಿಂತ ಮೇಲ್ಪಟ್ಟವರಿದ್ದಾರೆ.

ಬಸವೇಶ್ವರ ಸಮುದಾಯ ಭವನ, ಕರಡಿಗೋಡು

ಬಸವೇಶ್ವರ ಸಮುದಾಯ ಭವನದಲ್ಲಿ 15 ಕುಟುಂಬದ 32 ಮಂದಿ ಆಶ್ರಯ ಪಡೆದಿದ್ದಾರೆ. ಈ ಪೈಕಿ 19 ಪುರುಷರು ಹಾಗೂ 13 ಮಹಿಳೆಯರಿದ್ದಾರೆ. 3 ಮಂದಿ 10 ವರ್ಷದ ಒಳಗಿನವರಾಗಿದ್ದು, ಇಬ್ಬರು 60 ವರ್ಷ ಮೇಲ್ಪಟ್ಟವರಿಗೆ ವಸತಿ ಕಲ್ಪಿಸಲಾಗಿದೆ.

ಜಿಹೆಚ್‍ಎಸ್ ಶಾಲೆ, ಕೊಂಡಂಗೇರಿ

ಜಿ.ಹೆಚ್.ಎಸ್. ಶಾಲೆಯಲ್ಲಿ 8 ಕುಟುಂಬದವರು ವಸತಿ ಪಡೆದಿದ್ದು, 27 ಮಂದಿಗೆ ಆಶ್ರಯ ನೀಡಲಾಗಿದೆ. 11 ಪುರುಷರು ಹಾಗೂ 16 ಮಹಿಳೆಯರು ಇಲ್ಲಿ ತಂಗಿದ್ದಾರೆ. 3 ಮಂದಿ 10 ವರ್ಷದ ಕೆಳಗಿನವರಿದ್ದಾರೆ ಹಾಗೂ 2 ಮಂದಿ 60 ವರ್ಷ ಮೇಲ್ಪಟ್ಟವರಾಗಿದ್ದಾರೆ.

ಭಾಗಮಂಡಲದ ಕಾಶಿಮಠದಲ್ಲಿ 62 ಕುಟುಂಬದ 114 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಭಾಗಮಂಡಲದ ಕೆವಿಜಿಯಲ್ಲಿ 79 ಕುಟುಂಬದ 239 ಮಂದಿ ಆಶ್ರಯ ಪಡೆದುಕೊಂಡಿದ್ದಾರೆ. ಕಡಗದಾಳು ಹಿರಿಯ ಪ್ರಾಥಮಿಕ ಶಾಲೆಯಲ್ಲಿ 15 ಕುಟುಂಬಗಳ 49 ಮಂದಿ ವಾಸ್ತವ್ಯ ಹೂಡಿರುವುದಾಗಿ ಮಡಿಕೇರಿ ತಹಶೀಲ್ದಾರ್ ಮಹೇಶ್ ಮಾಹಿತಿ ನೀಡಿದ್ದಾರೆ.

ಕುಶಾಲನಗರ: ಕುಶಾಲನಗರ ವ್ಯಾಪ್ತಿಯ ವಾಲ್ಮೀಕಿ ಭವನದಲ್ಲಿ ಕಾಳಜಿ ಕೇಂದ್ರ ಪ್ರಾರಂಭಿಸಿದ್ದರೂ ಯಾರೊಬ್ಬರೂ ಕೇಂದ್ರಕ್ಕೆ ತೆರಳಿರುವುದು ಕಂಡುಬಂದಿಲ್ಲ. ಬಹುತೇಕರು ತಮ್ಮ ನೆಂಟರಿಷ್ಟರ ಮನೆ, ಲಾಡ್ಜ್‍ಗಳಲ್ಲಿ ಉಳಿದುಕೊಂಡಿರುವುದಾಗಿ ತಿಳಿದುಬಂದಿದೆ. ಕಾಳಜಿ ಕೇಂದ್ರದಲ್ಲಿ ಎಲ್ಲಾ ರೀತಿಯ ಸೌಲಭ್ಯ ಒದಗಿಸಲಾಗಿದೆ ಎಂದು ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದರಾಜು ತಿಳಿಸಿದ್ದಾರೆ.