ಸಂತ್ರಸ್ತರಿಗೆ ಪರಿಹಾರಧನ ಹೆಚ್ಚಳ

ಬೆಂಗಳೂರು, ಆ. 8: ರಾಜ್ಯದಲ್ಲಿ ಕಳೆದ ಕೆಲವು ದಿನಗಳಿಂದ ಸುರಿಯುತ್ತಿರುವ ಧಾರಾಕಾರ ಮಳೆಯಿಂದಾಗಿ ಮನೆ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಕಳೆದುಕೊಂಡ ಸಂತ್ರಸ್ತರಿಗೆ ರಾಜ್ಯ ಸರ್ಕಾರ ಪರಿಹಾರಧನ ಹೆಚ್ಚಿಸಿದೆ. ಮಳೆಯಿಂದಾಗಿ ಮನೆಯಲ್ಲಿನ ಬಟ್ಟೆ, ದಿನಬಳಕೆ, ಗೃಹೋಪಯೋಗಿ ವಸ್ತುಗಳು ಹಾನಿಗೀಡಾಗಿದ್ದಲ್ಲಿ ಕೇಂದ್ರದ ಮಾರ್ಗಸೂಚಿಯ ಜತೆಗೆ ರಾಜ್ಯ ಸರ್ಕಾರವೂ ಸಹ ಹೆಚ್ಚಿನ ಪರಿಹಾರ ನೀಡಲಿದೆ ಎಂದು ತಿಳಿಸಿದೆ. ಶೇ. 75 ಕ್ಕಿಂತ ಹೆಚ್ಚು ಹಾನಿಗೀಡಾದ ಮನೆಗಳಿಗೆ ಪರಿಷ್ಕೃತ ಮಾರ್ಗಸೂಚಿಯಂತೆ 5 ಲಕ್ಷ ರೂಪಾಯಿ, ಶೇ. 25 ರಿಂದ 75 ರಷ್ಟು ಹಾನಿಗೀಡಾಗಿ, ವಾಸಿಸಲು ಯೋಗ್ಯವಿಲ್ಲದೆ ಪುನರ್ ನಿರ್ಮಾಣ ಮಾಡಲೇಬೇಕಾದ ಮನೆಗಳಿಗೂ ಸಹ 5 ಲಕ್ಷ ರೂಪಾಯಿ, ಶೇ. 25 ರಿಂದ 75 ರಷ್ಟು ಹಾನಿಗೀಡಾಗಿ ದುರಸ್ತಿ ಮಾಡಲು ಸಾಧ್ಯವಿರುವಂತಹ ಮನೆಗಳಿಗೆ 3 ಲಕ್ಷ ರೂಪಾಯಿ, ಶೇ. 15 ರಿಂದ 25 ರಷ್ಟು ಅಲ್ಪ-ಸ್ವಲ್ಪ ಹಾನಿಗೀಡಾದ ಮನೆಗಳಿಗೆ 50 ಸಾವಿರ ರೂಪಾಯಿ ನೆರವು ನೀಡುವುದಾಗಿ ಪ್ರಕಟಿಸಿದೆ.

ವ್ಯಾಪಾರಿಗಳಿಗೆ ಕೊರೊನಾ ಪರೀಕ್ಷೆ

ನವದೆಹಲಿ, ಆ. 8: ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸಬೇಕು ಎಂದು ಕೇಂದ್ರ ಸರ್ಕಾರ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ಕೊರೊನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ ಹೊಸ ನಿರ್ಧಾರ ತೆಗೆದುಕೊಂಡಿದ್ದು, ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವುದು ಸೂಕ್ತ ಎಂದೂ ರಾಜ್ಯ ಸರ್ಕಾರಗಳಿಗೆ ಸೂಚನೆ ನೀಡಿದೆ. ದೇಶಾದ್ಯಂತ ದಿನಬಳಕೆ ವಸ್ತುಗಳ ವ್ಯಾಪಾರಿಗಳು, ದಿನಸಿ ಮತ್ತು ತರಕಾರಿ ವ್ಯಾಪಾರಿಗಳ ಮುಖಾಂತರ ಸೋಂಕು ಪ್ರಸರಣದ ಕುರಿತು ಮಾಹಿತಿ ಲಭ್ಯವಾಗುತ್ತಿದ್ದು, ಇದೇ ಕಾರಣಕ್ಕೆ ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳನ್ನು ಕೊರೊನಾ ಪರೀಕ್ಷೆಗೆ ಒಳಪಡಿಸುವಂತೆ ಕೇಂದ್ರ ಸರ್ಕಾರ ರಾಜ್ಯಗಳಿಗೆ ಸೂಚನೆ ನೀಡಿದೆ. ಈ ಕುರಿತಂತೆ ಕೇಂದ್ರ ಆರೋಗ್ಯ ಸಚಿವಾಲಯದ ಕಾರ್ಯದರ್ಶಿ ರಾಜೇಶ್ ಭೂಷಣ್ ಅವರು, ದಿನಸಿ ಅಂಗಡಿ ಮತ್ತು ತರಕಾರಿ ವ್ಯಾಪಾರಿಗಳ ಮೂಲಕ ಕೋವಿಡ್ ಸೋಂಕು ಹರಡುವ ಸಂಭಾವ್ಯರಾಗಿರುವ ಕಾರಣ, ಅವರಿಗೆಲ್ಲರಿಗೂ ಕೊರೊನಾ ಟೆಸ್ಟ್ ಮಾಡಿಸಬೇಕು ಎಂದು ಸೂಚಿಸಲಾಗಿದೆ ಎಂದು ಅವರು ರಾಜ್ಯ ಸರ್ಕಾರಗಳಿಗೆ ಪತ್ರ ಬರೆದಿದ್ದಾರೆ.

ಸಿಎಜಿ ಆಗಿ ಗಿರೀಶ್ ಚಂದ್ರ ಪ್ರಮಾಣ

ನವದೆಹಲಿ, ಆ. 8: ಭಾರತದ ನೂತನ ಸಿಎಜಿ ಆಗಿ ಗಿರೀಶ್ ಚಂದ್ರ ಮುರ್ಮು ಅವರು ಅಧಿಕೃತವಾಗಿ ಪ್ರಮಾಣ ವಚನ ಸ್ವೀಕಾರ ಮಾಡಿದರು. ದೆಹಲಿಯ ರಾಜಭವನದ ಅಶೋಕ ಹಾಲ್‍ನಲ್ಲಿ ರಾಷ್ಟ್ರಪತಿಗಳ ಎದುರು ಇಂದು ಬೆಳಿಗ್ಗೆ ಗಿರೀಶ್ ಚಂದ್ರ ಮುರ್ಮು ಅವರು ನೂತನ ಸಿಎಜಿ ಆಗಿ ಪ್ರಮಾಣ ವಚನ ಸ್ವೀಕರಿಸಿದರು. ಪ್ರಮಾಣ ವಚನ ಬಳಿಕ ಮರ್ಮು ಅವರು ಸಿಎಜಿ ಕೇಂದ್ರ ಕಚೇರಿಯಲ್ಲಿ ಮಹಾತ್ಮಗಾಂಧಿ ಮತ್ತು ಸಂವಿಧಾನ ಶಿಲ್ಪಿ ಅಂಬೇಡ್ಕರ್ ಅವರ ಭಾವಚಿತ್ರಗಳಿಗೆ ಪುಷ್ಪ ನಮನ ಸಲ್ಲಿಸಿದರು. ಮುರ್ಮು ಅವರು 2024ರ ನವೆಂಬರ್ 20ರವರೆಗೂ ಭಾರತದ ಸಿಎಜಿ ಆಗಿ ಮುಂದುವರೆಯಲಿದ್ದಾರೆ.

ವಿಮಾನ ದುರಂತ : 10 ಲಕ್ಷ ಪರಿಹಾರ

ಕಲ್ಲಿಕೋಟೆ, ಆ. 8: ಕೇರಳ ನಾಗರಿಕ ವಿಮಾನ ದುರಂತದಲ್ಲಿ ಸಾವನ್ನಪ್ಪಿದವರಿಗೆ ತಲಾ ರೂ. 10 ಲಕ್ಷ ಪರಿಹಾರ ನೀಡುವುದಾಗಿ ಕೇಂದ್ರ ನಾಗರಿಕ ವಿಮಾನಯಾನ ಸಚಿವ ಹರ್ದೀಪ್ ಸಿಂಗ್ ಪುರಿ ಹೇಳಿದ್ದಾರೆ. ದುಬೈಯಿಂದ ಮರಳಿದ್ದ ಏರ್‍ಇಂಡಿಯಾ ಎಕ್ಸ್‍ಪ್ರೆಸ್ ವಿಮಾನವು (ಐಎಕ್ಸ್ 1344) ಕೋಯಿಕ್ಕೋಡ್ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‍ವೇಯಿಂದ ಜಾರಿ ಸಮೀಪದ ಕಣಿವೆಗೆ ಬಿದ್ದು ಎರಡು ಹೋಳಾಗಿತ್ತು. ಶುಕ್ರವಾರ ಸಂಜೆ 7.40ಕ್ಕೆ ನಡೆದ ಅವಘಡದಲ್ಲಿ 18 ಮಂದಿ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಇಂದು ವಿಮಾನ ದುರಂತ ಸಂಭವಿಸಿದ ಕಲ್ಲಿಕೋಟೆ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನಾಗರಿಕ ವಿಮಾನಯಾನ ಸಚಿವ ಹರ್‍ದೀಪ್‍ಸಿಂಗ್ ಪುರಿ ಶನಿವಾರ ಭೇಟಿ ನೀಡಿದರು. ಭೇಟಿ ನೀಡಿದ ಬಳಿಕ ಮಾತನಾಡಿರುವ ಹರ್‍ದೀಪ್‍ಸಿಂಗ್‍ಪುರಿ, ಅಪಘಾತಕ್ಕೆ ಈಡಾಗಿರುವ ವಿಮಾನದ ಡಿಜಿಟಲ್ ಫ್ಲೈಟ್ ಡಾಟಾ ರೆಕಾರ್ಡರ್ ಮತ್ತು ಕಾಕ್‍ಪಿಟ್ ವಾಯ್ಸ್ ರೆಕಾರ್ಡರ್‍ಗಳನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ. ವಿಮಾನ ಅಪಘಾತ ತನಿಖಾ ಸಂಸ್ಥೆ (ಎಎಐಬಿ) ತನಿಖೆ ನಡೆಸುತ್ತಿದೆ ಎಂದರು.

ಸೋಂಕಿಗೆ 196 ವೈದ್ಯರ ಸಾವು

ನವದೆಹಲಿ, ಆ. 8: ಕೊರೊನಾ ಸೋಂಕಿನಿಂದ ಈವರೆಗೂ ಭಾರತದಲ್ಲಿ 196 ವೈದ್ಯರು ಪ್ರಾಣ ಕಳೆದುಕೊಂಡಿದ್ದು, ಈ ವಿಚಾರದ ಬಗ್ಗೆ ಗಮನ ಹರಿಸುವಂತೆ ಆಗ್ರಹಿಸಿ ಭಾರತೀಯ ವೈದ್ಯಕೀಯ ಸಂಘ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದೆ. ಐಎಂಎ ಬರೆದ ಪತ್ರದಲ್ಲಿ ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿ ವೈದ್ಯರ ಸಾವುಗಳು ಹೆಚ್ಚುತ್ತಿರುವ ಬಗ್ಗೆ ಕಳವಳಗಳ ವ್ಯಕ್ತಪಡಿಸಲಾಗಿದೆ. ಕೊರೊನಾದಿಂದಾಗಿ ವೈದ್ಯರು ಸೋಂಕಿಗೆ ಒಳಗಾಗುವ ಮತ್ತು ಪ್ರಾಣ ಕಳೆದುಕೊಳ್ಳುವ ಪ್ರಕರಣಗಳು ಹೆಚ್ಚುತ್ತಿವೆ. ಅವರಲ್ಲಿ ಅನೇಕ ಸಾಮಾನ್ಯ ವೈದ್ಯರಿದ್ದಾರೆ ಎಂದು ಬೇಸರ ವ್ಯಕ್ತಪಡಿಸಲಾಗಿದೆ.