ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ತಾ. 5 ರಂದು ನಡೆದ ಭೂಮಿಪೂಜೆ ಸಂದರ್ಭ ಜಿಲ್ಲೆಯಲ್ಲಿಯೂ ವಿವಿಧ ದೇವಾಲಯಗಳಲ್ಲಿ ಹಲವು ಸಂಘಗಳ ವತಿಯಿಂದ ಪೂಜೆ ನಡೆಯಿತು.ಗೋಣಿಕೊಪ್ಪಲು: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ನಿರ್ವಿಘ್ನವಾಗಿ ನಡೆಯುತ್ತಿದ್ದಂತೆಯೇ ವಾಣಿಜ್ಯ ನಗರ ಗೋಣಿಕೊಪ್ಪಲುವಿನಲ್ಲಿ ಜಿಲ್ಲಾ ಪಂಚಾಯಿತಿ ಸದಸ್ಯ ಸಿ.ಕೆ. ಬೋಪಣ್ಣ ಮುಂದಾಳತ್ವದಲ್ಲಿ ನಗರದಲ್ಲಿ ಮುಂಜಾನೆ ಶ್ರೀರಾಮನ ಬೃಹತ್ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಲಾಯಿತು. ಅಲ್ಲದೆ ಭಗವದ್ಧ್ವಜ ಹಾರಿಸಲಾಯಿತು. ಈ ಸಂದರ್ಭ ಹಿಂದೂ ಸಂಘಟನೆಯ ಪ್ರಮುಖರು ಸೇರಿದಂತೆ ಗೋಣಿಕೊಪ್ಪ ಗ್ರಾಮ ಪಂಚಾಯಿತಿ ಸದಸ್ಯ ರಾಮಕೃಷ್ಣ, ಆಟೋ ಮಾಲೀಕರ ಸಂಘದ ಅಧ್ಯಕ್ಷ ಜಪ್ಪು ಸುಬ್ಬಯ್ಯ, ಅನಿಲ್, ಗ್ರಿನೀಶ್ ಸೇರಿದಂತೆ ಇನ್ನಿತರರು ಹಾಜರಿದ್ದರು.ಸಿದ್ದಾಪುರ: ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ನಡೆದ ಭೂಮಿಪೂಜೆ ಕಾರ್ಯಕ್ರಮದ ಪ್ರಯುಕ್ತ ಸಂಘ ಪರಿವಾರದ ವತಿಯಿಂದ ಸಿದ್ದಾಪುರ ಹಾಗೂ ನೆಲ್ಲಿಹುದಿಕೇರಿ ಗ್ರಾಮದ ಶ್ರೀ ಮುತ್ತಪ್ಪ ದೇವಾಲಯದಲ್ಲಿ ಪೂಜೆ ಕೈಂಕರ್ಯ ನಡೆಸಲಾಯಿತು. ಈ ಸಂದರ್ಭ ಹಿಂದೂ ಸಂಘಟನೆಯ ಪ್ರಮುಖರಾದ ಪ್ರವೀಣ್, ಪದ್ಮನಾಭ ಇನ್ನಿತರರು ಹಾಜರಿದ್ದರು.ಚೆಟ್ಟಳ್ಳಿ ನರೇಂದ್ರ ಮೋದಿ ಭವನ: ಚೆಟ್ಟಳ್ಳಿಯ ಶ್ರೀ ನರೇಂದ್ರ ಮೋದಿ ಭವನದಲ್ಲಿ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿ ಉತ್ತಪ್ಪ ಅವರ ನೇತೃತ್ವದಲ್ಲಿ ಸಂಘದ ಪರವಾಗಿ ವಿಶೇಷ ಪೂಜೆ ಸಲ್ಲಿಸಲಾಯಿತು. ಈ ಸಂದರ್ಭ ಚೆಟ್ಟಳ್ಳಿ ಸಹಕಾರ ಸಂಘದ ನಿರ್ದೇಶಕರು ಹಾಗೂ ಸಿಬ್ಬಂದಿಗಳು ಹಾಜರಿದ್ದರು.