ಮಡಿಕೇರಿ, ಆ. 7: ಕೊಡಗು ಜಿಲ್ಲೆಯಾದ್ಯಂತ ಕಳೆದ ಕೆಲವು ದಿನ ಗಳಿಂದ ಸುರಿಯುತ್ತಿರುವ ವರ್ಷಧಾರೆ ಹಾಗೂ ಭಾರೀ ಗಾಳಿಯಿಂದಾಗಿ ಅನಾಹುತಗಳ ಸಂಖ್ಯೆ ಮತ್ತಷ್ಟು ಹೆಚ್ಚಾಗುತ್ತಿದೆ. ಕಳೆದೆರಡು ದಿನಗಳಿಂದ ಉಂಟಾಗಿರುವ ಪ್ರವಾಹ ಪರಿಸ್ಥಿತಿ ಯಥಾಸ್ಥಿತಿಯಲ್ಲಿ ಮುಂದು ವರಿದಿರುವುದು ಒಂದೆಡೆಯಾದರೆ, ಮರಗಳು ಬೀಳುತ್ತಿರುವುದು, ಮನೆ ಕುಸಿತ, ಮಣ್ಣು ಜರಿಯುವಿಕೆ, ಭೂ ಕುಸಿತ, ರಸ್ತೆ ಸಂಪರ್ಕ ಕಡಿತದಂತಹ ಘಟನೆಗಳು ಹೆಚ್ಚುತ್ತಿವೆ. ಧಾರಾಕಾರವಾಗಿ ಎಡೆಬಿಡದೆ ಸುರಿದ ಮಳೆ - ಗಾಳಿಯ ಪರಿಣಾಮವಾಗಿ ಜಿಲ್ಲೆಯು ಹಲವು ರೀತಿಯಲ್ಲಿ ಅಪಾಯಗಳನ್ನು ಎದುರಿಸು ವಂತಾಗಿದೆ. ಈ ತನಕದ ಪರಿಸ್ಥಿತಿಯಿಂದಾಗಿ ಅನಾಹುತಗಳು ಇನ್ನಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ. ಮಳೆಯ ಪ್ರತಾಪ ಇಂದು ತುಸು ಕಡಿಮೆಯಾದಂತೆ ಕಂಡುಬಂದಿದ್ದರೂ, ಇನ್ನೂ ಹಲವು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ಇರುವುದರಿಂದಾಗಿ ಆತಂಕದ ಸನ್ನಿವೇಶ ಮುಂದುವರಿಯುತ್ತಿದೆ.ಭಾಗಮಂಡಲ ವಿಭಾಗದಲ್ಲಿ ಉಂಟಾಗಿರುವ ಪರಿಸ್ಥಿತಿ ಅದೇ ರೀತಿಯಲ್ಲಿದೆ. ತಲಕಾವೇರಿಯಲ್ಲಿ ಬ್ರಹ್ಮಗಿರಿ ಬೆಟ್ಟ ಕುಸಿತದಿಂದಾಗಿ ಕಣ್ಮರೆಯಾಗಿರುವ (ಮೊದಲ ಪುಟದಿಂದ) ಅರ್ಚಕ ಕುಟುಂಬದ ಶೋಧ ಕಾರ್ಯಕ್ಕೆ ಸಿದ್ಧತೆ ನಡೆದಿದೆ. ಎನ್.ಡಿ.ಆರ್.ಎಫ್. ಸೇರಿದಂತೆ ರಕ್ಷಣಾ ಇಲಾಖೆ ಈ ನಿಟ್ಟಿನಲ್ಲಿ ತೀವ್ರ ಕಾರ್ಯಾಚರಣೆಗೆ ಮುಂದಾಗಿದೆ. ಭಾಗಮಂಡಲ ವ್ಯಾಪ್ತಿಯ ರಸ್ತೆ ಸಂಪರ್ಕ ಕಡಿತ, ಬೇತ್ರಿ ಸೇತುವೆಯ ಮೂಲಕ ಸಂಚಾರ ಸ್ಥಗಿತ ಅದೇ ರೀತಿಯಲ್ಲಿದೆ. ಇದರೊಂದಿಗೆ ಮಂಗಳೂರು ರಸ್ತೆಯಲ್ಲಿ ಮದೆನಾಡು ಬಳಿ ರಸ್ತೆ ಕುಸಿತದಿಂದಾಗಿ ರಸ್ತೆ ಸಂಚಾರಕ್ಕೆ ವ್ಯತ್ಯಯವಾಗಿದೆ. ಮಡಿಕೇರಿ - ಕುಶಾಲನಗರ ಮಾರ್ಗದಲ್ಲಿ ತಾವರೆಕೆರೆ- ಗಂಧದ ಕೋಟೆಯಲ್ಲಿ ರಸ್ತೆಯಲ್ಲಿ ನೀರು ನಿಂತಿದ್ದು, ಸಂಚಾರ ಸ್ಥಗಿತಗೊಳಿಸಲಾಗಿದೆ.

ಭಗಂಡ ಸನ್ನಿಧಿಗೆ ನೀರು

ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದೆ. ತಲಕಾವೇರಿ- ಭಾಗಮಂಡಲ ವ್ಯಾಪ್ತಿಯಲ್ಲಿ ಎಡೆಬಿಡದೆ ಮಳೆ ಸುರಿದಿದ್ದು, ತ್ರಿವೇಣಿ ಸಂಗಮದಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ. ಪ್ರವಾಹದ ನೀರು ಭಗಂಡೇಶ್ವರ ದೇವಾಲಯದ ಒಳಗಡೆ ನುಗ್ಗಿ ಜಲಾವೃತಗೊಂಡಿದೆ. ಮಡಿಕೇರಿ - ನಾಪೋಕ್ಲು ರಸ್ತೆಯಲ್ಲೂ ನೀರಿನ ಮಟ್ಟ ಏರಿಕೆಯಾಗಿದೆ. ಕೋರಂಗಾಲ, ಸಣ್ಣಪುಲಿಕೋಟು, ಅಯ್ಯಂಗೇರಿ ಗ್ರಾಮಸ್ಥರಿಗೆ ಯಾವುದೇ ಸಂಪರ್ಕ ಇಲ್ಲದಂತಾಗಿದೆ. ಅನಾಹುತ ಸಂಭವಿಸಿದರೆ ಇವರುಗಳಿಗೆ ಪರಿಹಾರ ಕೇಂದ್ರಕ್ಕೆ ತೆರಳಲೂ ಕೂಡ ಸಾಧ್ಯವಿಲ್ಲದಂತಾಗಿದೆ.

ಚೇರಂಗಾಲದಲ್ಲಿ ಭೂಕುಸಿತ

ಮೊನ್ನೆ ರಾತ್ರಿ ತಲಕಾವೇರಿಯಲ್ಲಿ ಭೂಕುಸಿತವುಂಟಾಗಿದ್ದು, ನಿನ್ನೆ ರಾತ್ರಿ ವೇಳೆ ಚೇರಂಗಾಲದಲ್ಲಿ ಭಾರೀ ಭೂಕುಸಿತವುಂಟಾಗಿದೆ. ಚೇರಂಗಾಲದ ಕೋಡಿಮನೆ ಜನಾರ್ದನ ಹಾಗೂ ರಂಗಪ್ಪ ಅವರುಗಳ ಮನೆಯ ಮೇಲ್ಭಾಗದಿಂದ ಗುಡ್ಡ ಜರಿದು ಬಂದಿದೆ. ಗುಡ್ಡ ಜರಿದು ಬರುತ್ತಿರುವ ಸದ್ದು ಕೇಳಿ ಅಲ್ಲಿದ್ದವರೆಲ್ಲ ಓಡಿ ಹೋಗಿ ದೂರದ ಮನೆಗಳಿಗೆ ಸೇರಿಕೊಂಡಿದ್ದಾರೆ.

ಸಾವಿನಿಂದ ಪಾರು

ಮತ್ತೊಂದು ಕಡೆಯಲ್ಲಿ ಮೆಕ್ಯಾನಿಕ್ ಲವ ಎಂಬವರ ಮನೆಯ ಹಿಂಬದಿ ರಾತ್ರಿ ವೇಳೆ ಸ್ವಲ್ಪ ಮಣ್ಣು ಜರಿದಿದೆ. ಲವ ಅವರು ಅದನ್ನು ತೆರವುಗೊಳಿಸುತ್ತಿದ್ದಾಗ ಇದ್ದಕ್ಕಿದ್ದಂತೆ ಭಾರೀ ಗಾತ್ರದಲ್ಲಿ ಮಣ್ಣು ಜರಿದು ಬರುತ್ತಿರುವುದನ್ನು ಕಂಡ ಲವ ಅಲ್ಲಿಂದ ತಪ್ಪಿಸಿಕೊಂಡು ಓಡಿ ಬಂದಿದ್ದಾರೆ. ಮನೆಯೊಳಗೆ ಒಟ್ಟು 10 ಮಂದಿಯಿದ್ದು, ಅನಾರೋಗ್ಯದಲ್ಲಿರುವ ತಂದೆಯ ಸಹಿತ ಕರೆದುಕೊಂಡು ಹೇಗೋ ಅಲ್ಲಿಂದ ಪಾರಾಗಿ ಬಂದಿದ್ದಾರೆ. ಈ ಎರಡೂ ಕಡೆಗಳಿಗೆ ಸಂಪರ್ಕ ಸಾಧಿಸಲು ಇದ್ದ ಕಾಲು ಸೇತುವೆ ಹಾಗೂ ಮೂರು ಸೇತುವೆಗಳಿಗೆ ಹಾನಿಯಾಗಿದ್ದು, 25ರಿಂದ 30 ಕುಟುಂಬಗಳಿಗೆ ಸಂಪರ್ಕ ಕಡಿತಗೊಂಡಿದೆ. ಅಲ್ಲದೆ, ಯಾವುದೇ ದೂರವಾಣಿ ಸಂಪರ್ಕಗಳು ಲಭ್ಯವಾಗದೆ ದ್ವೀಪದಂತೆ ಅರಣ್ಯ ಪ್ರದೇಶದಲ್ಲಿದ್ದಾರೆ.

ಪರಿಹಾರ ಕೇಂದ್ರಕ್ಕೆ

ಇತ್ತ ಕೋಳಿಕಾಡು ಬಳಿ ಅಪಾಯದಲ್ಲಿದ್ದ 25 ಮಂದಿಯನ್ನು ಭಾಗಮಂಡಲದ ಕಾಶಿಮಠದಲ್ಲಿ ತೆರೆಯಲಾಗಿರುವ ಪರಿಹಾರ ಕೇಂದ್ರಕ್ಕೆ ಸ್ಥಳಾಂತರಿಸಲಾಗಿದೆ. ವಾಜಪೇಯಿ ಶಾಲೆಯಲ್ಲೂ ಪರಿಹಾರ ಕೇಂದ್ರ ತೆರೆಯಲಾಗಿದ್ದು, ಅಪಾಯದ ಸ್ಥಿತಿಯಲ್ಲಿರುವವರು ತಾವಾಗಿಯೇ ಪರಿಹಾರ ಕೇಂದ್ರಕ್ಕೆ ಆಗಮಿಸುತ್ತಿರುವುದು ಕಂಡುಬರುತ್ತಿದೆ.

ನಡುಗುಡ್ಡೆಯಾದ ನಾಪೆÇೀಕ್ಲು

ನಾಪೆÇೀಕ್ಲು, ಆ. 7: ನಾಪೆÇೀಕ್ಲು ವಿಭಾಗದಲ್ಲಿ ಮಳೆಯು ನಿರಂತರವಾಗಿ ಸುರಿಯುತ್ತಿದ್ದು, ನಾಪೆÇೀಕ್ಲು ಪಟ್ಟಣವನ್ನು ಸಂಪರ್ಕಿಸುವ ಎಲ್ಲಾ ರಸ್ತೆಗಳು ಜಲಾವೃತಗೊಂಡು ನಾಪೆÇೀಕ್ಲು ಪಟ್ಟಣ ನಡುಗುಡ್ಡೆಯಂತಾಗಿದೆ.

ಕಾವೇರಿ ನದಿ ಉಕ್ಕಿ ಹರಿಯುತ್ತಿರುವ ಕಾರಣ ಮಡಿಕೇರಿ, ಮೂರ್ನಾಡು ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ಆ ವ್ಯಾಪ್ತಿಗೆ ಸಾರ್ವಜನಿಕರು ತೆರಳದಂತೆ ಪೆÇಲೀಸರು ರಸ್ತೆಯಲ್ಲಿ ಬ್ಯಾರಿಕೇಡ್ ಅಳವಡಿಸಿ ತಡೆಯುಂಟು ಮಾಡಿದ್ದಾರೆ. ನಾಪೆÇೀಕ್ಲು - ಪಾರಾಣೆ ರಸ್ತೆಯ ಕೈಕಾಡು ಬಳಿ ಕಾವೇರಿ ನದಿ ಪ್ರವಾಹ ರಸ್ತೆಯಲ್ಲಿ ಹರಿಯುತ್ತಿದ್ದು, ರಸ್ತೆ ಸಂಪರ್ಕ ಕಡಿತಗೊಂಡಿದೆ. ಅದರಂತೆ ಕೋಟೇರಿಯಲ್ಲಿ ಹೊಳೆ ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡರೆ, ಬಲ್ಲಮಾವಟಿಯಲ್ಲಿಯೂ ಉಂಟಾದ ಪ್ರವಾಹದಿಂದ ರಸ್ತೆ ಸಂಪರ್ಕ ಕಡಿತಗೊಂಡಿದೆ. ಕಕ್ಕಬ್ಬೆ ಹೊಳೆಯಲ್ಲಿ ಪ್ರವಾಹ ಹೆಚ್ಚಾದ ಕಾರಣ ಪಾಡಿ ಶ್ರೀ ಇಗ್ಗುತ್ತಪ್ಪ ದೇವಳ ರಸ್ತೆ ಸಂಪರ್ಕ ಪುನಃ ಕಡಿತಗೊಂಡಿದೆ. ಈ ಪ್ರವಾಹವು ಮುಖ್ಯ ರಸ್ತೆಯಲ್ಲಿ ಹರಿಯುತ್ತಿರುವದರಿಂದ ನಾಪೆÇೀಕ್ಲು- ವೀರಾಜಪೇಟೆ ರಸ್ತೆ ಸಂಪರ್ಕ ಕಡಿತಗೊಂಡಿದೆ.

ಚೆರಿಯಪರಂಬು ಪೈಸಾರಿಯಲ್ಲಿ ನಿರ್ಮಿಸಲಾಗಿದ್ದ ಎಲ್ಲಾ ಮನೆಗಳು ಕಾವೇರಿ ನದಿ ಪ್ರವಾಹದಿಂದ ಮುಳುಗಡೆಯಾಗಿವೆ. ನಾಪೆÇೀಕ್ಲು ಗ್ರಾಮ ಪಂಚಾಯಿತಿಗೆ ಒಳಪಟ್ಟ ನಾಪೆÇೀಕ್ಲು ಗ್ರಾಮದ ನೂರಂಬಡ ಉದಯಶಂಕರ್ ಅವರ ಮನೆಯ ಹಿಂಭಾಗದಲ್ಲಿ ಕಳೆದ ಬಾರಿ ಭೂ ಕುಸಿತ ಉಂಟಾದ ಸ್ಥಳದಲ್ಲಿ ಮತ್ತೇ ಕುಸಿತ ಉಂಟಾಗಿ ನಷ್ಟ ಸಂಭವಿಸಿದೆ. ಮಳೆಯ ಕಾರಣದಿಂದ ಈ ವ್ಯಾಪ್ತಿಯ ಎಲ್ಲಾ ಭತ್ತದ ಗದ್ದೆಗಳು ಸಂಪೂರ್ಣ ಜಲಾವೃತಗೊಂಡಿವೆ.

ಕಳೆದ 24 ಗಂಟೆಗಳಲ್ಲಿ ಈ ವ್ಯಾಪ್ತಿಯ ದೊಡ್ಡಪುಲಿಕೋಟು ಗ್ರಾಮದ ಪಂದೇಟ್ ಎಂಬಲ್ಲಿಗೆ 14.40 ಇಂಚು, ದೊಡ್ಡಪುಲಿಕೋಟುವಿಗೆ 12.58, ಬಲ್ಲಮಾವಟಿಗೆ 10.85 ಇಂಚು, ನಾಪೆÇೀಕ್ಲು ಪಟ್ಟಣಕ್ಕೆ 8.89 ಇಂಚು, ಕುಂಜಿಲ ಗ್ರಾಮಕ್ಕೆ 10 ಇಂಚು, ಕಕ್ಕಬ್ಬೆಗೆ 11 ಇಂಚು ಸರಾಸರಿ ಮಳೆ ಸುರಿದ ಬಗ್ಗೆ ವರದಿಯಾಗಿದೆ.

ಮುಂದುವರಿದ ಕತ್ತಲು: ವರುಣನ ಆರ್ಭಟಕ್ಕೆ ವಿದ್ಯುತ್ ಸಂಪರ್ಕ ಕಡಿತಗೊಂಡ ಪರಿಣಾಮ ಈ ವ್ಯಾಪ್ತಿಯಲ್ಲಿ ಕಾರ್ಗತ್ತಲು ಮುಂದುವರಿದಿದೆ. ಸ್ಥಿತಿವಂತರು ತಮ್ಮ ಅಗತ್ಯಕ್ಕಾಗಿ ಯು.ಪಿ.ಎಸ್‍ಗಳನ್ನು ಅಳವಡಿಸಿದ್ದರೂ ಕೂಡ ಅವುಗಳೂ ಖಾಲಿಯಾಗಿ ಮೊಬೈಲ್ ಚಾರ್ಜ್ ಇಲ್ಲದೆ, ನೆಟ್‍ವರ್ಕ್ ಇಲ್ಲದೆ ಜನ ಪರದಾಡುವ ಪರಿಸ್ಥಿತಿ ಎದುರಾಗಿದೆ. ಇದರಿಂದ ತಮ್ಮ ಆಪ್ತರ, ಸಂಬಂಧಿಕರ ಕಷ್ಟ-ಸುಖಗಳನ್ನು ಕೂಡ ಅರಿಯಲು ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ಜನ.

ನಾಪೋಕ್ಲು - ಮಡಿಕೇರಿ ಮುಖ್ಯರಸ್ತೆಯ ಚೆರಿಯಪರಂಬು ಕೂಡು ರಸ್ತೆ ಜಲಾವೃತಗೊಂಡಿದ್ದು, ಸಂಚಾರ ಕಡಿತಗೊಂಡಿದೆ. ನಾಪೋಕ್ಲುವಿನ ಜೂನಿಯರ್ ಕಾಲೇಜು ಕ್ರೀಡಾಂಗಣ ಹಾಗೂ ದರ್ಗಾ ಜಲಾವೃತಗೊಂಡಿದೆ. ಚೆರಿಯಪರಂಬು ದರ್ಗಾ ಹಿಂಭಾಗ ಪ್ರವಾಹದಿಂದ ಮನೆಯಲ್ಲಿ ಸಿಲುಕಿಕೊಂಡಿದ್ದ ಜನರನ್ನು ಹಾಗೂ ಹೊದವಾಡ ಗ್ರಾಮದ ಕೊಟ್ಟಮುಡಿಯ ಬೊಳಿಬಾಣೆ ಕಾಲೋನಿಯಲ್ಲಿ ಸಿಲುಕಿಕೊಂಡಿದ್ದವರನ್ನು ಎನ್‍ಡಿಆರ್‍ಎಫ್‍ನವರು ರಕ್ಷಣೆ ಮಾಡಿದರು.

ಮರಗೋಡುವಿನ ಬಿದ್ರುಪಣೆ ಗದ್ದೆ ಬಯಲು ಹಾಗೂ ತೋಟ ಜಲಾವೃತಗೊಂಡಿದ್ದು, ಇತ್ತ ಜಿಲ್ಲಾಡಳಿತ ಗಮನ ಹರಿಸುತ್ತಿಲ್ಲ. ಕೇವಲ ಪೊಲೀಸ್ ಇಲಾಖೆ ಸಹಾಯ ಹಸ್ತ ನೀಡಿದೆ ಎಂದು ಗ್ರಾ.ಪಂ. ಮಾಜಿ ಅಧ್ಯಕ್ಷ ಮೋಹನ್ ಆತಂಕ ವ್ಯಕ್ತಪಡಿಸಿದ್ದಾರೆ.

ರಸ್ತೆಗೆ ಬಿದ್ದ ಮಣ್ಣು ತೆರವು

ಭಾಗಮಂಡಲ- ಕರಿಕೆ ರಸ್ತೆಗೆ ನಿನ್ನೆ ಕುಸಿದಿದ್ದ ಮಣ್ಣನ್ನು ಜಿಲ್ಲಾಡಳಿತದ ವತಿಯಿಂದ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

-ಸುನಿಲ್, ಪ್ರಭಾಕರ್, ದುಗ್ಗಳ, ಸುಧೀರ್.