ಮಡಿಕೇರಿ, ಆ. 7: ತಲಕಾವೇರಿ ಕ್ಷೇತ್ರದಲ್ಲಿ ನಿತ್ಯ ಪೂಜೆಯನ್ನು ಬಿಟ್ಟು, ಅಲ್ಲಿಂದ ಬೇರೆಡೆಗೆ ಬರಲು, ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ನಿರಾಕರಿಸಿದ್ದರು ಎನ್ನುವ ಸಂಗತಿ ಬೆಳಕಿಗೆ ಬಂದಿದೆ. ಇಂದು ಸಂಸದ ಪ್ರತಾಪ್ ಸಿಂಹ ಹಾಗೂ ಉಸ್ತುವಾರಿ ಸಚಿವ ವಿ. ಸೋಮಣ್ಣ ಅವರುಗಳೊಂದಿಗೆ, ಆಸ್ಟ್ರೇಲಿಯಾದಲ್ಲಿರುವ ಅವರ ಪುತ್ರಿ ನಮಿತಾ ಈ ವಿಷಯವನ್ನು ಖಚಿತಪಡಿಸಿದ್ದಾರೆ.
ತಾವು ಕೂಡ ತಂದೆ ಜೊತೆ ಮಾತನಾಡಿದಾಗ, ಜುಲೈ ಮತ್ತು ಆಗಸ್ಟ್ ತಿಂಗಳಿನಲ್ಲಿ ತಲಕಾವೇರಿ ಕ್ಷೇತ್ರದ ಪೂಜೆಯ ಜವಾಬ್ದಾರಿ ತಂದೆಯವರದಾಗಿತ್ತು, ಆ ಕಾರಣದಿಂದ ಅವರು ಮನೆಬಿಟ್ಟು ಬೇರೆಡೆಗೆ ಹೋಗಿರಲಿಲ್ಲ ಎಂದು ನಮಿತ ಸಚಿವರ ಗಮನ ಸೆಳೆದಿದ್ದಾರೆ. ಸನ್ನಿಧಿಯ ಅರ್ಚಕರ ಪುತ್ರಿ ಜೊತೆ ಮಾತುಕತೆ ನಡೆಸಿದಾಗ ತನಗೂ ಈ ವಿಷಯ ಪ್ರಸ್ತಾಪಿಸಿದ್ದಾಗಿ ಸಂಸದ ಪ್ರತಾಪ್ ಸಿಂಹ ‘ಶಕ್ತಿ’ಗೆ ತಿಳಿಸಿದರು.ತಲಕಾವೇರಿ ಅರ್ಚಕರಾಗಿ, ಸಂಘ ಪರಿವಾರದ ಹಿರಿಯರಾಗಿ ಟಿ.ಎಸ್. ನಾರಾಯಣಾಚಾರ್ ತೋರುತ್ತಿದ್ದ ಪ್ರೀತಿ, ಆತ್ಮೀಯತೆ ಮರೆಯಲು ಅಸಾಧ್ಯ ಎಂದು ಬಣ್ಣಿಸಿದ ಪ್ರತಾಪ್ ಸಿಂಹ, ಈ ಪುಣ್ಯ ಕ್ಷೇತ್ರದಲ್ಲಿ ಇಂತಹದೊಂದು ದುರಂತ ಎದುರಾಗಿರುವದು ಆಘಾತಕಾರಿ ಎಂದು ಮಾರ್ನುಡಿದರು.
ಪರಿಸ್ಥಿತಿ ನೋಡಿಕೊಂಡು ಎಷ್ಟೇ ಕ್ಲಿಷ್ಟ ಸನ್ನಿವೇಶದಲ್ಲೂ ಕಣ್ಮರೆ ಆಗಿರುವವರ ಪತ್ತೆ ಕಾರ್ಯಕ್ಕೆ ಸರಕಾರ ಮತ್ತು ಜಿಲ್ಲಾಡಳಿತ ಬದ್ಧವಿ ರುವದಾಗಿ ಒತ್ತಿ ಹೇಳಿದ ಸಂಸದರು, ಕೇಂದ್ರದಿಂದಲೂ ಅಗತ್ಯ ನೆರವಿಗೆ ಕೋರುವದಾಗಿ ವಿವರಿಸಿದರು.
ಅಲ್ಲದೆ ವಿದೇಶಗಳಲ್ಲಿರುವ ನಾರಾಯಣಾಚಾರ್ ಪುತ್ರಿಯರಿಬ್ಬರಿಗೆ ಕೊಡಗಿಗೆ ಬರಲು ಅಗತ್ಯ ನೆರವಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಪ್ರಯತ್ನಿಸುವೆ ಎಂದ ಅವರು, ಕೊಡಗಿನ ಜನತೆ ಇಂತಹ ಅಪಾಯ ಎದುರಾಗುವ ಮುನ್ನ ಜಿಲ್ಲಾಡಳಿತದ ಸೂಚನೆ ಪಾಲಿಸುತ್ತಾ, ಸುರಕ್ಷಿತ ಸ್ಥಳಗಳಿಗೆ ಅಥವಾ ಕಾಳಜಿ ಕೇಂದ್ರಗಳಿಗೆ ತೆರಳುವಂತೆ ಸಂಸದರು ಮನವಿ ಮಾಡಿಕೊಂಡರು.