ಏರ್ ಇಂಡಿಯಾ ವಿಮಾನ ಅಪಘಾತ

ಕೇರಳ, ಆ. 7: ದುಬೈನಿಂದ 181 ಪ್ರಯಾಣಿಕರನ್ನು ಹೊತ್ತು ಕೇರಳಕ್ಕೆ ಬರುತ್ತಿದ್ದ ಏರ್ ಇಂಡಿಯಾ ವಿಮಾನ ಕೋಳಿಕ್ಕೊಡ್ ವಿಮಾನ ನಿಲ್ದಾಣ ರನ್‍ವೇನಲ್ಲಿ ಸ್ಕಿಡ್ ಆಗಿದ್ದು, ಅಪ್ಪಳಿಸಿದ ರಭಸಕ್ಕೆ ಎರಡು ಭಾಗವಾಗಿದೆ. ಶುಕ್ರವಾರ ರಾತ್ರಿ 7.40ರ ಸುಮಾರಿಗೆ ಭಾರೀ ಮಳೆಯ ನಡುವೆ ದುರ್ಘಟನೆ ಸಂಭವಿಸಿದ್ದು, ರಕ್ಷಣಾ ಕಾರ್ಯ ನಡೆಯುತ್ತಿದೆ. ಸಾರ್ವಜನಿಕವಾಗಿ ಲಭ್ಯವಾದ ಘಟನಾವಳಿಯ ಮೊದಲ ದೃಶ್ಯಗಳಲ್ಲಿ ವಿಮಾನವು ಎರಡು ತುಂಡುಗಳಾಗಿ ಒಡೆದಿದ್ದು, ಅದರ ಅವಶೇಷಗಳು ರನ್‍ವೇ ಮತ್ತು ಅದರಾಚೆಗೆ ಹರಡಿಕೊಂಡಿವೆ. ಸದ್ಯದ ಮಾಹಿತಿ ಪ್ರಕಾರ ಪೈಲಟ್ ಸೇರಿದಂತೆ ಮೂವರು ಸಾವನ್ನಪ್ಪಿದ್ದು, ಅನೇಕ ಪ್ರಯಾಣಿಕರು ಗಾಯಗೊಂಡಿರುವುದಾಗಿ ತಿಳಿದುಬಂದಿದೆ. ಘಟನಾ ಸ್ಥಳದಲ್ಲಿ ರಕ್ಷಣಾ ಸಿಬ್ಬಂದಿ, ಪೆÇಲೀಸರು ಹಾಗೂ ಆ್ಯಂಬುಲೆನ್ಸ್‍ಗಳು ಬೀಡುಬಿಟ್ಟಿವೆ. ವಿಮಾನಕ್ಕೆ ಬೆಂಕಿ ತಗುಲಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.

6 ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬೆಂಗಳೂರು, ಆ. 7: ರಾಜ್ಯದಲ್ಲಿ ಮುಂಗಾರು ಮಳೆ ತೀವ್ರತೆ ಪಡೆದಿದ್ದು, ಶಿವಮೊಗ್ಗ, ಚಿಕ್ಕಮಗಳೂರು, ಉಡುಪಿ, ದಕ್ಷಿಣ ಕನ್ನಡ, ಕೊಡಗು ಮತ್ತು ಹಾಸನ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಘೋಷಿಸಲಾಗಿದೆ. ಕಳೆದ ಮೂರು ದಿನಗಳಿಂದ ಭಾರೀ ಮಳೆಯಾಗುತ್ತಿರುವ ಹಿನ್ನೆಲೆ ಕರಾವಳಿ ಮತ್ತು ಮಲೆನಾಡು ಜಿಲ್ಲೆಗಳಲ್ಲಿ ವ್ಯಾಪಕ ಹಾನಿಯನ್ನುಂಟಾಗಿದೆ. ಬಂಗಾಳ ಕೊಲ್ಲಿಯಲ್ಲಿಯಲ್ಲಿನ ವಾಯಭಾರ ಕುಸಿದಿಂದಾಗಿ ಕೊಡಗಿನಲ್ಲಿ ಭಾರೀ ಮಳೆಯಾಗುತ್ತಿದೆ. ಕೊಡಗು ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಸಂಭವಿಸಿರುವ ಭೂಕುಸಿತದಿಂದ ಮರಳು ತೆಗೆದುಹಾಕುವ ಕಾರ್ಯಾಚರಣೆಯನ್ನು ರಾಷ್ಟ್ರೀಯ ವಿಪತ್ತು ಪ್ರತಿಕ್ರಿಯೆ ಪಡೆ (ಎನ್‍ಡಿಆರ್‍ಎಫ್) ಆರಂಭಿಸಿದೆ. ಕಾವೇರಿ ನದಿಯ ಮೂಲವಾದ ತಲಕಾವೇರಿ ಬಳಿಯ ಬ್ರಹ್ಮಗಿರಿಯಲ್ಲಿ ಭೂಕುಸಿತ ಸಂಭವಿಸಿದೆ. ಕೊಡಗು ಜಿಲ್ಲೆಯ ಭಾಗಮಂಡಲದಲ್ಲಿ ಭಾರೀ ಮಳೆಯಿಂದ ಬ್ರಹ್ಮಗಿರಿ ಬೆಟ್ಟಗಳಲ್ಲಿ ಭಾರಿ ಭೂಕುಸಿತ ಸಂಭವಿಸಿ, ತಲಕಾವೇರಿ ಅರ್ಚಕ, ಅವರ ಪತ್ನಿ, ಸಹೋದರ ಮತ್ತು ಇಬ್ಬರು ಸಹಾಯಕ ಅರ್ಚಕರು ಸೇರಿದಂತೆ ಐದು ಜನರು ನಾಪತ್ತೆಯಾಗಿದ್ದಾರೆ. ಇವರೆಲ್ಲರನ್ನು ಪತ್ತೆ ಮಾಡಲು ಕಾರ್ಯಾಚರಣೆ ಮುಂದುವರೆದಿದೆ. ಭಾರೀ ಮಳೆ ಪೀಡಿತ ಜಿಲ್ಲೆಗಳ ಎಲ್ಲಾ ಜಿಲ್ಲಾಧಿಕಾರಿಗಳೊಂದಿಗೆ ಸಮಾಲೋಚನೆ ನಡೆಸಿರುವ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂತ್ರಸ್ತ ಕುಟುಂಬಗಳಿಗೆ ರೂ. 10,000 ಮಧ್ಯಂತರ ಪರಿಹಾರ ಮತ್ತು ನೈಸರ್ಗಿಕ ವಿಕೋಪದಿಂದ ಮನೆಗಳು ಸಂಪೂರ್ಣವಾಗಿ ಹಾನಿಗೊಳಗಾದವರಿಗೆ ರೂ. 5 ಲಕ್ಷ ಪರಿಹಾರ ನೀಡುವಂತೆ ಸೂಚಿಸಿದ್ದಾರೆ.

ಶಿಕ್ಷಣ ನೀತಿ ಕುರಿತು ಪ್ರಧಾನಿ ಮಾತು

ನವದೆಹಲಿ, ಆ. 7: ಕೇಂದ್ರ ಸರ್ಕಾರ ಜಾರಿಗೆ ತರಲಿಚ್ಛಿಸಿರುವ ನೂತನ ಶಿಕ್ಷಣ ನೀತಿ ಕುರಿತ ರಾಷ್ಟ್ರೀಯ ಶಿಕ್ಷಣ ನೀತಿಯಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆಯ ಸುಧಾರಣೆಗಳ ಕುರಿತ ಸಮಾವೇಶದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಿ ಮೋದಿ ಮಾತನಾಡಿದರು. ರಾಷ್ಟ್ರೀಯ ಶಿಕ್ಷಣ ನೀತಿ ಅಡಿಯಲ್ಲಿ ಉನ್ನತ ಶಿಕ್ಷಣದಲ್ಲಿ ಪರಿವರ್ತನೆ ಹಾಗೂ ಸುಧಾರಣೆಗಳ ಸಮಾವೇಶವನ್ನು ಉದ್ಘಾಟಿಸಿ ಪ್ರಧಾನಿಯವರು ಮಾತನಾಡಿದರು. ಈ ವೇಳೆ 1986ರಲ್ಲಿ ರೂಪಿಸಲಾಗಿದ್ದ ಶಿಕ್ಷಣ ನೀತಿಯನ್ನು ಬದಲಾವಣೆ ಮಾಡಲಾಗಿದ್ದು, 1986ರಲ್ಲಿ ರೂಪಿಸಲಾಗಿದ್ದ ಶಿಕ್ಷಣ ನೀತಿಯನ್ನು ಬದಲಾವಣೆ ಮಾಡಲಾಗುತ್ತಿದ್ದು, ಅದರ ವಿವರಗಳನ್ನು ಅವರು ಉಲ್ಲೇಖಿಸಿದರು. ಈ ಸಮಾವೇಶ ಅತ್ಯಂತ ಮಹತ್ವದ್ದು. ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರದಲ್ಲಿ ಜಗತ್ತಿಗೆ ವಿಸ್ತೃತವಾದ ತಿಳಿವಳಿಕೆ ಈ ಸಮಾವೇಶದ ಮೂಲಕ ಲಭಿಸಲಿದೆ. ಶಿಕ್ಷಣ ನೀತಿ ಸ್ಪಷ್ಟವಾಗುತ್ತ ಹೋದಂತೆ ಇದರ ಅನುಷ್ಠಾನವೂ ಖಚಿತವಾಗಿ ಆಗಲಿದೆ. ಯಾವುದೇ ವಲಯದವರೂ ಇದನ್ನು ಪೂರ್ವಗ್ರಹ ಪೀಡಿತವಾದುದು ಎಂದು ಟೀಕಿಸಿಲ್ಲ, ಪ್ರಶ್ನೆ ಮಾಡಿಲ್ಲ. ಕಳೆದ 3-4 ವರ್ಷಗಳ ಕಾಲ ಸುದೀರ್ಘ ಚರ್ಚೆ, ಲಕ್ಷಾಂತರ ಸಲಹೆ-ಸೂಚನೆಗಳನ್ನು ಪರಿಶೀಲಿಸಿ ಈ ರಾಷ್ಟ್ರೀಯ ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ ಎಂದರು.

ರೂ. 225ಗೆ ಕೋವಿಡ್-19 ಲಸಿಕೆ

ನವದೆಹಲಿ, ಆ. 7: ಆಕ್ಸ್‍ಫರ್ಡ್ ವಿಶ್ವವಿದ್ಯಾನಿಲಯದ ಕೋವಿಡ್-19 ಲಸಿಕೆ ಉತ್ಪಾದನಾ ಪಾಲುದಾರಿಕೆಯನ್ನು ಹೊಂದಿರುವ ಸೀರಮ್ ಇನ್‍ಸ್ಟಿಟ್ಯೂಟ್ ಆಫ್ ಇಂಡಿಯಾ ರೂ. 225 ನೀಡುವುದಾಗಿ ಪ್ರಕಟಿಸಿದೆ. ಭಾರತ ಸೇರಿದಂತೆ ಕಡಿಮೆ ಮತ್ತು ಮಧ್ಯಮ ಆದಾಯ ಹೊಂದಿರುವ ದೇಶಗಳಿಗೆ 100 ಮಿಲಿಯನ್ ಡೋಸ್ ಕೋವಿಡ್-19 ಲಸಿಕೆಗಳನ್ನು ತಯಾರಿಸಲು ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಫೌಂಡೇಶನ್ 150 ಮಿಲಿಯನ್ ಡಾಲರ್ ಹಣವನ್ನು ಒದಗಿಸುತ್ತದೆ ಎಂದು ಸೀರಮ್ ತಿಳಿಸಿದೆ. ಅಸ್ಟ್ರಾಜೆನೆಕಾ ಪರವಾನಗಿ ಹೊಂದಿರುವ ಆಕ್ಸ್‍ಫರ್ಡ್ ವಿಶ್ವವಿದ್ಯಾ ಲಯದ ಲಸಿಕೆ ಅಭ್ಯರ್ಥಿಯು ಭಾರತ ಮತ್ತು ಇತರ ಹಲವಾರು ದೇಶಗಳಲ್ಲಿ ಕ್ಲಿನಿಕಲ್ ಪ್ರಯೋಗಗಳ ಮುಂದುವರಿದ ಹಂತದಲ್ಲಿದೆ ಮತ್ತು 2021ರ ಮೊದಲಾರ್ಧದಲ್ಲಿ ಸಾರ್ವಜನಿಕ ಬಳಕೆಗೆ ಲಭ್ಯವಾಗುವ ಸಾಧ್ಯತೆಯಿದೆ.

ಚಾರ್ಮಾಡಿ ಘಾಟ್‍ನಲ್ಲಿ ಸಂಚಾರ ಬಂದ್

ಮಂಗಳೂರು, ಆ. 7: ಭಾರೀ ಭೂಕುಸಿತ, ರಸ್ತೆ ಬಿರುಕು ಮತ್ತು ಭಾರೀ ಮಳೆಯಿಂದಾಗಿ ಮರಗಳು ಧರೆಗುಳಿದಿದ್ದರಿಂದ ಚಾರ್ಮಾಡಿ ಘಾಟ್‍ನಲ್ಲಿ (ಎನ್‍ಹೆಚ್-73) ವಾಹನಗಳ ಸಂಚಾರವನ್ನು ಎರಡು ದಿನಗಳ ಕಾಲ ನಿಷೇಧಿಸಲಾಗಿದೆ. ಮಂಗಳೂರು-ವಿಲ್ಲುಪುರಂ ರಾಷ್ಟ್ರೀಯ ಹೆದ್ದಾರಿ 73 ರಲ್ಲಿ ಚಾರ್ಮಡಿ ಘಾಟ್ ರಸ್ತೆಯಲ್ಲಿ ಬಿರುಕುಗಳು ಕಾಣಿಸಿಕೊಂಡಿವೆ. ಮುನ್ನೆಚ್ಚರಿಕೆ ಕ್ರಮವಾಗಿ ಅಧಿಕಾರಿಗಳು ಚಾರ್ಮಡಿ ಮತ್ತು ಕೊಟ್ಟಿಗೆಹಾರ ಚೆಕ್ ಪೋಸ್ಟ್‍ಗಳನ್ನು ಮುಚ್ಚಲಾಗಿದೆ. ಬೆಳ್ತಂಗಡಿ ತಹಶೀಲ್ದಾರ್ ಮಹೇಶ್ ಜೆ. ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆ ಮತ್ತು ಚಿಕ್ಕಮಗಳೂರು ಸಂಪರ್ಕಿಸುವ ಚಾರ್ಮಡಿ ಘಾಟ್ ರಸ್ತೆಯಲ್ಲಿ ಅನೇಕ ಭೂಕುಸಿತ ಸಂಭವಿಸಿದೆ ಎಂದು ದೃಢಪಡಿಸಿದರು. ಭೂಕುಸಿತದ ಅವಶೇಷಗಳನ್ನು ತೆರವುಗೊಳಿಸಲು ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಂ ಹೂಡಿದ್ದು, ವಾಹನ ಸಂಚಾರಕ್ಕಾಗಿ ರಸ್ತೆಯನ್ನು ಮುಚ್ಚಲಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ, ಮತ್ತಷ್ಟು ಭೂಕುಸಿತ ಸಂಭವಿಸುವ ಸಾಧ್ಯತೆ ಇರುವುದರಿಂದ ವಾಹನ ಸಂಚಾರವನ್ನು ಎರಡು ದಿನಗಳ ಕಾಲ ನಿಷೇಧಿಸಲಾಗಿದೆ ಎಂದು ಅವರು ಹೇಳಿದರು.

ಪೆಟ್ಟಿಮುಡಿ ಬೆಟ್ಟ ದುರಂತ : 15 ಸಾವು

ಮುನ್ನಾರ್, ಆ. 7: ಕೇರಳದ ಇಡುಕ್ಕಿ ಜಿಲ್ಲೆಯ ಮುನ್ನಾರ್‍ನ ರಾಜಮಲಾದ ಪೆಟ್ಟಿಮುಡಿ ಬೆಟ್ಟ ಇಂದು ನಸುಕಿನ ಜಾವ ಕುಸಿದು ಬಿದ್ದ ಪರಿಮಾಣ ಸಾವಿನ ಸಂಖ್ಯೆ 15ಕ್ಕೆ ಏರಿಕೆಯಾಗಿದೆ. ಇನ್ನು ಮೃತರ ಕುಟುಂಬಕ್ಕೆ ಪ್ರಧಾನಿ ಮೋದಿ ಅವರು ರೂ. 2 ಲಕ್ಷ ಮತ್ತು ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಿಸಿದ್ದಾರೆ. ಇನ್ನು ಅವಶೇಷಗಳಡಿಯಲ್ಲಿ 80 ಮಂದಿ ಸಿಕ್ಕಿ ಹಾಕಿಕೊಂಡಿದ್ದಾರೆ ಎಂದು ಶಂಕಿಸಲಾಗಿದ್ದು ಸಾವಿನ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ. ಭೂಕುಸಿತಕ್ಕೆ ಕ್ವಾರ್ಟರ್ಸ್ ಮತ್ತು ಚರ್ಚ್ ಧರೆಗುರುಳಿದ್ದು ಹಲವರು ಸಿಕ್ಕಿಹಾಕಿಕೊಂಡಿರಬಹುದು ಎಂದು ಶಂಕಿಸಲಾಗಿದೆ. ಇದುವರೆಗೆ 15 ಮಂದಿಯ ಶವಗಳನ್ನು ಮಣ್ಣಿನಡಿಯಿಂದ ಹೊರತೆಗೆಯಲಾಗಿದೆ. ಪ್ರತಿಕೂಲ ಹವಾಮಾನದಿಂದಾಗಿ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿದೆ. ಏಳು ಮಂದಿಯನ್ನು ಮಣ್ಣಿನಡಿಯಿಂದ ರಕ್ಷಿಸಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಸಿಕ್ಕಿಹಾಕಿಕೊಂಡವರಲ್ಲಿ ಬಹುತೇಕರು ಟೀ ಎಸ್ಟೇಟ್‍ನಲ್ಲಿ ಕೆಲಸ ಮಾಡುವ ಕಾರ್ಮಿಕರಾಗಿದ್ದಾರೆ. ಇಂದು ನಸುಕಿನ ಜಾವ ಈ ದುರಂತ ಸಂಭವಿಸಿದ್ದರಿಂದ ನಿದ್ದೆಯಲ್ಲಿದ್ದ ಜನರಿಗೆ ಬೆಟ್ಟ ಕುಸಿದು ಬೀಳುವಾಗ ಎದ್ದು ಓಡಿಹೋಗಿ ತಪ್ಪಿಸಿಕೊಳ್ಳಲು ಸಮಯ ಇರಲಿಲ್ಲ. ಇದರಿಂದ ಸಾವು-ನೋವು ಹೆಚ್ಚಾಗಿದೆ.

ಗಡಿಯಲ್ಲಿ ಮತ್ತೆ ಗುಂಡಿನ ದಾಳಿ

ಶ್ರೀನಗರ, ಆ. 7: ಇಂಡೋ-ಪಾಕ್ ಗಡಿಯಲ್ಲಿ ಮತ್ತೆ ಪಾಕಿಸ್ತಾನ ಸೈನಿಕರು ಕದನ ವಿರಾಮ ಉಲ್ಲಂಘನೆ ಮಾಡಿದ್ದು, ಭಾರತೀಯ ಪೋಸ್ಟ್‍ಗಳನ್ನು ಗುರಿಯಾಗಿಸಿಕೊಂಡು ನಡೆಸಿದ ಗುಂಡಿನ ದಾಳಿಯಲ್ಲಿ 6 ನಾಗರಿಕರು ಗಾಯಗೊಂಡಿದ್ದಾರೆ. ಕುಪ್ವಾರದ ನೌಗಾಮ್ ಮತ್ತು ಟ್ಯಾಂಗ್ದರ್ ಸೆಕ್ಟರ್‍ನಲ್ಲಿ ಎಲ್‍ಒಸಿಯಲ್ಲಿ ಪಾಕಿಸ್ತಾನ ಸೈನಿಕರು ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದಾರೆ. ಈ ವೇಳೆ ನಡೆದ ಮಾರ್ಟರ್ ದಾಳಿಯಲ್ಲಿ 6 ಮಂದಿ ನಾಗರಿಕರು ಗಾಯಗೊಂಡಿದ್ದಾರೆ. ಆದರೆ ಯಾವುದೇ ಸಾವು ಸಂಭವಿಸಿಲ್ಲ. ಪಾಕಿಸ್ತಾನ ಸೇನೆಯ ದಾಳಿಗೆ ಭಾರತೀಯ ಸೇನೆ ಕೂಡ ತಕ್ಕ ಪ್ರತ್ಯುತ್ತರ ನೀಡುತ್ತಿದ್ದು, ಗುಂಡಿನ ದಾಳಿ ನಡೆಸಿದೆ.