ಕುಶಾಲನಗರ, ಆ. 6: ಹಾರಂಗಿ ಅಣೆಕಟ್ಟೆಯಿಂದ ನದಿಗೆ ನೀರು ಬಿಡುಗಡೆ ಮಾಡುವ ಸಂದರ್ಭ ತೆಗೆದುಕೊಳ್ಳಬೇಕಾದ ತುರ್ತು ಕಾರ್ಯಯೋಜನೆ ಬಗ್ಗೆ ಮೈಸೂರು ಜಿಲ್ಲಾಡಳಿತದ ಹಿರಿಯ ಅಧಿಕಾರಿಗಳು ಹಾರಂಗಿಗೆ ಭೇಟಿ ನೀಡಿ ದಾಖಲೆ ಪರಿಶೀಲನೆ ನಡೆಸಿದರು. ಮೈಸೂರು ಜಿಲ್ಲಾಧಿಕಾರಿ ಅಭಿರಾಮ್ ಜಿ. ಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಮತ್ತಿತರ ಅಧಿಕಾರಿಗಳ ತಂಡ ಹಾರಂಗಿ ಪ್ರವಾಸಿ ಮಂದಿರದಲ್ಲಿ ಹಾರಂಗಿ ಅಣೆಕಟ್ಟೆ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿತು.
ಜಲಾಶಯದಿಂದ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಸಂದರ್ಭ ನದಿ ತಟದ ಗ್ರಾಮಗಳಲ್ಲಿ ತೆಗೆದುಕೊಳ್ಳಬೇಕಾದ ಮುಂಜಾಗ್ರತಾ ಕ್ರಮಗಳು ಹಾಗೂ ಸಂಬಂಧಿಸಿದ ಪ್ರದೇಶಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ಜಿಲ್ಲಾಧಿಕಾರಿ ಅಭಿರಾಂ ಜಿ ಶಂಕರ್, ಯಾವುದೇ ಸಂದರ್ಭ ಜಲಾಶಯದಿಂದ ನೀರು ಬಿಡುಗಡೆಗೊಳಿಸುವ ಸಂದರ್ಭ ನಿಯಮಾನುಸಾರ ಎಲ್ಲಾ ಕ್ರಮಗಳನ್ನು ಅನುಸರಿಸುವಂತೆ ಅಣೆಕಟ್ಟೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮೈಸೂರು ಭಾಗದ ತಟ ಪ್ರದೇಶಗಳಾದ ಆವರ್ತಿ, ಮುತ್ತಿನ ಮುಳ್ಳುಸೋಗೆ, ಗಿರಗೂರು ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಅಪಾಯ ತಡೆಗಟ್ಟಲು ಶೀಘ್ರ ಕ್ರಮಕೈಗೊಳ್ಳುವಂತೆ ಸ್ಥಳದಲ್ಲಿದ್ದ ಕಂದಾಯ ಮತ್ತು ಪೊಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಈ ಸಂದರ್ಭ ಅಣೆಕಟ್ಟೆ ವಿಭಾಗದ ಅಧಿಕಾರಿಗಳಾದ ರಾಜೇಗೌಡ, ಮಹೇಂದ್ರ, ನಾಗರಾಜ್, ಕಿರಣ್ ಮತ್ತಿತರರು ಇದ್ದರು.