ತಲಕಾವೇರಿ ಬೆಟ್ಟ ಕುಸಿತದಿಂದ ಕಣ್ಮರೆಯಾಗಿರುವ ಕ್ಷೇತ್ರದ ಪ್ರಧಾನ ಅರ್ಚಕ ಟಿ.ಎಸ್. ನಾರಾಯಣಾಚಾರ್ ಹಾಗೂ ಇತರ ನಾಲ್ವರು ಕಣ್ಮರೆಯಾಗಿರುವ ಬೆನ್ನಲ್ಲೇ ಕಾವೇರಿ ಪ್ರವಾಹದಲ್ಲಿ ಪಂಚೆ, ಸೀರೆ, ಪೂಜಾ ವಸ್ತುಗಳು ಸೇರಿದಂತೆ ಇತರ ಗೃಹೋಪಯೋಗಿ ಸಾಮಗ್ರಿಗಳು, ನಾಮಾವಶೇಷ ಗೊಂಡಿರುವ ಮನೆಯ ಮಾಡುವಿನ ಕುರುಹುಗಳು ಗೋಚರಿಸಿವೆ. ಅಲ್ಲದೆ ಅರ್ಚಕರ ಮನೆ ಅಂಗಳದಲ್ಲಿ ನಿತ್ಯ ರಾತ್ರಿ ವೇಳೆ ತಂಗುತ್ತಿದ್ದ 20ಕ್ಕೂ ಅಧಿಕ ದನಗಳ ಪೈಕಿ ಒಂದಷ್ಟು ಸಾವನ್ನಪ್ಪುವುದರೊಂದಿಗೆ ಹೊಳೆಯಲ್ಲಿ ಕೊಚ್ಚಿಕೊಂಡು ಹೋಗುವ ದೃಶ್ಯ ಎದುರಾಗಿದೆ. ಒಟ್ಟಿನಲ್ಲಿ ತಡರಾತ್ರಿ ಅಥವಾ ಈ ಬೆಳಗ್ಗಿನ ಜಾವ ಸಂಭವಿಸಿರಬಹುದಾದ ದುರಂತದಿಂದ ತಲಕಾವೇರಿ - ಭಾಗಮಂಡಲ ಮಾತ್ರವಲ್ಲದೆ ಇಡೀ ಜಿಲ್ಲೆಗೆ ಆಘಾತಕಾರಿ ಸುದ್ದಿ ಅಪ್ಪಳಿಸಿದೆ.