ನಾನು ಸಾಮಾನ್ಯ ನೆಗಡಿ, ತಲೆನೋವು ಕಾಣಿಸಿಕೊಂಡ ಕಾರಣ ಮಡಿಕೇರಿಯ ಖಾಸಗಿ ಕ್ಲಿನಿಕ್‍ಗೆ ಹೋಗಿ ಚಿಕಿತ್ಸೆ ಪಡೆದು ಕೊಂಡಿದ್ದೆ. ಎರಡು ದಿನಗಳಲ್ಲಿ ನನ್ನ ನೆಗಡಿ ವಾಸಿಯಾಗಿತ್ತು. ಬಳಿಕ ನಾನು ಎಂದಿನಂತೆ ತೋಟದ ಕೆಲಸಕ್ಕೆ ಹೋಗುತ್ತಿದ್ದೆ. ಸುಮಾರು 20 ದಿನಗಳ ಬಳಿಕ ಜಿಲ್ಲಾ ಆಸ್ಪತ್ರೆಯಿಂದ ಪರೀಕ್ಷೆ ಮಾಡಿಸಿಕೊಳ್ಳುವಂತೆ ಫೆÇೀನ್ ಕರೆಯೊಂದು ಬಂತು. ನಾನು ಆರೋಗ್ಯವಾಗಿಯೇ ಇದ್ದುದರಿಂದ ಆಸ್ಪತ್ರೆಗೆ ಹೋಗದಿದ್ದಾಗ ಆಂಬುಲೆನ್ಸ್ ಮನೆಬಾಗಿಲಿಗೆ ಬಂದು ಕರೆದೊಯ್ಯಿತು. ಪರೀಕ್ಷೆ ಮಾಡಿಸಿಕೊಂಡಾಗ ಪಾಸಿಟಿವ್ ಫಲಿತಾಂಶ ಬಂತು. ಚೆನ್ನಾಗಿದ್ದ ನಾನು ಗಾಬರಿಗೊಂಡೆ. ಕೈ-ಕಾಲು ನಡುಗತೊಡಗಿತು. ಪರೀಕ್ಷೆ ನಡೆಸಿದ ಮಾರನೇ ದಿನವೇ ನನ್ನನ್ನು ನವೋದಯ ಶಾಲೆಗೆ ಕಳುಹಿಸಿದರು. ಇದು ಮಡಿಕೇರಿ ಸಮೀಪದ ಹೆಬ್ಬೆಟ್ಟಗೇರಿ ಗ್ರಾಮದ 48ರ ಹರೆಯದ ಸುರೇಶ್ ಅವರ ಕೊರೊನಾ ಅನುಭವ ಕಥನದ ಸಾರಾಂಶ.

ಮಡದಿ ಹಾಗೂ ಮೂವರು ಮಕ್ಕಳನ್ನು ಹೊಂದಿರುವ ಸುರೇಶ್, ತೋಟದಲ್ಲಿ ಕೂಲಿ ಕೆಲಸ ಮಾಡಿ ಜೀವಿಸುತ್ತಿದ್ದರು. ತಲೆನೋವು, ನೆಗಡಿ ಕಾಣಿಸಿಕೊಂಡ ಕಾರಣ ಜೂನ್ ತಿಂಗಳಿನಲ್ಲಿ ನಗರದ ಖಾಸಗಿ ಕ್ಲಿನಿಕ್ ಒಂದರ ವೈದ್ಯರನ್ನು ಭೇಟಿಯಾದರು. ತೊಂದರೆಯನ್ನು ಕೇಳಿ ತಿಳಿದುಕೊಂಡ ವೈದ್ಯರು ಸುರೇಶ್ ಅವರ ಮೊಬೈಲ್ ಸಂಖ್ಯೆಯನ್ನೂ ಬರೆದುಕೊಂಡಿದ್ದರು. ಚಿಕಿತ್ಸೆಯಿಂದ ಗುಣಮುಖರಾದ ಸುರೇಶ್ ಮತ್ತೆ ತನ್ನ ದುಡಿಮೆಯಲ್ಲಿ ತೊಡಗಿಸಿಕೊಂಡಿದ್ದಾಗ ಒಂದು ದಿನ ಅನಿರೀಕ್ಷಿತ ಫೆÇೀನ್ ಕರೆಯೊಂದು ಬಂತು. ಆಸ್ಪತ್ರೆಗೆ ಬಂದು ಕೋವಿಡ್ ಪರೀಕ್ಷೆ ಮಾಡಿಸಿಕೊಳ್ಳುವಂತೆ ತಿಳಿಸಲಾಯಿತು. ಆರೋಗ್ಯವಾಗಿದ್ದ ಸುರೇಶ್ ಅವರು ಹೋಗದಿದ್ದಾಗ ಆಂಬುಲೆನ್ಸ್ ನಲ್ಲಿ ಕರೆದೊಯ್ಯಲಾಯಿತು.

ಕೊರೊನಾ ಪರೀಕ್ಷೆಯಲ್ಲಿ ಪಾಸಿಟಿವ್ ಎಂದು ಅರಿತಾಗ ಸುರೇಶ್ ಅವರು ತಾನು ಗಾಬರಿಗೊಂಡಿದ್ದೇ ಅಲ್ಲದೆ ಕೈ-ಕಾಲು ಕಂಪಿಸತೊಡಗಿತು ಎನ್ನುತ್ತಾರೆ. ಫಲಿತಾಂಶ ದೊರೆತ ಮರುದಿನವೇ ಅವರನ್ನು ಗಾಳಿಬೀಡಿನ ನವೋದಯ ಶಾಲೆಯಲ್ಲಿ ಸಜ್ಜುಗೊಳಿಸಲಾಗಿದ್ದ ಕೊರೊನಾ ಚಿಕಿತ್ಸಾಲಯಕ್ಕೆ ಕರೆದೊಯ್ಯಲಾಯಿತು.

ವಿಷಯ ತಿಳಿದಾಗ ಮಡದಿ ಮಕ್ಕಳು ಕಂಗಾಲಾದರು. ಕ್ವಾರಂಟೈನ್‍ನಲ್ಲಿ ಇರಬೇಕಾದ ಕಾರಣ ಗಂಡನನ್ನು ಹೋಗಿ ನೋಡಲಾಗದ ಪರಿಸ್ಥಿತಿ ಹೆಂಡತಿಯದ್ದಾಗಿತ್ತು. 9 ದಿನಗಳ ಕಾಲ ನವೋದಯ ಶಾಲೆಯಲ್ಲಿ ಇತರ ಕೋವಿಡ್ ರೋಗಿಗಳೊಂದಿಗೆ ಕಳೆದ ಸುರೇಶ್, ನೆಗೆಟಿವ್ ಫಲಿತಾಂಶ ಬಂದ ದಿನ ಶಾಲೆಯಿಂದ ಬಿಡುಗಡೆಗೊಂಡರು.

ತನಗೆ ಕೊರೊನಾ ಪಾಸಿಟಿವ್ ಎಂದು ತಿಳಿದೊಡನೆ ಹತ್ತಿರವಿದ್ದ ಅನೇಕರು ದೂರಸರಿದರು. ಕೆಲವರು ಮಾತನಾಡುವುದನ್ನೇ ಬಿಟ್ಟರು, ಮನೆ ಮಂದಿ ಕ್ವಾರಂಟೈನ್‍ನಲ್ಲಿ ಇರಬೇಕಾದುದರಿಂದ ಜೀವನ ಕಷ್ಟಕರವಾಗಿ ಪರಿಣಮಿಸಿತು ಎಂದು ‘ಶಕ್ತಿ’ಯೊಂದಿಗೆ ಹೇಳಿಕೊಂಡ ಸುರೇಶ್, ಕಷ್ಟ್ಟಕಾಲದಲ್ಲಿ ಕೆ. ನಿಡುಗಣೆ ಗ್ರಾಮ ಪಂಚಾಯಿತಿ ಸದಸ್ಯ ಅಯ್ಯಪ್ಪ ಆಹಾರಗಳನ್ನು ನೀಡಿದುದನ್ನು ಸ್ಮರಿಸಿಕೊಂಡರಲ್ಲದೆ, ಆಸ್ಪತ್ರೆಯ ವೈದ್ಯರು, ಸಿಬ್ಬಂದಿಗಳು ಚೆನ್ನಾಗಿಯೇ ನೋಡಿಕೊಂಡಿದ್ದಾರೆ ಎಂದರು.

ಕೊರೊನಾ ಪಾಸಿಟಿವ್ ಬಂದವರು ಹೆದರದೆ ಧೈರ್ಯವಾಗಿದ್ದರೆ ಕೆಲವೇ ದಿನಗಳಲ್ಲಿ ಗುಣಮುಖರಾಗಬಹುದು ಎಂದು ಹೇಳುವ ಸುರೇಶ್, ನವೋದಯ ಚಿಕಿತ್ಸಾಲಯದಿಂದ ಗುಣಮುಖರಾಗಿ ಹೊರಬರುವ ದೂರದ ಊರುಗಳಲ್ಲಿನ ಬಡವರು ತಮ್ಮ ಮನೆ ತಲುಪಲು ದುಬಾರಿ ಜೀಪು ಬಾಡಿಗೆ ನೀಡಬೇಕಾದುದರಿಂದ ಅಂತವರನ್ನು ವಾಹನಗಳ ಮೂಲಕ ಮನೆಗೆ ತಲುಪಿಸುವ ವ್ಯವಸ್ಥೆಯನ್ನು ಜಿಲ್ಲಾಡಳಿತ ಮಾಡಿದಲ್ಲಿ ಮಹದುಪಕಾರವಾದೀತು ಎಂದು ಹೇಳಿದರು.