ಪ್ರತ್ಯಕ್ಷ ವರದಿ : ಚಿ.ನಾ. ಸೋಮೇಶ್ ಮಡಿಕೇರಿ, ಆ. 6: ಕೊಡಗಿನ ಕುಲಮಾತೆ ಕಾವೇರಿಯ ಉಗಮ ಸ್ಥಳ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಶ್ರೇಣಿಯಲ್ಲಿ ಭಾರೀ ಭೂಕುಸಿತದಿಂದ ಎರಡು ಮನೆಗಳು ಸಂಪೂರ್ಣ ಧ್ವಂಸಗೊಂಡು, ಕ್ಷೇತ್ರದ ಪ್ರಧಾನ ಅರ್ಚಕರಾದ ಟಿ.ಎಸ್. ನಾರಾಯಣಾಚಾರ್ ಸೇರಿದಂತೆ ಅವರ ಹಿರಿಯ ಸೋದರ, ಪತ್ನಿ ಹಾಗೂ ಇಬ್ಬರು ಸಹಾಯಕ ಅರ್ಚಕರು ಕಣ್ಮರೆಯಾಗಿದ್ದಾರೆ. ಈ ದುರಂತದಲ್ಲಿ ಐವರು ಜೀವಂತ ಸಮಾಧಿಯಾಗಿರುವ ಶಂಕೆಯೊಂದಿಗೆ 20ಕ್ಕೂ ಅಧಿಕ ದನಗಳು ಕೂಡ ಜೀವ ಕಳೆದುಕೊಂಡಿರುವ ಭಯಾನಕ ಚಿತ್ರಣ ಎದುರಾಗಿದೆ.
ಈ ದುರಂತದಲ್ಲಿ ಟಿ.ಎಸ್. ನಾರಾಯಣಾಚಾರ್ (78), ಪತ್ನಿ ಶಾಂತ (70) ಹಾಗೂ ಹಿರಿಯ ಸೋದರ ಆನಂದತೀರ್ಥ ಸ್ವಾಮೀಜಿ (80) ಸೇರಿದಂತೆ ಕ್ಷೇತ್ರದಲ್ಲಿ ಸಹಾಯಕ ಅರ್ಚಕರಾಗಿದ್ದ ಶ್ರೀನಿವಾಸ್ ಪಡಿಲಾಯ (30) ಹಾಗೂ ರವಿಕಿರಣ್ (21) ಕಣ್ಮರೆಯಾಗಿದ್ದಾರೆ. (ಮೊದಲ ಪುಟದಿಂದ) ನಿಖರ ಮಾಹಿತಿ ಇಲ್ಲ : ತಲಕಾವೇರಿಯ ಬೆಟ್ಟ ಸಾಲಿನಲ್ಲಿ ಕಳೆದ ವರ್ಷ ಬ್ರಹ್ಮಗಿರಿ ಶ್ರೇಣಿಯಲ್ಲಿ ಭೂಕುಸಿತದಿಂದ ಹಾನಿಗೊಂಡಿದ್ದ ಸ್ಥಳದಲ್ಲಿ ಮೋರಿಯೊಂದಿಗೆ ತಡೆಗೋಡೆ ನಿರ್ಮಿಸಲಾಗಿದ್ದು, ಅಲ್ಲಿಂದ ನೇರ ಕೇಳಭಾಗದಲ್ಲಿ ನೂರು ಮೀಟರ್ ಅಂತರದಲ್ಲಿ ಪ್ರಧಾನ ಅರ್ಚಕರ ಮನೆಯಿತ್ತು. ಪಕ್ಕದಲ್ಲೇ ಇನ್ನೋರ್ವ ಅರ್ಚಕ ವಿಠಲಾಚಾರ್ ಅವರ ಮನೆಯಿದ್ದು, ಮತ್ತೆ ಭೂಕುಸಿತ ಉಂಟಾಗಿದ್ದರಿಂದ ಈ ಎರಡು ಮನೆಗಳು ನಿರ್ನಾಮಗೊಂಡಿವೆ.
ಆದರೆ ದುರ್ಘಟನೆ ಯಾವ ಹೊತ್ತಿನಲ್ಲಿ ಸಂಭವಿಸಿದೆ ಎಂದು ನಿಖರ ಮಾಹಿತಿ ಇಲ್ಲ. ಬದಲಾಗಿ ಇಂದು ಬೆಳಿಗ್ಗೆ 7 ಗಂಟೆ ಸುಮಾರಿಗೆ ನಾರಾಯಣಾಚಾರ್ ಅವರ ತೋಟ ನೋಡಿಕೊಂಡು ಚಾಲಕರಾಗಿರುವ ತಣ್ಣಿಮಾನಿಯ ಹೆಚ್. ಜಯಂತ್ ತಲಕಾವೇರಿ ಮನೆಗೆ ತೆರಳಿದಾಗ ಭಯಾನಕ ದೃಶ್ಯ ಎದುರಾಗಿದೆ.
ಪೊಲೀಸರಿಗೆ ಮಾಹಿತಿ : ಅನತಿ ದೂರದಲ್ಲಿರುವ ಮತ್ತೋರ್ವ ಅರ್ಚಕ ಕುಟುಂಬವನ್ನೂ ಜಯಂತ್ ವಿಚಾರಿಸಲಾಗಿ; ಮಳೆಯ ತೀವ್ರತೆಯಿಂದ ಮೋಡ ಮುಸುಕಿದ ವಾತಾವರಣದಲ್ಲಿ ಆ ಕುಟುಂಬಕ್ಕೂ ಯಾವುದೇ ವಿಚಾರ ತಿಳಿದಿಲ್ಲ. ಮರುಕ್ಷಣದಲ್ಲಿ ಅವರು ಭಾಗಮಂಡಲ ಠಾಣಾಧಿಕಾರಿ ಮಹದೇವ್ ಅವರಿಗೆ ವಿಷಯ ಮುಟ್ಟಿಸಿದ್ದು, ಠಾಣಾಧಿಕಾರಿ ಜಿಲ್ಲಾಡಳಿತಕ್ಕೆ ಸುದ್ದಿ ತಲುಪಿಸಿದ್ದಾರೆ.
ತಹಶೀಲ್ದಾರ್ ದೌಡು : ದುರಂತದ ತೀವ್ರತೆಯ ಸುದ್ದಿ ತಿಳಿಯುತ್ತಿದ್ದಂತೆ ನೂರಾರು ಗ್ರಾಮಸ್ಥರು ಭಾಗಮಂಡಲದಿಂದ ಕಾಡು ಮೇಡುಗಳ ನಡುವೆ ತಲಕಾವೇರಿ ತೆರಳಿ ಆತಂಕದಿಂದ ಮರಳುತ್ತಿದ್ದರೆ; ಮಡಿಕೇರಿ ತಹಶೀಲ್ದಾರ್ ಪಿ.ಎಸ್. ಮಹೇಶ್, ಭಾಗಮಂಡಲ ಠಾಣಾಧಿಕಾರಿ ಹೆಚ್. ಮಹದೇವ್, ಎನ್.ಡಿ.ಆರ್.ಎಫ್. ತಂಡ ಸಹಿತ ಅರಣ್ಯ, ಅಗ್ನಿಶಾಮಕ ಸಿಬ್ಬಂದಿ ದೌಡಾಯಿಸಿದೆ.
ಶಾಸಕದ್ವಯರ ಭೇಟಿ: ಆ ಬೆನ್ನಲ್ಲೇ ವೀರಾಜಪೇಟೆ ಕ್ಷೇತ್ರದ ಶಾಸಕ ಕೆ.ಜಿ. ಬೋಪಯ್ಯ, ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಇನ್ನಿತರರು ಸ್ಥಳಕ್ಕೆ ಆಗಮಿಸಿ, ದುರಂತದ ಭೀಕರತೆಯಿಂದ ಅಶ್ರುಧಾರೆಯೊಂದಿಗೆ ತಮ್ಮಲ್ಲೆರಿಗೆ ಮಾರ್ಗದರ್ಶಕರಾಗಿದ್ದ ನಾರಾಯಣಾಚಾರ್ ಕುಟುಂಬದ ಕಣ್ಮರೆಯಿಂದ ಶೋಕವನ್ನು ತೋಡಿಕೊಂಡರು.
ಜಿಲ್ಲಾಧಿಕಾರಿ - ಎಸ್ಪಿ ಭೇಟಿ : ತಲಕಾವೇರಿ ಕ್ಷೇತ್ರದ ಪ್ರಧಾನ ಅರ್ಚಕರ ಸಹಿತ ಐವರು ಭೂಸಮಾಧಿಯಾಗಿರುವ ಶಂಕೆ ಬಗ್ಗೆ ಸರಕಾರಕ್ಕೆ ಸಂದೇಶ ರವಾನಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್, ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರ, ಡಿವೈಎಸ್ಪಿ ಬಿ.ಪಿ. ದಿನೇಶ್ಕುಮಾರ್, ಪ್ರಾಕೃತಿಕ ವಿಕೋಪ ನಿರ್ವಹಣಾ ಘಟಕದ ಅಧಿಕಾರಿ ಅನನ್ಯ ವಾಸುದೇವ್ ಸೇರಿದಂತೆ ಅನೇಕರು ಕಾಡು ಮೇಡುಗಳ ನಡುವೆ ನಡೆದುಕೊಂಡು ದುರಂತ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದರು.
ಬಹುಜನ ಪ್ರಿಯರು : ಟಿ.ಎಸ್. ನಾರಾಯಣಾಚಾರ್ ಕ್ಷೇತ್ರದ ಅರ್ಚಕರಷ್ಟೇ ಆಗಿರದೆ ಒಂದೊಮ್ಮೆ ಭಾಗಮಂಡಲ ಪಂಚಾಯತ್ ಮಂಡಲ ಪ್ರಧಾನರಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘ, ಬಿಜೆಪಿ ಒಡನಾಡಿಯಾಗಿದ್ದರು ಎಂದು ಶಾಸಕ ಕೆ.ಜಿ. ಬೋಪಯ್ಯ ಅಶ್ರುಧಾರೆ ಮಿಡಿದರು.
ಆಶ್ರಯಧಾತರು : ತಲಕಾವೇರಿಗೆ ಬರುವ ಭಕ್ತರ ಸಹಿತ ಪ್ರತಿಯೊಬ್ಬರಿಗೆ ತಮ್ಮ ಮನೆಗೆ ಆಹ್ವಾನಿಸಿ ಕ್ಷೇತ್ರ ಮಹಿಮೆಯೊಂದಿಗೆ, ಹಸಿವು ನೀಗಿಸಿ ಕಳುಹಿಸಿಕೊಡುವ ಮೂಲಕ ಎಲ್ಲರಿಗೆ ಆಶ್ರಯಧಾತರಾಗಿದ್ದರು ಎಂದು ಮೇಲ್ಮನೆ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಗುಣಗಾನ ಮಾಡಿದರು.
ಅಯೋಧ್ಯೆಗೆ ತೀರ್ಥ ಪೂಜೆ : ಕಳೆದ ಜುಲೈ 23ರಂದು ಶ್ರೀ ರಾಮ ಜನ್ಮಭೂಮಿ ಅಯೋಧ್ಯೆಗೆ ಕಾವೇರಿ ತೀರ್ಥ ಹಾಗೂ ಮೃತ್ತಿಕೆ ಕಳುಹಿಸಲು ನಾರಾಯಣಾಚಾರ್ ವಿಶೇಷ ಪ್ರಾರ್ಥನೆಯೊಂದಿಗೆ ಮೂರು ದಿನಗಳ ಹಿಂದೆ ಪರಿಸರ ಕಾಳಜಿಯಿಂದ ಗಿಡ ನೆಡುವ ಕಾರ್ಯದಲ್ಲಿ ಭಾಗಿಯಾಗಿದ್ದರು ಎಂದು ಭಾಗಮಂಡಲ ಕ್ಷೇತ್ರದ ನಿವೃತ್ತ ಕಾರ್ಯನಿರ್ವಹಣಾಧಿಕಾರಿ ಎಸ್.ಎಸ್. ಸಂಪತ್ಕುಮಾರ್ ನೆನಪಿಸಿಕೊಂಡರು.
- ಮಾಹಿತಿ ನೆರವು : ಕುಯ್ಯಮುಡಿ ಸುನಿಲ್,
- ಫೋಟೋ ನೆರವು : ಲಕ್ಷ್ಮೀಶ್