ಕಣಿವೆ, ಆ. 6 : ಆಶ್ಲೇಷಾ ಮಳೆ ಗಾಳಿಯ ರೌದ್ರಾವತಾರಕ್ಕೆ ಹಾರಂಗಿ ವ್ಯಾಪ್ತಿಯ ಬಯಲು ಅರೆ ನೀರಾವರಿ ಪ್ರದೇಶದಲ್ಲಿ ರೈತರು ಬೆಳೆದಿದ್ದ ಜೋಳದ ಫಸಲೆಲ್ಲಾ ನೆಲಕ್ಕೆ ಮಲಗಿದ್ದು, ನಷ್ಟ ಉಂಟಾಗಿದೆ. ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅತ್ತೂರು ಗ್ರಾಮದ ಹತ್ತಾರು ರೈತರಿಗೆ ಸೇರಿದ ಎಂಭತ್ತು ಎಕರೆಗಳಿಗೂ ಹೆಚ್ಚು ಪ್ರದೇಶದಲ್ಲಿ ಬೆಳೆದಿದ್ದ ಜೋಳದ ಬೆಳೆ ಗಾಳಿಯ ರಭಸಕ್ಕೆ ಸಿಲುಕಿ ನೆಲಕಚ್ಚಿವೆ. ಗ್ರಾಮದ ಡಿ.ಎಂ.ಹರೀಶ್, ಡಿ.ಎಂ.ಸುರೇಶ್, ಡಿ.ಎಂ.ವಿಶ್ವನಾಥ್, ಲೀಲಾರಾಘವ, ನರೇಂದ್ರ, ಜರ್ಮಿಡಿಸೋಜಾ, ಶಿವದಾಸ, ಭರತ, ಡಿ.ಎಂ. ಗಿರೀಶ ಮೊದಲಾದವರಿಗೆ ಸೇರಿದ ಜೋಳದ ಬೆಳೆ ಹಾಳಾಗಿದೆ. ಈ ಸಂದರ್ಭ ಸ್ಥಳಕ್ಕೆ ತೆರಳಿದ್ದ ಸುದ್ದಿಗಾರರೊಂದಿಗೆ ಮಾತನಾಡಿದ ರೈತರಾದ ಡಿ.ಎಂ.ಹರೀಶ್, ಸುರೇಶ್ ಹನ್ನೆರಡು ಎಕರೆ ಭೂಮಿಯಲ್ಲಿ ಜೋಳ ಬೆಳೆಯಲು ನಂಜರಾಯಪಟ್ಟಣ ಸಹಕಾರ ಸಂಘದಲ್ಲಿ 3.60 ಲಕ್ಷ ಕೃಷಿ ಸಾಲ ಮಾಡಿದ್ದು ಅಷ್ಟೂ ಹಣವನ್ನು ಬೆಳೆಯ ಮೇಲೆ ಖರ್ಚು ಮಾಡಿದ್ದೇವೆ. ಜೋಳ ಇದೀಗ ಹೂವುಗಟ್ಟಿ ಮಾತೆಗಳನ್ನು ಬಿಡುತ್ತಿತ್ತು. ಅಷ್ಟರಲ್ಲಿ ಕಳೆದ ಎರಡು ದಿನಗಳಲ್ಲಿ ಬೀಸಿದ ಮಳೆ ಗಾಳಿಗೆ ನಮ್ಮ ಬೆಳೆಯೆಲ್ಲಾ ನೆಲ ಕಚ್ಚಿದೆ. ಇದೀಗ ನಮಗೆ ದಿಕ್ಕೇ ತೋಚುತ್ತಿಲ್ಲ. ಕೂಡಲೇ ಸಂಬಂಧಿಸಿದ ಕೃಷಿ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ನಮಗೆ ಬೆಳೆ ಪರಿಹಾರ ನೀಡುವ ಜೊತೆಗೆ ಸಹಕಾರ ಸಂಘದಲ್ಲಿ ಪಡೆದಿದ್ದ ಬೆಳೆ ಸಾಲವನ್ನು ಪ್ರಕೃತಿ ಪರಿಹಾರ ಯೋಜನೆಯಡಿ ಮನ್ನಾ ಮಾಡಬೇಕು ಎಂದು ಒತ್ತಾಯಿಸಿದ್ದಾರೆ. ಹಾಗೆಯೇ ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷ ಶ್ರೀನಿವಾಸ್ ಅವರ ಜೋಳದ ಬೆಳೆಯೂ ಇದೇ ರೀತಿ ನೆಲಕಚ್ಚಿದೆ. ಇಲ್ಲಿನ ಪ್ರಗತಿಪರ ಕೃಷಿಕ ಜರ್ಮಿ ಡಿಸೋಜಾ ಅವರ ಬೆಳೆಯೂ ಹಾಳಾಗಿದೆ. ಕೂಡಲೇ ತಹಶೀಲ್ದಾರರು ಸ್ಥಳಕ್ಕೆ ಧಾವಿಸಿ ರೈತರಾದ ನಮ್ಮ ಸಂಕಟ ಅರಿಯ ಬೇಕು. ನಮಗೆ ಬೆಳೆ ಪರಿಹಾರವನ್ನು ಸ್ಥಳದಲ್ಲಿಯೇ ಘೋಷಿಸಬೇಕೆಂದು ರೈತರು ಆಗ್ರಹಿಸಿದ್ದಾರೆ.