ತಲಕಾವೇರಿಯ ಪರಿಸ್ಥಿತಿ ಖುದ್ದು ವೀಕ್ಷಿಸಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾ ಮಿಶ್ರಾ ಅವರುಗಳು ಇಂದಿನ ದುರಂತದ ಕುರಿತು ‘ಶಕ್ತಿ’ಯೊಂದಿಗೆ ತೀವ್ರ ವಿಷಾಧದೊಂದಿಗೆ ಆತಂಕವನ್ನು ವ್ಯಕ್ತಪಡಿಸಿದರು.ಒಂದೆಡೆ ಭಾಗಮಂಡಲದಲ್ಲಿ ಜಲಾವೃತಗೊಂಡಿರುವ ರಸ್ತೆಗಳು, ತಲಕಾವೇರಿ ಮಾರ್ಗದ ಉದ್ದಕ್ಕೂ ಭೂಕುಸಿತ ಹಾಗೂ ವಿಪರೀತ ಗಾಳಿ ಮಳೆಯಿಂದ ಕಣ್ಮರೆಯಾದವರ ಪತ್ತೆ ಕಾರ್ಯ ಸಾಧ್ಯವಾಗುತ್ತಿಲ್ಲವೆಂದು ವಿಷಾಧಿಸಿದರು. ಹೀಗಾಗಿ ಎನ್‍ಡಿಆರ್‍ಎಫ್ ಸಹಿತ ಕಾರ್ಯಾಚರಣೆ ಪಡೆಯನ್ನು ಅಪಾಯದ ಕಾರಣ ಹಿಂದಕ್ಕೆ ಕರೆಸಿಕೊಳ್ಳಲಾಗಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.ಕಾರ್ಯಾಚರಣೆ ವಿಳಂಬ (ಮೊದಲ ಪುಟದಿಂದ) ದುರಂತ ಸ್ಥಳಕ್ಕೆ ಹಿಟಾಚಿ ಯಂತ್ರದ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಸದ್ಯ ರಸ್ತೆ ತೆರವಿಗೆ ಒಂದು ಜೆಸಿಬಿ ಯಂತ್ರ ಕಾರ್ಯಾಚರಿಸುತ್ತಿದೆ ಎಂದು ಸ್ಪಷ್ಟಪಡಿಸಿದರು. ದುರಂತ ಸ್ಥಳದಲ್ಲಿ ಜಲಪ್ರವಾಹ ಹಾಗೂ ಕೆಸರುಮಯ ಪರಿಸ್ಥಿತಿಯಿಂದ ಯಾವುದೇ ಕಾರ್ಯಾಚರಣೆ ಸಾಧ್ಯವಾಗದ ಕಾರಣ ತಾ. 7 ರಂದು (ಇಂದು) ಪರಿಸ್ಥಿತಿ ನೋಡಿಕೊಂಡು ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದರು.

ಸ್ಥಳೀಯರಿಗೆ ಮನವಿ: ದುರಂತ ನಡುವೆ ಕಣ್ಮರೆಯಾಗಿರುವ ಕುಟುಂಬಕ್ಕೆ ಅಪಾಯದ ಕಾರಣ ಬೇರೆಡೆಗೆ ಸ್ಥಳಾಂತರಕ್ಕೆ ಈ ಮೊದಲು ಸೂಚಿಸಿದ್ದರೂ, ಒಲವು ತೋರಿರಲಿಲ್ಲ ಎಂದು ನೆನಪಿಸಿದ ಜಿಲ್ಲಾಧಿಕಾರಿ, ಈ ವ್ಯಾಪ್ತಿಯಲ್ಲಿ ಮಳೆ ತೀವ್ರತೆ ನಡುವೆ ಇನ್ನಷ್ಟು ಅಪಾಯ ಉಂಟಾಗದಂತೆ ಗ್ರಾಮಸ್ಥರು ಮತ್ತು ಗ್ರಾ.ಪಂ. ಮುಂಜಾಗ್ರತೆ ವಹಿಸಲು ಸೂಚಿಸಲಾಗಿದೆ ಎಂದರಲ್ಲದೆ, ಅಲ್ಲಿನ ಸ್ಥಳೀಯರಿಗೆ ಬದಲಿ ವ್ಯವಸ್ಥೆಗೆ ಮನವಿ ಮಾಡಿಕೊಳ್ಳಲಾಗಿದೆ ಎಂದರು.