ಮಡಿಕೇರಿ, ಆ. 6: ಮಡಿಕೇರಿ ತಾಲೂಕಿನ ಮರಗೋಡು ವ್ಯಾಪ್ತಿಯ ಕಟ್ಟೆಮಾಡು ಪರಂಬು ಪೈಸಾರಿಯಲ್ಲಿ ನೆಲೆಸಿದ್ದ ಒಂಟಿ ವೃದ್ಧೆಯನ್ನು ಕೊಲೆಮಾಡಿ ಚಿನ್ನಾಭರಣಗಳನ್ನು ದೋಚಿ ತಲೆಮರೆಸಿಕೊಂಡಿದ್ದ ವ್ಯಕ್ತಿಯನ್ನು ಪತ್ತೆಹಚ್ಚುವಲ್ಲಿ ಕೊಡಗು ಜಿಲ್ಲಾ ಅಪರಾಧ ಪತ್ತೆದಳದ ಅಧಿಕಾರಿ ಹಾಗೂ ಸಿಬ್ಬಂದಿಯವರು ಯಶಸ್ವಿಯಾಗಿದ್ದಾರೆ.
ತಾ.3ರಂದು ಮರಗೋಡು ವ್ಯಾಪ್ತಿಯ ಕಟ್ಟೆಮಾಡಿನ ಪರಂಬು ಪೈಸಾರಿಯಲ್ಲಿ ಕೂಲಿ ಕೆಲಸ ಮಾಡಿಕೊಂಡು ಒಂಟಿಯಾಗಿ ವಾಸವಿದ್ದ ಪಾರ್ವತಿ ಎಂಬ ವೃದ್ಧೆಯನ್ನು ಕೊಲೆಮಾಡಿ, ಮೈಮೇಲಿದ್ದ ಚಿನ್ನದ ಸರ ಹಾಗೂ ಕಿವಿಯೋಲೆಯನ್ನು ಅಪಹರಿಸಿರುವ ಬಗ್ಗೆ ಕೊಲೆಯಾಗಿರುವ ವೃದ್ಧೆಯ ಸಂಬಂಧಿಕರು ನೀಡಿದ ದೂರಿನ ಆಧಾರದಲ್ಲಿ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.
ಒಬ್ಬಂಟಿಯಾಗಿ ವಾಸವಿದ್ದ ವೃದ್ಧೆಯನ್ನು ಕೊಲೆ ಮಾಡಿ ಚಿನ್ನಾಭರಣಗಳನ್ನು ದೋಚಿರುವ ಪ್ರಕರಣದ ಬಗ್ಗೆ ಜನವಲಯದಲ್ಲಿ ಆತಂಕ ವ್ಯಕ್ತವಾದುದರಿಂದ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಆರೋಪಿಗಳನ್ನು ಪತ್ತೆಹಚ್ಚುವ ಬಗ್ಗೆ ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಸೂಚಿಸಲಾಗಿತ್ತು. ಪ್ರಕರಣದ ಬಗ್ಗೆ ಡಿಸಿಐಬಿ ಘಟಕದ ಅಧಿಕಾರಿ ಹಾಗೂ ಸಿಬ್ಬಂದಿಗಳು ಮಾಹಿತಿಯನ್ನು ಕಲೆಹಾಕಿದಾಗ ಕಟ್ಟೆಮಾಡಿನ ಪರಂಬು ಪೈಸಾರಿಯಲ್ಲಿ ವಾಸವಿದ್ದ ಜಕ್ರಿಯಾ (42) ಎಂಬ ವ್ಯಕ್ತಿ ವೃದ್ಧೆಯನ್ನು ಕೊಲೆಮಾಡಿ ಚಿನ್ನಾಭರಣಗಳನ್ನು ತೆಗೆದುಕೊಂಡು ಹೋಗಿರುವ ಬಗ್ಗೆ ಖಚಿತ ಮಾಹಿತಿ ದೊರೆತ ಮೇರೆ ಆರೋಪಿಯನ್ನು ಪತ್ತೆಹಚ್ಚಿ ವಶಕ್ಕೆ ಪಡೆಯಲಾಗಿದೆ.
ಆರೋಪಿಯಿಂದ ಕೊಲೆಯಾಗಿದ್ದ ವೃದ್ಧೆ ಮೈಮೇಲಿದ್ದ ಅಂದಾಜು 1 ಲಕ್ಷದ 5 ಸಾವಿರ ಮೌಲ್ಯದ ಚಿನ್ನದ ಸರ ಹಾಗೂ ಒಂದು ಜೊತೆ ಚಿನ್ನದ ಕಿವಿಯೋಲೆ, ವೃದ್ಧೆಗೆ ಸೇರಿದ ಅಂದಾಜು 1 ಸಾವಿರ ಮೌಲ್ಯದ ಮೊಬೈಲ್ ಫೋನ್ ಅನ್ನು ವಶಪಡಿಸಿಕೊಳ್ಳಲಾಗಿದೆ.
ಒಂಟಿಯಾಗಿ ವಾಸವಿದ್ದ ವೃದ್ಧೆಯ ಮಕ್ಕಳು ನೆರೆಯ ಕೇರಳ ರಾಜ್ಯದಲ್ಲಿ ಪ್ರತ್ಯೇಕ ವಾಸವಿರುವುದನ್ನು ಉಪಯೋಗಿಸಿಕೊಂಡ ಆರೋಪಿ ಕೂಲಿಕೆಲಸಕ್ಕೆ ಹೋಗದೇ ಆತನ ಬಳಿ ಹಣವಿಲ್ಲದ್ದರಿಂದ ಹಣಕ್ಕಾಗಿ ವೃದ್ಧೆಯನ್ನು ಕೊಲೆಮಾಡಿ ಮೈಮೇಲಿದ್ದ ಚಿನ್ನಾಭರಣಗಳನ್ನು ಅಪಹರಿಸಿದ್ದಾನೆ. ಕೊಲೆಯಾಗಿರುವ ವೃದ್ಧೆ ಪಾರ್ವತಿ ಹಾಗೂ ಪಕ್ಕದಲ್ಲಿ ವಾಸವಿದ್ದ ವ್ಯಕ್ತಿಯೊಬ್ಬರ ಕುಟುಂಬದೊಂದಿಗೆ ಈ ಮೊದಲೇ ಆಸ್ತಿಯ ವಿಚಾರದಲ್ಲಿ ಜಗಳ ಮಾಡಿಕೊಂಡು ವೈಷಮ್ಯವಿರಿಸಿಕೊಂಡಿರುವುದನ್ನು ಬಳಸಿಕೊಂಡಿದ್ದಾನೆ. ವ್ಯಕ್ತಿಯ ಕುಟುಂಬದವರೇ ವೃದ್ಧೆಯನ್ನು ಕೊಲೆ ಮಾಡಿರುವುದಾಗಿ ಗ್ರಾಮದ ಸ್ಥಳೀಯ ಜನರೊಂದಿಗೆ ಹೇಳಿಕೊಂಡು ಯಾವುದೇ ಅನುಮಾನ ಬಾರದಂತೆ ವೃದ್ಧೆಯ ಅಂತ್ಯಸಂಸ್ಕಾರದಲ್ಲೂ ಸಹ ತಾನು ಭಾಗಿಯಾಗಿರುವುದಾಗಿ ಆರೋಪಿ ತನಿಖೆಯ ಸಮಯದಲ್ಲಿ ತಿಳಿಸಿದ್ದಾನೆ.
ಜಿಲ್ಲಾ ಪೊಲೀಸ್ ಅಧೀಕ್ಷಕಿ ಕ್ಷಮಾ ಮಿಶ್ರ, ಮಡಿಕೇರಿ ಉಪವಿಭಾಗದ ಪೊಲೀಸ್ ಉಪಾಧೀಕ್ಷಕ ಬಿ.ಪಿ. ದಿನೇಶ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಡಿಸಿಐಬಿ ನಿರೀಕ್ಷಕ ಎನ್. ಕುಮಾರ್ ಆರಾಧ್ಯ, ಮಡಿಕೇರಿ ಗ್ರಾಮಾಂತರ ವೃತ್ತ ನಿರೀಕ್ಷಕ ಸಿ.ಎನ್. ದಿವಾಕರ್, ಡಿಸಿಐಬಿ ಹೆಚ್ಚುವರಿ ಕರ್ತವ್ಯದಲ್ಲಿರುವ ಮಡಿಕೇರಿ ಗ್ರಾಮಾಂತರ ಠಾಣೆಯ ಪಿಎಸ್‍ಐ ಹೆಚ್.ವಿ. ಚಂದ್ರಶೇಖರ್, ಪ್ರೊಬೇಷನರಿ ಪಿ.ಎಸ್.ಐ ಶ್ರವಣ್, ಡಿಸಿಐಬಿಯ ಎಎಸ್‍ಐ ಕೆ.ವೈ. ಹಮೀದ್, ಸಿಬ್ಬಂದಿಗಳಾದ ಕೆ.ಎಸ್. ಅನಿಲ್ ಕುಮಾರ್, ವಿ.ಜಿ. ವೆಂಕಟೇಶ್, ಬಿ.ಎಲ್. ಯೋಗೇಶ್ ಕುಮಾರ್, ಕೆ.ಆರ್. ವಸಂತ, ಎಂ.ಎನ್. ನಿರಂಜನ್, ಬಿ.ಜೆ. ಶರತ್ ರೈ ಹಾಗೂ ಚಾಲಕರಾದ ಕೆ.ಎಸ್. ಶಶಿಕುಮಾರ್, ಪ್ರವೀಣ್ ಮತ್ತು ಸಿಡಿಆರ್ ಸೆಲ್‍ನ ಗಿರೀಶ್ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು
ತಾಲೂಕು ಕಚೇರಿಯೊಳಗೆ ಮಳೆ ಕೊಯ್ಲು ಯೋಜನೆ!
ಸೋಮವಾರಪೇಟೆ, ಆ. 6: ತಾಲೂಕು ಕೇಂದ್ರದಲ್ಲಿರುವ ಆಡಳಿತ ಭವನವಾದ ತಾಲೂಕು ಕಚೇರಿ ಯೊಳಗೆ ಮಳೆಕೊಯ್ಲು ಯೋಜನೆ ಅನುಷ್ಠಾನಗೊಂಡಿರುವ ದೃಶ್ಯ ಕಂಡುಬರುತ್ತಿದೆ. ಭಾರೀ ಮಳೆಗೆ ತಾಲೂಕು ಕಚೇರಿಯ ಆರ್.ಸಿ.ಸಿ. ಛಾವಣಿಯಲ್ಲಿ ನೀರು ಸೋರಿಕೆ ಯಾಗುತ್ತಿದ್ದು, ಮೇಲಿನಿಂದ ತೊಟ್ಟಿಕ್ಕುವ ಮಳೆ ನೀರನ್ನು ಬಕೆಟ್‍ಗಳ ಮೂಲಕ ಸಂಗ್ರಹಿಸಲಾಗುತ್ತಿದೆ.
ನಿರ್ಮಾಣವಾದಾಗಿನಿಂದಲೂ ದುರಸ್ತಿ ಕಾಣದೆ ಇರುವ ಸೋಮವಾರಪೇಟೆ ತಾಲೂಕು ಕಚೇರಿ ಕಟ್ಟಡ ಇದೀಗ ಶಿಥಿಲಾವಸ್ಥೆಯಲ್ಲಿದ್ದು, ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಯದಿಂದಲೇ ಕೆಲಸ ಕರ್ತವ್ಯ ನಿರ್ವಹಿಸುತ್ತಿದ್ದಾರೆ.
ಇದೀಗ ಸುರಿಯುತ್ತಿರುವ ಮಳೆಯಿಂದಾಗಿ ಛಾವಣಿಯಲ್ಲಿ ನೀರು ಸೋರಿಕೆಯಾಗುತ್ತಿದೆ. ದಾಖಲೆಗಳು, ಕಂಪ್ಯೂಟರ್‍ಗಳನ್ನು ಮಳೆ ನೀರಿನಿಂದ ರಕ್ಷಿಸಿಕೊಳ್ಳಲು ಹರಸಾಹಸ ಪಡುವಂತಾಗಿದೆ. ಇಡೀ ಕಚೇರಿ ಕಟ್ಟಡದಲ್ಲಿ ನೀರು ಸೋರುತ್ತಿದೆ.
ತಾಲೂಕು ಕಚೇರಿಯಲ್ಲಿ ಭೂಮಿ ಶಾಖೆ, ಕಂದಾಯ ಶಾಖೆ, ಚುನಾವಣಾ ಶಾಖೆ, ಆಹಾರ ಶಾಖೆ, ತಾಲೂಕು ದಂಡಾಧಿಕಾರಿಗಳ ಕಚೇರಿ, ಶಿರಸ್ತೇದಾರ್ ಕಚೇರಿ, ಖಜಾನೆ, ಅಭಿ ಲೇಖಾಲಯ ಕಚೇರಿಗಳು, ಯಾವೊಂದು ಕಚೇರಿಗೂ ಸೂಕ್ತ ಭದ್ರತೆ ಇಲ್ಲದಂತಾಗಿದೆ.
ಒಡೆದು ಹೋಗಿರುವ ಕಿಟಕಿಗಳಿಂದ ಮಳೆಯ ನೀರು ಒಳಗಡೆ ಬರುತ್ತಿದ್ದರೆ, ಛಾವಣಿಯಿಂದಲೂ ನೀರು ಸೋರಿಕೆಯಾಗುತ್ತಿರುವುದರಿಂದ ಇಡೀ ಸಂಕೀರ್ಣ ನೀರಿನಿಂದ ತುಂಬಿದೆ. ಆರ್.ಟಿ.ಸಿ. ವಿತರಣಾ ಕೇಂದ್ರಕ್ಕೆ ಟಾರ್ಪಲ್ ಕಟ್ಟಿ ಮಳೆ ನೀರಿನಿಂದ ರಕ್ಷಣೆ ಪಡೆಯಲು ಪ್ರಯತ್ನಿಸಲಾಗಿದೆ.
ಕಳೆದ ನಾಲ್ಕೈದು ವರ್ಷದಿಂದ ತಾಲೂಕು ಕಚೇರಿಯ ದುರಸ್ತಿಗೆ ಒಂದು ಕೋಟಿಗೂ ಅಧಿಕ ವೆಚ್ಚದ ಕ್ರಿಯಾಯೋಜನೆ ತಯಾರಿಸಲಾಗಿದೆ ಎಂದು ಅಧಿಕಾರಿಗಳು ಹೇಳಿಕೆ ನೀಡುತ್ತಿದ್ದಾರೆಯೇ ಹೊರತು, ಕಾಮಗಾರಿ ಮಾತ್ರ ಇಂದಿಗೂ ಪ್ರಾರಂಭವಾಗಿಲ್ಲ.
ಪರಿಣಾಮ ಪ್ರತಿ ಮಳೆಗಾಲ ದಲ್ಲೂ ತಾಲೂಕು ಕಚೇರಿ ನೀರಿನಲ್ಲಿ ತೋಯುತ್ತಿದ್ದು, ಹಲವಾರು ಕಡತಗಳು ರಕ್ಷಣೆ ಇಲ್ಲದೆ ಹಾಳಾ ಗುತ್ತಿವೆ. ಮುಂದಿನ ಮಳೆಗಾಲದ ಒಳಗಾದರೂ ತಾಲೂಕು ಕಚೇರಿಗೆ ಹಿಡಿದಿರುವ ಗ್ರಹಣ ದೂರವಾಗಿ, ಸುಸಜ್ಜಿತಗೊಳ್ಳಲಿ ಎಂಬುದು ತಾಲೂಕು ಕಚೇರಿಯ ಸಿಬ್ಬಂದಿಗ ಳೊಂದಿಗೆ ಸಾರ್ವಜನಿಕರ ಆಶಯ ವಾಗಿದೆ. -ವಿಜಯ್ ಹಾನಗಲ್