ಕುಶಾಲನಗರ, ಆ. 6: ಕುಶಾಲನಗರ ನಗರ ಯೋಜನಾ ಪ್ರಾಧಿಕಾರದ ನೂತನ ಅಧ್ಯಕ್ಷರು ಮತ್ತು ಆಡಳಿತ ಮಂಡಳಿ ಪದಾಧಿಕಾರಿಗಳು ಅಧಿಕಾರ ಸ್ವೀಕರಿಸಿದರು.

ನೂತನ ಅಧ್ಯಕ್ಷರಾಗಿ ಎಂ.ಎಂ. ಚರಣ್, ಸದಸ್ಯರಾದ ವಿ. ವೈಶಾಖ್, ವಿ.ಡಿ. ಪುಂಡರೀಕಾಕ್ಷ, ಹೆಚ್.ಎಂ. ಮಧುಸೂದನ್ ಕುಡಾ ಕಚೇರಿಯಲ್ಲಿ ಪೂಜೆ ಸಲ್ಲಿಸಿ ಕಡತಕ್ಕೆ ಸಹಿ ಹಾಕುವ ಮೂಲಕ ಅಧಿಕಾರ ವಹಿಸಿಕೊಂಡರು. ನೂತನ ಪದಾಧಿಕಾರಿಗಳಿಗೆ ಕುಡಾ ಸದಸ್ಯ ಕಾರ್ಯದರ್ಶಿ ಹಾಗೂ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ನಿರ್ದೇಶಕ ಆರ್. ಶೇಷ ಅಧಿಕಾರ ಹಸ್ತಾಂತರ ಮಾಡಿದರು.

ಈ ಸಂದರ್ಭ ಮಾತನಾಡಿದ ನೂತನ ಅಧ್ಯಕ್ಷ ಎಂ.ಎಂ. ಚರಣ್, ಕುಡಾದ ನಿಯಮಕ್ಕೆ ಅನುಗುಣವಾಗಿ ಕಾರ್ಯಗಳನ್ನು ಕೈಗೊಳ್ಳಲಾಗುವುದು. ಕುಡಾ ವ್ಯಾಪ್ತಿಯನ್ನು ನೆರೆಯ ಗುಡ್ಡೆಹೊಸೂರುವರೆಗೆ ವಿಸ್ತರಿಸಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಪ್ರಸಕ್ತ ಕಚೇರಿ ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು ತನ್ನ ಅಧಿಕಾರ ಅವಧಿಯಲ್ಲಿ ಸ್ವಂತ ಕಟ್ಟಡ ಹೊಂದಲು ಪ್ರಯತ್ನಿಸಲಾಗುವುದು. ಕುಶಾಲನಗರ ಪಟ್ಟಣದಲ್ಲಿ 30x40 ನಿವೇಶನದಲ್ಲಿ ಮೂರಂತಸ್ತು ಕಟ್ಟಡ ನಿರ್ಮಿಸಲು ಅನುಮತಿ ಕಲ್ಪಿಸುವಂತೆ ಶಾಸಕರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.