ಗೋಣಿಕೊಪ್ಪ ವರದಿ, ಆ. 4: ಡ್ರಂಸೀಡರ್ ಯಾಂತ್ರೀಕೃತ ಭತ್ತ ಬೆಳೆ ಪದ್ಧತಿಯಲ್ಲಿ ಹೆಚ್ಚು ಕವಲುಗಳು ಬರುವುದರಿಂದ ಅಧಿಕ ಲಾಭ ಎಂದು ವಿಸ್ತರಣಾ ಶಿಕ್ಷಣ ಘಟಕ ನೇರ ಬಿತ್ತನೆ ಯೋಜನೆ ಪ್ರಧಾನ ಸಂಶೋಧಕ ಡಾ. ಬಸವಲಿಂಗಯ್ಯ ತಿಳಿಸಿದರು.

ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾಲಯ, ಮಡಿಕೇರಿ ವಿಸ್ತರಣಾ ಶಿಕ್ಷಣ ಘಟಕ ವತಿಯಿಂದ ಭತ್ತ ಬೆಳೆಯಲ್ಲಿ ನೇರ ಬಿತ್ತನೆ ಬಗ್ಗೆ ಎಂ. ಬಾಡಗ ಗ್ರಾಮದ ಮುಕ್ಕಾಟಿರ. ಕೆ. ಬೋಪಯ್ಯ, ಮುಕ್ಕಾಟಿರ. ಕೆ. ಮುತ್ತಪ್ಪ ಅವರದ ಗದ್ದೆಯಲ್ಲಿ ಸೋಮವಾರ ಆಯೋಜಿಸಿದ್ದ ಡ್ರಂ ಸೀಡರ್ ನೇರ ಬಿತ್ತನೆ ಪ್ರಾತ್ಯಕ್ಷಿಕೆಯಲ್ಲಿ ಮಾಹಿತಿ ನೀಡಿದರು.

ಡ್ರಂ ಸೀಡರ್ ಪದ್ಧತಿಯಿಂದ ಎಕರೆಗೆ ಸುಮಾರು 6 ರಿಂದ 8 ಸಾವಿರ ಉಳಿತಾಯ ಮಾಡಬಹುದು. ಕಾರ್ಮಿಕರ ಅಭಾವವಿರುವ ಕಡೆಗೆ ಈ ಪದ್ಧತಿ ವರದಾನವಾಗಿದ್ದು, ಬೆಳೆಯಲ್ಲಿ ಹೆಚ್ಚು ಕವಲುಗಳು ಬರುವುದರಿಂದ ಹೆಚ್ಚಿನ ಇಳುವರಿ ತೆಗೆಯಬಹುದಾಗಿದೆ ಎಂದು ಸಂಶೋಧನೆಯಿಂದ ತಿಳಿದಿದೆ ಎಂದು ಹೇಳಿದರು.

ಕೈಯಿಂದ ಮಾಡುವ ನಾಟಿ ಕಾರ್ಯಕ್ಕೆ ಬೇಕಾದಂತೆ ಉಳುಮೆ ಮಾಡಿಕೊಂಡು ಮುಂದುವರಿ ಯಬೇಕು. ಎಕರೆಗೆ ಸುಮಾರು 12 ರಿಂದ 17 ಕೆಜಿ ಭತ್ತವನ್ನು 24 ಗಂಟೆ ನೀರಿನಲ್ಲಿ ನೆನೆಸಿ ಹೊರತೆಗೆದು, ಶಿಲೀಂಧ್ರ್ರ ನಾಶಕವಾದ ಕಾರ್ಬನ್ ಡೈಜಿಂನಲ್ಲಿ ಪ್ರತಿ ಕೆಜಿಗೆ 4 ಗ್ರಾಂ ನಂತೆ ಮಿಶ್ರಣಮಾಡಿ 24-36 ಗಂಟೆಗಳ ಕಾಲ ಗೋಣಿಚೀಲದಲ್ಲಿ ಕಟ್ಟಿ ನಂತರ ಬಿತ್ತನೆಗೆ ಉಪಯೋಗಿಸಬೇಕು ಎಂದು ಸಲಹೆ ನೀಡಿದರು.

ಬಿತ್ತನೆಯಾದ 40 ರಿಂದ 60 ನೇ ದಿನದಲ್ಲಿ ಕೋನೊ ವೀಡರ್ ಹಾಯಿಸುವುದರಿಂದ ಕಳೆ ನಿಯಂತ್ರಣದ ಜತೆಗೆ ಭತ್ತದ ಬೇರುಗಳಿಗೆ ಹೆಚ್ಚಿನ ಗಾಳಿ ದೊರೆಯುವಂತಾಗುತ್ತದೆ. ಬೆಳೆಯ ಬುಡಕ್ಕೆ ಮಣ್ಣು ಸೇರುವುದರಿಂದ ಗಿಡ ಬೀಳದೆ ಸದೃಡವಾಗಿ ಬೆಳೆಯುತ್ತದೆ. ಇದರ ಜೊತೆಗೆ ಉದಯಪೂರ್ವ ಕಳೆನಾಶಕವಾದ ಬೆನ್‍ಸಲ್ಫುರಾನ್ ಮಿಥೈಲ್ ಶೇ. 0.6 + ಪೆಟಿಲಾಕ್ಲೋರ್ ಶೇ. 6 ಮತ್ತು ಉದಯೋತ್ತರ ಕಳೆನಾಶಕವಾದ ಬೆಸ್ಟಿರಿಬ್ಯಾಕ್ ಸೋಡಿಯಂ ಶೇ. 10 ನಾಮಿನಿಗೋಲ್ಡನ್ನು ಬಳಸಿ ಕಳೆನಿಯಂತ್ರಿಸಬಹುದು ಎಂದು ಸಲಹೆ ನೀಡಿದರು.

ವಿಸ್ತರಣಾ ಶಿಕ್ಷಣ ಘಟಕ ಮುಖ್ಯಸ್ಥ ಡಾ. ಆರ್. ಎನ್. ಕೆಂಚರಡ್ಡಿ ಕೃಷಿ ಸಂಬಂಧಿಸಿದ ವಿಸ್ತರಣಾ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದರು.

ವೀರಾಜಪೇಟೆ ತಾಲೂಕು ಕೃಷಿ ಅಧಿಕಾರಿ ಪಿ. ಶಿವಮೂರ್ತಿ, ಕೃಷಿ ಅಧಿಕಾರಿಗಳಾದ ವರದರಾಜು, ನಾರಾಯಣರೆಡ್ಡಿ, ತೋಟಗಾರಿಕೆ ಇಲಾಖೆ ಸಂಪನ್ಮೂಲ ವ್ಯಕ್ತಿ ವಿದ್ಯಾಶ್ರೀ ಇದ್ದರು. ಸ್ಥಳೀಯ ಕೃಷಿಕರು ಪಾಲ್ಗೊಂಡಿದ್ದರು.