ಕಣಿವೆ, ಆ. 4: ಹಾರಂಗಿ ಹಾಗು ಚಿಕ್ಲಿಹೊಳೆ ಅಚ್ಚುಕಟ್ಟು ವ್ಯಾಪ್ತಿಯ ಭೂಪ್ರದೇಶದಲ್ಲಿ ರೈತರು ಮುಂಗಾರು ಪೂರ್ವದಲ್ಲಿ ಕೈಗೊಂಡಿದ್ದ ಸಿಹಿಗೆಣಸು ಬೆಳೆ ತಿನ್ನುವವರಿಗೆ ‘ಸಿಹಿ’ಯಾದ ಬೆಳೆ ಆದರೂ ಕೂಡ ಈಗ ಕಾಡುತ್ತಿರುವ ಕೊರೊನಾದಿಂದಾಗಿ ಬೆಳೆಗಾರನಿಗೆ ‘ಕಹಿ’ಯಾಗಿದೆ. ಏಕೆಂದರೆ ಈ ಬಾರಿ ರೈತರು ಬೆಳೆದ ಯಾವುದೇ ಫಸಲಿಗೂ ಸೂಕ್ತ ಮಾರುಕಟ್ಟೆ ದರ ಲಭಿಸುತ್ತಿಲ್ಲ. ಹಾಗಾಗಿ ಸಿಹಿಗೆಣಸು ಫಸಲಿಗೂ ಬೆಲೆ ಇಲ್ಲ. ಇಳುವರಿ ಮೊದಲೇ ಇಲ್ಲ. ಈ ಬಾರಿಯ ಮುಂಗಾರಿನ ಅವಧಿಯಲ್ಲಿ ಸಿಹಿಗೆಣಸು ಬಳ್ಳಿಯನ್ನು ಬಿತ್ತನೆ ಮಾಡಿದ ಸಂದರ್ಭದಲ್ಲಿ ಅಗತ್ಯವಾಗಿ ಬೀಳಬೇಕಾದ ಮಳೆ ಕೈಕೊಟ್ಟ ಕಾರಣ ಅರೆ ನೀರಾವರಿ ಭೂಮಿಯಲ್ಲಿ ರೈತರು ಕೈಗೊಂಡಿದ್ದ ಈ ಗೆಣಸು ಬೆಳೆ ಸೊರಗಿತು ಎಂದು ಕಣಿವೆ ಬಳಿಯ ಹಕ್ಕೆ ಗ್ರಾಮದ ರೈತ ತಮ್ಮಯ್ಯ ಹೇಳುತ್ತಾರೆ. ಮಾರುಕಟ್ಟೆಯಲ್ಲಿ ಈ ಬಾರಿ ಒಂದು ಕ್ವಿಂಟಾಲ್ ಸಿಹಿಗೆಣಸಿಗೆ ಕೇವಲ 650 ರೂಗಳಿಂದ 700 ರೂ.ಗಳು ಲಭಿಸುತ್ತಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಇದೇ ಸಿಹಿಗೆಣಸು ಫಸಲಿಗೆ ಕ್ವಿಂಟಾಲ್‍ಗೆ 1400 ರಿಂದ 1600 ರೂಗಳಿತ್ತು. ಬಿತ್ತನೆ ಮಾಡಿದ ಕನಿಷ್ಟ ಐದು ತಿಂಗಳಲ್ಲಿ ರೈತರ ಕೈಗೆ ಸಿಗುವ ಈ ಸಿಹಿಗೆಣಸು ಬಳ್ಳಿಯನ್ನು ಕಳೆದ ಫೆಬ್ರವರಿಯಲ್ಲಿ ಬಿತ್ತನೆ ಮಾಡಲಾಗಿತ್ತು. ಈಗ ಭತ್ತದ ಬೆಳೆ ಬೆಳೆಯಲು ಹಾರಂಗಿ ಕಾಲುವೆಗೆ ನೀರು ಬಿಟ್ಟ ಪರಿಣಾಮ ಮತ್ತೆ ಭತ್ತದ ಸಸಿಮಡಿಗಳ ಸಿದ್ಧತೆ ನಡೆಸಲು ಗೆಣಸು ಫಸಲು ಕಟಾವು ಮಾಡಿದ್ದಾಗಿ ಇಲ್ಲಿನ ರೈತರು ಹೇಳುತ್ತಾರೆ. ಇಳುವರಿಯೂ ಇಲ್ಲ. ಬೆಲೆ ಮೊದಲೇ ಇಲ್ಲ. ಈಗಾಗಲೇ ಒಂದು ಎಕರೆಯಲ್ಲಿ ಗೆಣಸು ಬೆಳೆಯಲು 25 ಹೊರೆ ಗೆಣಸಿನ ಬಳ್ಳಿಯನ್ನು ನೀಡಲಾಗಿತ್ತು. ನಂತರ 20-20 ಹಾಗೂ ಪೆÇಟ್ಯಾಶ್ ಸೇರಿ ಎರಡೂ ಬಾರಿ ಮಿಶ್ರಣ ಮಾಡಿದ ರಾಸಾಯನಿಕ ಗೊಬ್ಬರ ಅಳವಡಿಸಲಾಗಿತ್ತು. ಹೀಗಾಗಿ ಎಲ್ಲಾ ಸೇರಿ ಎಕರೆಗೆ 40 ಸಾವಿರ ಖರ್ಚು ಮಾಡಿದ್ದೆ. ಫಸಲು ಚೆನ್ನಾಗಿ ಬಂದಿದ್ದರೆ ಗರಿಷ್ಠ 200 ಚೀಲ ಗೆಣಸು ಆಗಬೇಕಿತ್ತು. ಆದರೆ ಈ ಬಾರಿ ಕೇವಲ 50 ರಿಂದ 60 ಚೀಲವಷ್ಟೇ ಆಗಿದೆ. ಹಾಗಾಗಿ ಖರ್ಚು ಮಾಡಿದ ಹಣವೇ ಬರುತ್ತಿಲ್ಲ ಎನ್ನುತ್ತಾರೆ ತಮ್ಮಯ್ಯ. ರೈತರಿಂದ ಖರೀದಿಸಿದ ಗೆಣಸನ್ನು ಮಾರಾಟಗಾರರು ದೂರದ ಮುಂಬೈ, ಮಂಗಳೂರು, ಹೈದರಾಬಾದ್ ಮೊದಲಾದ ಕಡೆಗಳಿಗೆ ಕಳಿಸುತ್ತಾರೆ. ಅಲ್ಲಿನ ಕೈಗಾರಿಕೆಗಳು ರೈತರಿಂದ ಅತ್ಯಂತ ಕಡಿಮೆ ದರದಲ್ಲಿ ಖರೀದಿಸಿದ ಸಿಹಿಗೆಣಸು, ಮರಗೆಣಸು, ಆಲುಗಡ್ಡೆ ಮತ್ತಿತರ ಕಾಯಿಪಲ್ಯೆಗಳನ್ನು ಚಿಕ್ಕದಾಗಿ ಮಾರ್ಪಾಡು ಮಾಡಿ ಅದಕ್ಕೆ ಮಸಾಲೆಗಳನ್ನು ಸೇರಿಸಿ ಬಣ್ಣದ ಪ್ಯಾಕೆಟ್‍ಗಳಲ್ಲಿ ಲೇಸ್, ಕುರ್ ಕುರೆ ಮೊದಲಾದ ತಿನಿಸುಗಳಾಗಿ ಮಾರಾಟ ಮಾಡಿ ಕೈತುಂಬಾ ಹಣಗಳಿಸುತ್ತಾರೆ.

ರೈತ ಬೆಳೆವ ರಾಗಿ, ಅಕ್ಕಿ, ತರಕಾರಿ ಕಾಯಿಪಲ್ಯೆಗಳು ಇಲ್ಲದೇ ಮನುಷ್ಯ ಬದುಕಲಾರ. ಆದರೆ ಇವುಗಳನ್ನು ಬೆಳೆವ ರೈತ ಪ್ರತೀ ವರ್ಷವೂ ಸಾಲಗಾರನಾಗುತ್ತಿದ್ದು, ಸಾಲದ ಸುಳಿಯಲ್ಲಿ ಸಿಲುಕಿ ಆತ್ಮಹತ್ಯೆ ಹಾದಿ ಹಿಡಿಯುತ್ತಿದ್ದಾನೆ. ರೈತ ಬೆಳೆವ ಯಾವುದೇ ಉತ್ಪನ್ನಗಳಿಗೆ ಸೂಕ್ತ ಮಾರುಕಟ್ಟೆ ಹಾಗೂ ಬೆಲೆ ಸಿಗುವಂತಹ ವ್ಯವಸ್ಥೆ ನಿರ್ಮಾಣವಾಗುವವರೆಗೂ ರೈತಾಪಿಗಳ ಕನಸುಗಳು ಮಾತ್ರ ಹಾಗೇ ಉಳಿಯುತ್ತದೇನೋ... - ಕೆ.ಎಸ್. ಮೂರ್ತಿ