ಸೋಮವಾರಪೇಟೆ, ಆ.5: ಆಶ್ಲೇಷ ಮಳೆಯೊಂದಿಗೆ ವರುಣನ ಆರ್ಭಟ ಮುಂದುವರೆಯುತ್ತಿದ್ದು, ತಾಲೂಕಿನಾದ್ಯಂತ ಹಾನಿ ಪ್ರಕರಣಗಳು ವರದಿಯಾಗುತ್ತಿವೆ. ಭಾರೀ ಗಾಳಿ-ಮಳೆಗೆ ಅಲ್ಲಲ್ಲಿ ಮರಗಳು ಮನೆಯ ಮೇಲೆ ಉರುಳುತ್ತಿದ್ದು, ಕೆಲವೆಡೆ ಛಾವಣಿ ಹಾರಿ ನಷ್ಟ ಸಂಭವಿಸಿದೆ.ತಾಲೂಕಿನ ತೋಳೂರುಶೆಟ್ಟಳ್ಳಿ ಗ್ರಾ.ಪಂ. ವ್ಯಾಪ್ತಿಯಲ್ಲಿ ಕಳೆದ 24 ಗಂಟೆಗಳಲ್ಲಿ 10 ಇಂಚು ಮಳೆ ಸುರಿದಿದ್ದು, ಈವರೆಗೆ 53 ಇಂಚು ಮಳೆ ಸುರಿದಿದೆ. ಮಳೆಯೊಂದಿಗೆ ಗಾಳಿಯೂ ಬೀಸುತ್ತಿರುವದರಿಂದ ಹಾನಿ ಸಂಭವಿಸಿದೆ. ತೋಳೂರುಶೆಟ್ಟಳ್ಳಿಯಲ್ಲಿರುವ ಚೌಡ್ಲು ವಿಎಸ್‍ಎಸ್‍ಎನ್‍ನ ಸಭಾಂಗಣದ 10ಕ್ಕೂ ಅಧಿಕ ಛಾವಣಿ ಶೀಟ್‍ಗಳು ಹಾರಿಹೋಗಿವೆ. ಇದರೊಂದಿಗೆ ದೊಡ್ಡತೋಳೂರಿನ ಎ.ಎಸ್. ಭೋಜರಾಜ್, ರವಿ, ಎಂ.ಬಿ. ಚಂದ್ರು, ಸೋಮಯ್ಯ ಅವರುಗಳಿಗೆ ಸೇರಿದ ಮನೆಯ ಛಾವಣಿ ಜಖಂಗೊಂಡಿದೆ. ತೋಳೂರುಶೆಟ್ಟಳ್ಳಿಯ ಕೆ.ಜೆ. ಜೀವನ್ ಅವರ ಮನೆಗೆ ಹಾನಿಯಾಗಿದೆ. ಚಿಕ್ಕತೋಳೂರಿನ ತೀರ್ಥಾನಂದ ಅವರ ಮನೆ ಗಾಳಿ ಮಳೆಗೆ ಜಖಂಗೊಂಡಿದ್ದು, ತೋಳೂರುಶೆಟ್ಟಳ್ಳಿಯ ಹಾಲಿನ ಡೈರಿಯ ಛಾವಣಿ ಹಾರಿದ್ದು, ಟಾರ್ಪಲ್ ಮುಚ್ಚಲಾಗಿದೆ.

ತೋಳೂರುಶೆಟ್ಟಳ್ಳಿ ಭಾಗದಲ್ಲಿ ಮಳೆಯಿಂದಾಗಿ ಜನಜೀವನವೂ ಅಸ್ತವ್ಯಸ್ತಗೊಂಡಿದ್ದು, ಕಾಫಿ ತೋಟದೊಳಗೆ ಹೋಗದ ಪರಿಸ್ಥಿತಿ ನಿರ್ಮಾಣವಾಗಿದೆ. ತೋಟದಲ್ಲಿ ಹಲವಷ್ಟು ಮರಗಳು ಕಾಫಿ ಗಿಡದ ಮೇಲೆ ಬಿದ್ದು ಹಾನಿಯಾಗಿದೆ. ಇದರೊಂದಿಗೆ ವಾಸದ ಮನೆಗಳೂ ಹಾನಿಗೊಳಗಾಗುತ್ತಿದ್ದು ಕಂದಾಯ ಇಲಾಖಾಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿ ಸೂಕ್ತ ಪರಿಹಾರ ಒದಗಿಸಬೇಕೆಂದು ತೋಳೂರುಶೆಟ್ಟಳ್ಳಿಯ

ಕೆ.ಕೆ. ಸುಧಾಕರ್ ಒತ್ತಾಯಿಸಿದ್ದಾರೆ.

(ಮೊದಲ ಪುಟದಿಂದ) ಸುಂಟಿಕೊಪ್ಪ ಹೋಬಳಿಗೊಳಪಡುವ ಗರಗಂದೂರು ಗ್ರಾಮದ ಅಣ್ಣುಗೌಡ ಅವರ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದ್ದು, ಕುಟುಂಬ ವರ್ಗ ಅಪಾಯದಿಂದ ಪಾರಾಗಿದೆ. ವಾಸದ ಮನೆಯ ಒಂದು ಭಾಗ ಜಖಂಗೊಂಡಿದ್ದು, ಸ್ಥಳಕ್ಕೆ ಹೋಬಳಿ ಕಂದಾಯ ಪರಿವೀಕ್ಷಕರು, ಗ್ರಾಮಲೆಕ್ಕಿಗರು, ಗ್ರಾ.ಪಂ. ಸಿಬ್ಬಂದಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಐಗೂರಿನ ಆನಂದ್ ಎಂಬವರ ಮನೆಯ ಮೇಲೆ ಬೃಹತ್ ಗಾತ್ರದ ಮರ ಬಿದ್ದಿದೆ. ಆರ್‍ಸಿಸಿ ಛಾವಣಿಯಾದ್ದರಿಂದ ಹೆಚ್ಚಿನ ಹಾನಿ ಸಂಭವಿಸಿಲ್ಲ.

ಚೌಡ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸರ್ಕಾರಿ ಶಾಲೆ ಸಮೀಪದ ನಿವಾಸಿ ಸಿ.ಎಲ್. ರಾಜು ಅವರ ಮನೆಯ ಮುಂಭಾಗದಲ್ಲಿ ಬರೆ ಕುಸಿದಿದ್ದು, ಮೂರು ಮನೆಗಳು ಕುಸಿಯುವ ಆತಂಕ ನಿರ್ಮಾಣವಾಗಿದೆ. ಮಂಜುನಾಥ್ ಎಂಬವರು ಜೆಸಿಬಿಯಿಂದ ಮಣ್ಣು ತೆಗೆದಿರುವದರಿಂದ, ಬರೆ ಕುಸಿದಿದ್ದು, ಮನೆಗಳೂ ಕುಸಿಯುವ ಪರಿಸ್ಥಿತಿ ನಿರ್ಮಾಣವಾಗಿದೆ. ತಕ್ಷಣ ಈ ಬಗ್ಗೆ ಕ್ರಮವಹಿಸಬೇಕೆಂದು ರಾಜು ಅವರು ತಾಲೂಕು ಕಚೇರಿಗೆ ಮನವಿ ಸಲ್ಲಿಸಿದ್ದಾರೆ.

ಬೆಟ್ಟದಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಗೊಳಪಡುವ ಕುಡಿಗಾಣ ಗ್ರಾಮದಲ್ಲಿ ಕಳೆದ 24 ಗಂಟೆಗಳಲ್ಲಿ 11 ಇಂಚು ಮಳೆಯಾಗಿದೆ. ಕೊತ್ನಳ್ಳಿಯಲ್ಲಿ 11.45 ಇಂಚು, ಹೆಗ್ಗಡಮನೆಗೆ 8.35 ಇಂಚು, ಪುಷ್ಪಗಿರಿಗೆ 8.33 ಇಂಚು ಮಳೆಯಾಗಿದ್ದು, ಕೊತ್ನಳ್ಳಿಯಿಂದ ಕುಡಿಗಾಣ ಸಂಪರ್ಕಿಸುವ ಸೇತುವೆಯ ಮೇಲೆ ನೀರು ಹರಿಯುತ್ತಿದೆ ಎಂದು ಸ್ಥಳೀಯ ನಿವಾಸಿ ಸುದಿನ್ ತಿಳಿಸಿದ್ದಾರೆ.

ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಬಾಣಾವರ ರಸ್ತೆ ನಿವಾಸಿ ಸವಿತ ನಂದೀಶ್ ಅವರ ಮನೆಯ ಬರೆ ಕುಸಿದಿದ್ದು, ಬೃಹತ್ ಗಾತ್ರದ ಬಂಡೆ ಕಲ್ಲು ಕೆಳಗೆ ಜಾರಿದೆ. ಕೆಳಭಾಗದಲ್ಲಿರುವ ದಾಕ್ಷಾಯಿಣಿ ಅವರ ಮನೆ ಅಪಾಯದಿಂದ ಪಾರಾಗಿದ್ದು, ಹೀಗೆ ಮಳೆಯಾದರೆ ಮುಂದೆಯೂ ಕಲ್ಲುಬಂಡೆ ಕುಸಿದು ಮನೆಗೆ ಹಾನಿಯಾಗುವ ಸಂಭವವಿದೆ. ಕಾಜೂರು ಗ್ರಾಮದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದಿದ್ದು, ರಸ್ತೆ ಬದಿಯಲ್ಲಿ ನಿಲುಗಡೆಯಾಗಿದ್ದ ರತೀಶ್ ಅವರಿಗೆ ಸೇರಿದ ಐಸ್‍ಕ್ರೀಂ ಸರಬರಾಜು ಮಾಡುವ ವಾಹನಕ್ಕೆ ಹಾನಿಯಾಗಿದೆ.

ಗಾಳಿಗೆ ಅಲ್ಲಲ್ಲಿ ಮರಗಳು ವಿದ್ಯುತ್ ತಂತಿಯ ಮೇಲೆ ಬೀಳುತ್ತಿದ್ದು, ಸೆಸ್ಕ್ ಇಲಾಖಾ ಸಿಬ್ಬಂದಿಗಳು ಸಮರೋಪಾದಿ ನಿರ್ವಹಣಾ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ. ಕುಶಾಲನಗರದಿಂದ ಸೋಮವಾರಪೇಟೆಗೆ ಸರಬರಾಜಾಗುವ ವಿದ್ಯುತ್ ಲೈನ್, ಅರಣ್ಯ ಪ್ರದೇಶದೊಳಗೆ ಹಾದು ಬಂದಿರುವದರಿಂದ ಅಲ್ಲಲ್ಲಿ ಮರಗಳು ತಂತಿಯ ಮೇಲೆ ಬೀಳುತ್ತಿವೆ. ಪರಿಣಾಮ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಸೋಮವಾರಪೇಟೆ ಕಸಬಾ ವ್ಯಾಪ್ತಿಯಲ್ಲಿ 119.4 ಮಿ.ಮೀ., ಶಾಂತಳ್ಳಿಗೆ 220 ಮಿ.ಮೀ., ಕುಶಾಲನಗರಕ್ಕೆ 29.2 ಮಿ.ಮೀ, ಸುಂಟಿಕೊಪ್ಪಕ್ಕೆ 55.3 ಮಿ.ಮೀ., ಶನಿವಾರಸಂತೆಗೆ 117 ಮಿ.ಮೀ., ಕೊಡ್ಲಿಪೇಟೆಗೆ 150.2 ಮಿ.ಮೀ. ಮಳೆಯಾದ ಬಗ್ಗೆ ವರದಿಯಾಗಿದೆ.

ಕುಶಾಲನಗರ : ಕುಶಾಲನಗರ ಪಟ್ಟಣ ಮತ್ತು ಸುತ್ತಮುತ್ತಲ ವ್ಯಾಪ್ತಿಯಲ್ಲಿ ಕಾವೇರಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದ್ದು ನದಿ ತಟದ ಬಡಾವಣೆಗಳ ನಾಗರಿಕರು ಸ್ಥಳಾಂತರಗೊಳ್ಳಲು ಸಿದ್ಧತೆ ನಡೆಸಿದ್ದಾರೆ. ಕುಶಾಲನಗರ ಪಟ್ಟಣದ ಸಾಯಿ, ಕುವೆಂಪು, ಬಸಪ್ಪ ಸೇರಿದಂತೆ ಪಟ್ಟಣದ 10 ಕ್ಕೂ ಅಧಿಕ ಬಡಾವಣೆಗಳಿಗೆ ನದಿ ಪ್ರವಾಹ ಉಂಟಾಗುವ ಸಾಧ್ಯತೆಯಿದ್ದು ಈ ಹಿನ್ನಲೆಯಲ್ಲಿ 500 ಕ್ಕೂ ಅಧಿಕ ಮನೆಗಳನ್ನು ತೆರವುಗೊಳಿಸಲು ನಾಗರಿಕರು ಸ್ವಯಂ ಸಿದ್ದತೆ ನಡೆಸುತ್ತಿದ್ದ ದೃಶ್ಯ ಕಂಡುಬಂತು.

ಕಾವೇರಿ ನದಿ ಪಾತ್ರದಲ್ಲಿ ಸತತ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಕುಶಾಲನಗರ ಮೂಲಕ ಹರಿಯುವ ನದಿ ಅಕ್ಕಪಕ್ಕದ ಹೊಲ ಗದ್ದೆಗಳಿಗೆ ಮತ್ತು ಬಡಾವಣೆಗಳಿಗೆ ನುಗ್ಗುತ್ತಿದ್ದು ಈ ಸಂಬಂಧ ಈಗಾಗಲೆ ಪಟ್ಟಣ ಮತ್ತು ಗ್ರಾಮಪಂಚಾಯ್ತಿ ಮೂಲಕ ತಗ್ಗು ಪ್ರದೇಶದ ಜನರಿಗೆ ತೆರವುಗೊಂಡು ಬೇರೆಡೆಗೆ ಸ್ಥಳಾಂತರಗೊಳ್ಳಲು ನೋಟೀಸ್ ನೀಡಲಾಗಿದೆ. ಈ ನಡುವೆ ಹಾರಂಗಿ ಜಲಾಶಯದಿಂದ ನಿರಂತರವಾಗಿ ನದಿಗೆ ಹೆಚ್ಚುವರಿ ನೀರನ್ನು ಹರಿಸಲು ಎಂ.ಪಿ. ಅಪ್ಪಚ್ಚುರಂಜನ್ ಅಧಿಕಾರಿಗಳಿಗೆ ಸೂಚಿಸಿದ್ದು ಯಾವುದೇ ರೀತಿಯ ಸಮಸ್ಯೆ ಉಂಟಾಗದಂತೆ ಮುನ್ನೆಚ್ಚರಿಕೆ ವಹಿಸುವಂತೆ ತಿಳಿಸಿದ್ದಾರೆ.

ಹುಣಸೂರು ಉಪವಿಭಾಗಾಧಿಕಾರಿ ವೀಣಾ, ಪಿರಿಯಾಪಟ್ಟಣ ತಹಶೀಲ್ದಾರ್ ಶ್ವೇತ, ಕಾವೇರಿ ನೀರಾವರಿ ನಿಗಮದ ಅಧಿಕಾರಿ ಅನಂತಪ್ರಸಾದ್, ಕಂದಾಯಾಧಿಕಾರಿಗಳು ಕೊಪ್ಪ ಸೇತುವೆ ಬಳಿ ನದಿ ಪ್ರವಾಹದ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.

ವರದಿ : ವಿಜಯ್ ಹಾನಗಲ್, ಚಂದ್ರಮೋಹನ್