ಗೋಣಿಕೊಪ್ಪಲು, ಆ. 4: ವೀರಾಜಪೇಟೆ ತಾಲೂಕಿನ 1795 ಜೇನು ಕುರುಬ ಕುಟುಂಬಗಳಿಗೆ ತಾಲ್ಲೂಕು ಐಟಿಡಿಪಿ ಇಲಾಖೆ ಮೂಲಕ ಆಹಾರ ಪದಾರ್ಥಗಳ ಕಿಟ್ ವಿತರಣೆ ಮಾಡಲಾಯಿತು. ಶಾಸಕ ಕೆ.ಜಿ. ಬೋಪಯ್ಯ ಆರು ಮಂದಿ ಫಲಾನುಭವಿಗಳಿಗೆ ಸಾಂಕೇತಿಕವಾಗಿ ಕಿಟ್ ವಿತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಕೊರೊನಾ ಸೋಂಕು ಮತ್ತು ಮಳೆಗಾಲದ ಸಂದರ್ಭದಲ್ಲಿ ಕೂಲಿಕಾರ್ಮಿಕ ಬುಡಕಟ್ಟು ಜನರು ಸಂಕಷ್ಟಕ್ಕೆ ಒಳಗಾಗಲಿದ್ದಾರೆ ಇದನ್ನು ಅರಿತುಕೊಂಡು ಸರಕಾರÀ ಐಟಿಡಿಪಿ ಇಲಾಖೆ ಮೂಲಕ ಆಹಾರ ಪದಾರ್ಥಗಳನ್ನು ವಿತರಿಸುತ್ತಿದೆ. ಪೌಷ್ಟಿಕತೆಯಿಂದ ಕೂಡಿರುವ ಆಹಾರ ಪದಾರ್ಥಗಳನ್ನು ಸರಿಯಾಗಿ ಬಳಸಿಕೊಳ್ಳಬೇಕು. ಇದರಿಂದ ಹಸಿವು ನೀಗಿ ಆರೋಗ್ಯ ಉತ್ತಮವಾಗಲಿದೆ ಎಂದು ತಿಳಿಸಿದರು.

ತಾಲೂಕು ಐಟಿಡಿಪಿ ಅಧಿಕಾರಿ ಗುರುಶಾಂತಪ್ಪ ಮಾತನಾಡಿ ಜೇನುಕುರುಬ ಜನಾಂಗದ ಪ್ರತಿ ಕುಟುಂಬಕ್ಕೆ ತಿಂಗಳಿಗೆ ಕಡಲೆಕಾಳು, ಕಡಲೆಬೀಜ, ಹಲಸಂದೆ, ಹೆಸರು ಕಾಳು, ಸಕ್ಕರೆ ಬೆಲ್ಲ, 30 ಕೋಳಿ ಮೊಟ್ಟೆ, 2 ಲೀಟರ್ ಅಡುಗೆ ಎಣ್ಣೆ, ಅರ್ಧ ಕಿಲೋ ನಂದಿನಿ ತುಪ್ಪ ನೀಡಲಾಗುತ್ತಿದೆ ಎಂದರು. ಜಿಲ್ಲಾ ಐಟಿಡಿಪಿ ಅಧಿಕಾರಿ ಶಿವಕುಮಾರ್ ಇದ್ದರು.