*ಗೋಣಿಕೊಪ್ಪಲು, ಆ. 4 : ತಿತಿಮತಿ ಗ್ರಾಮ ಪಂಚಾಯಿತಿ ವತಿಯಿಂದ ಉದ್ಯೋಗಖಾತ್ರಿ ಯೋಜನೆಯಲ್ಲಿ ಭಾರೀ ಅವ್ಯವಹಾರ ನಡೆದಿದ್ದು ಲಕ್ಷಗಟ್ಟಲೆ ಹಣ ದುರುಪಯೋಗವಾಗಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಯಬೇಕು ಎಂದು ಜಿಲ್ಲಾ ಪಂಚಾಯಿತಿ ಸದಸ್ಯೆ ಪಿ.ಆರ್.ಪಂಕಜಾ ಒತ್ತಾಯಿಸಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡುವ ಅವರು ತಿತಿಮತಿ ಜುಮ್ಮಾ ಮಸೀದಿ ಮುಂಭಾಗದ ಪೈಸಾರಿ ಕೆರೆಯನ್ನು 2018-19ನೇ ಸಾಲಿನ ಜಿಲ್ಲಾ ಪಂಚಾಯಿತಿ ಅನುದಾನ ರೂ 2ಲಕ್ಷ ವೆಚ್ಚದಲ್ಲಿ ಹೂಳೆತ್ತುವ ಕಾಮಗಾರಿ ಕೈಗೊಳ್ಳಲಾಗಿತ್ತು. ಇದೇ ಕೆರೆಯ ಹೂಳೆತ್ತುವ ಕಾಮಗಾರಿಗೆ ಸ್ಥಳೀಯ ಗ್ರಾಮ ಪಂಚಾಯಿತಿ ಉದ್ಯೋಗ ಖಾತ್ರಿ ಯೋಜನೆಯಲ್ಲಿ ಇದೀಗ ಮತ್ತೆ ರೂ.2.14 ವೆಚ್ಚಮಾಡಿದೆ. ಕಾಮಗಾರಿ ಮೊದಲು ಎಷ್ಟು ನಡೆದಿತ್ತೋ ಅಷ್ಟೇ ಪ್ರಮಾಣದಲ್ಲಿದೆ.ಯಾವುದೇ ಹೆಚ್ಚಿನ ಕಾಮಗಾರಿ ನಡೆಸದೆ ಕೇವಲ ಬಿಲ್ ಮಾಡಿ ಹಣ ದುರುಪಯೋಗವಾಗಿರುವುದು ಸ್ಟಷ್ಟವಾಗಿ ಗೋಚರಿಸಿದೆ. ಈ ಬಗ್ಗೆ ಕಳೆದ ಗುರುವಾರ ನಡೆದ ಜಿಲ್ಲಾ ಪಂಚಾಯಿತಿ ಸಭೆಯಲ್ಲಿಯೂ ಪ್ರಸ್ತಾಪಿಸಲಾಗಿದೆ. ಜಿಲ್ಲಾ ಪಂಚಾಯಿತಿ ಸಿಇಒ ಅವರು ಕೂಡಲೇ ಇತ್ತ ಗಮನಹರಿಸಿ ಸೂಕ್ತ ತನಿಖೆ ನಡೆಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.