ಪ್ರಪ್ರಥಮ ಮೊಬೈಲ್ ಕೋವಿಡ್ ಲ್ಯಾಬ್
ಬೆಂಗಳೂರು, ಆ. 5: ಬೆಂಗಳೂರಿನ ಪ್ರತಿಷ್ಠಿತ ಐಐಎಸ್ಸಿ ಸಂಸ್ಥೆ ಅಭಿವೃದ್ಧಿಪಡಿಸಿರುವ ದೇಶದ ಪ್ರಪ್ರಥಮ ಮತ್ತು ಏಕೈಕ ಐಸಿಎಂಆರ್ ಅನುಮೋದಿತ ಮೊಬೈಲ್ ಆರ್ ಟಿ-ಪಿಸಿಆರ್ ಕೋವಿಡ್ ಪರೀಕ್ಷಾ ಲ್ಯಾಬ್ಗೆ ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ. ಸುಧಾಕರ್ ಅವರು ಐಐಎಸ್ ಕ್ಯಾಂಪಸ್ನಲ್ಲಿ ಚಾಲನೆ ನೀಡಿದರು. ಈ ಲ್ಯಾಬ್ ಅನ್ನು ರಾಜೀವ್ ಗಾಂಧಿ ಆರೋಗ್ಯ ವಿವಿಗೆ ಹಸ್ತಾಂತರಿಸಿದರು. ಇದು ಬಯೋ ಸುರಕ್ಷತೆ ಪ್ರಮಾಣೀಕರಣ ಹೊಂದಿರುವ ಅತ್ಯಂತ ಸುಸಜ್ಜಿತ ಮೊಬೈಲ್ ಕೋವಿಡ್ ಪರೀಕ್ಷಾ ಲ್ಯಾಬ್ ಆಗಿದ್ದು ಕೇವಲ 4 ಗಂಟೆಗಳಲ್ಲಿ ಪರೀಕ್ಷಾ ವರದಿ ಪಡೆಯಬಹುದಾಗಿದೆ. ದಿನಕ್ಕೆ ಸುಮಾರು 400 ಪರೀಕ್ಷೆ ನಡೆಸುವ ಸಾಮಥ್ರ್ಯ ಹೊಂದಿರುವ ಈ ಲ್ಯಾಬ್ ಕಂಟೈನ್ಮೆಂಟ್ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯ ಪರೀಕ್ಷೆ ನಡೆಸಲು ಬಳಸಬಹುದಾಗಿದೆ. ಐಐಎಸ್ ಸಿ ನಿರ್ದೇಶಕರು, ರಾಜೀವ್ ಗಾಂಧಿ ವಿವಿ ಉಪಕುಲಪತಿಗಳಾದ ಡಾ.ಸಚ್ಚಿದಾನಂದ ಅವರು ಉಪಸ್ಥಿತರಿದ್ದರು.
ಗಡಿಯಲ್ಲಿ ಮಹಿಳಾ ಸೈನಿಕರ ನಿಯೋಜನೆ
ಶ್ರೀನಗರ, ಆ. 5: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಇದೇ ಮೊದಲ ಬಾರಿಗೆ ಗಡಿ ಕಾಯಲು ಭಾರತದ ವೀರ ಮಹಿಳಾ ಸೈನಿಕರನ್ನು ನಿಯೋಜಿಸಲಾಗಿದೆ ಎಂದು ಅಸ್ಸಾಂ ರೈಫಲ್ಸ್ ಟ್ವೀಟ್ ಮಾಡಿದೆ.
ಗಾಯಕ ಎಸ್ಪಿಬಿಗೆ ಕೋವಿಡ್ ದೃಢ
ಚೆನ್ನೈ, ಆ. 5: ಖ್ಯಾತ ಹಿನ್ನೆಲೆ ಗಾಯಕ ಎಸ್.ಪಿ. ಬಾಲಸುಬ್ರಮಣ್ಯಂ ಅವರು ಕೊರೊನಾ ಸೋಂಕು ತುತ್ತಾಗಿದ್ದಾರೆ. ಕೊರೊನಾ ಮಹಾಮಾರಿಗೆ ತುತ್ತಾಗಿರುವ ಕುರಿತು ಬಾಲಸುಬ್ರಮಣ್ಯಂ ಅವರು ವೀಡಿಯೋ ಮೂಲಕ ತಿಳಿಸಿದ್ದಾರೆ. ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಮಾಜಿ ಸಿಎಂ ಶಿವರಾಜ್ ಪಾಟೀಲ್ ನಿಧನ
ಪುಣೆ, ಆ. 5: ಕಾಂಗ್ರೆಸ್ ಹಿರಿಯ ನಾಯಕ ಹಾಗೂ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಶಿವಾಜಿರಾವ್ ಪಾಟೀಲ್ ನೀಲಂಗೆಕರ್ ಬುಧವಾರ ಬೆಳಿಗ್ಗೆ ನಿಧನರಾಗಿದ್ದಾರೆ. 89 ವರ್ಷದ ಶಿವಾಜಿರಾವ್ ಪಾಟೀಲ್ ಕೊರೊನಾ ವೈರಸ್ಗೆ ತುತ್ತಾಗಿದ್ದರು. ಆದರೆ, ಅದರಿಂದ ಸಂಪೂರ್ಣವಾಗಿ ಗುಣಮುಖರಾಗಿದ್ದರು ಎಂದು ಕುಟುಂಬದವರು ತಿಳಿಸಿದ್ದಾರೆ. ಕಳೆದ ತಿಂಗಳು ಮಾಜಿ ಸಿಎಂಗೆ ಕೋವಿಡ್ ತಗುಲಿತ್ತು. ಬಳಿಕ ಅವರನ್ನು ಖಾಸಗಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ನೀಡಲಾಗಿತ್ತು. ನಾಲ್ಕು ದಿನಗಳ ಹಿಂದೆಯಷ್ಟೇ ಕೋವಿಡ್ ನೆಗೆಟಿವ್ ಬಂದಿತ್ತು. ನೀಲಂಗೆಕರ್ ಅವರು ಕಿಡ್ನಿ ಸಂಬಂಧಿತ ಕಾಯಿಲೆಯಿಂದ ಮೃತಪಟ್ಟಿದ್ದಾರೆ ಎಂದು ಕುಟುಂಬದ ಆಪ್ತರು ಹೇಳಿದ್ದಾರೆ. ಮರಾಠವಾಡ ಪ್ರದೇಶದ ಲಾತೂರ್ನ ಹಿರಿಯ ಕಾಂಗ್ರೆಸ್ ನಾಯಕರಾದ ಶಿವಾಜಿರಾವ್ ಪಾಟೀಲ್ ನೀಲಂಗೇಕರ್ ಅವರು ಜೂನ್ 1985 ರಿಂದ ಮಾರ್ಚ್ 1986 ರವರೆಗೆ ಮಹಾರಾಷ್ಟ್ರದ ಮುಖ್ಯಮಂತ್ರಿಯಾಗಿದ್ದರು.
ಪಾಕ್ನಿಂದ ಹೊಸ ನಕ್ಷೆ ಬಿಡುಗಡೆ
ಇಸ್ಲಾಮಾಬಾದ್, ಆ. 5: ಭಾರತವನ್ನು ಮತ್ತೆ ಪಾಕಿಸ್ತಾನ ಕೆಣಕಿದ್ದು, ಭಾರತದ ಭೂ ಪ್ರದೇಶವನ್ನೊಳಗೊಂಡ ಹೊಸ ಪಾಕಿಸ್ತಾನ ನಕ್ಷೆ ಪಾಕ್ ಪ್ರಧಾ&divound; ಇಮ್ರಾನ್ ಖಾನ್ ಬಿಡುಗಡೆ ಮಾಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ಮತ್ತು ಗುಜರಾತ್ನ ಕೆಲವು ಭಾಗಗಳು ತನ್ನ ಪ್ರದೇಶದ ಭಾಗವೆಂದು ಹೇಳಿಕೊಂಡ ಪಾಕಿಸ್ತಾನ ಹೊಸ ರಾಜಕೀಯ ನಕ್ಷೆ ಬಿಡುಗಡೆ ಮಾಡಿದೆ. ನೇಪಾಳದಂತೆಯೇ, ಪಾಕಿಸ್ತಾನವೂ ಕೂಡ ತನ್ನ ನೂತನ ರಾಜಕೀಯ ನಕ್ಷೆಯನ್ನು ಬಿಡುಗಡೆಗೊಳಿಸಿ, ಜಮ್ಮು ಮತ್ತು ಕಾಶ್ಮೀರ, ಲಡಾಖ್ ಮತ್ತು ಗುಜರಾತ್ನ ಜುನಾಗಢ ಅನ್ನು ತನ್ನ ನೂತನ ನಕ್ಷೆಯಲ್ಲಿ ಸೇರಿದೆ. ಇಮ್ರಾನ್ ಖಾನ್ ನೇತೃತ್ವದ ಸರ್ಕಾರ ಮಂಗಳವಾರ ದೇಶದ ಹೊಸ ರಾಜಕೀಯ ನಕ್ಷೆಯನ್ನು ಪ್ರಕಟಿಸಿದೆ. ಕಳೆದ ವರ್ಷ ಭಾರತ ಸರ್ಕಾರವು ಜಮ್ಮು ಮತ್ತು ಕಾಶ್ಮೀರದಿಂದ 370ನೇ ವಿಧಿಯನ್ನು ತೆಗೆದುಹಾಕಿದ ಮೊದಲ ವಾರ್ಷಿಕೋತ್ಸವದ ಮುನ್ನಾ ದಿನದಂದು ಪಾಕಿಸ್ತಾನ ಸರ್ಕಾರ ಈ ಕ್ರಮ ಕೈಗೊಂಡಿದೆ. ಪಾಕಿಸ್ತಾನ ತನ್ನ ನಕ್ಷೆಯಲ್ಲಿ ಈ ಪ್ರದೇಶಗಳನ್ನು ತೋರಿಸುತ್ತಿರುವುದು ಇದೇ ಮೊದಲು. ಈ ಬಗ್ಗೆ ಪಾಕಿಸ್ತಾನ ಡಾನ್ ಪತ್ರಿಕೆ ವರದಿ ಮಾಡಿದ್ದು, ಹೊಸ ನಕ್ಷೆಗೆ ಇಮ್ರಾನ್ ಖಾನ್ ಸರ್ಕಾರ ಸಂಪುಟ ಅನುಮೋದನೆ ನೀಡಿದೆ ಎನ್ನಲಾಗಿದೆ.