ವೀರಾಜಪೇಟೆ, ಆ. 5: ವೀರಾಜಪೇಟೆಯ ಮಲಬಾರ್ ರಸ್ತೆಯಲ್ಲಿರುವ ಬಿಸ್ಮಿಲ್ಲಾ ಶಾವಲಿ ಮಕಾನ್ ಆಡಳಿತ ಮಂಡಳಿಗೆ ಸೇರಿದ ಮುಖ್ಯರಸ್ತೆಯಲ್ಲಿರುವ ಹಳೆ ಕಟ್ಟಡವನ್ನು ಕೆಡವಿ ಅದರ ಹಿಂಭಾಗದಲ್ಲಿ ಅನಧಿಕೃತವಾಗಿ ನಾಲ್ಕು ಮಳಿಗೆಗಳುಳ್ಳ ವಾಣಿಜ್ಯ ಕಟ್ಟಡ ಕಟ್ಟಿರುವುದಕ್ಕೆ ಸಂಬಂಧಿಸಿದಂತೆ ವೀರಾಜಪೇಟೆಯ ಸಿವಿಲ್ ಜಡ್ಜ್ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ, ಕೊಡಗು ಜಿಲ್ಲಾಧಿಕಾರಿ, ವೀರಾಜಪೇಟೆ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿ, ಮುಖ್ಯಾಧಿಕಾರಿ, ಶಾವಲಿ ಮಕಾನ್ ಸಂಸ್ಥೆಯ ಆಡಳಿತ ಮಂಡಳಿಯ ಅಧ್ಯಕ್ಷರು, ಕಾರ್ಯದರ್ಶಿ ಹಾಗೂ ಕಟ್ಟಡದ ಗುತ್ತಿಗೆದಾರ ಸೇರಿ ಒಟ್ಟು ಏಳು ಮಂದಿಗೆ ತಾ. 10 ರಂದು ನ್ಯಾಯಾಲಯದ ಮುಂದೆ ಹಾಜರಾಗುವಂತೆ ನೋಟೀಸ್ ಜಾರಿ ಮಾಡಿದೆ.

ವೀರಾಜಪೇಟೆಯ ಮಲಬಾರ್ ರಸ್ತೆಯಲ್ಲಿರುವ ಮುಸ್ಲಿಂ ಸಮುದಾಯದ ಖಬರಸ್ಥಾನಕ್ಕೆ ಹೋಗುವ ರಸ್ತೆಗೆ ಒತ್ತಾಗಿರುವ ಬಿಸ್ಮಿಲ್ಲಾ ಶಾವಲಿ ಮಕಾನ್ ಸಂಸ್ಥೆಗೆ ಸೇರಿದ ಜಾಗದಲ್ಲಿ ಪಟ್ಟಣ ಪಂಚಾಯಿತಿಯ ಯಾವುದೇ ಅನುಮತಿ ಇಲ್ಲದೆ ಹಳೆ ಕಟ್ಟಡವನ್ನು ಕೆಡವಿ ಅನಧಿಕೃತವಾಗಿ ಹೊಸ ವಾಣಿಜ್ಯ ಕಟ್ಟಡವನ್ನು ಕಾನೂನು ಉಲ್ಲಂಘಿಸಿ ನಿರ್ಮಿಸಲಾಗಿದೆ. ದೂರುದಾರರಾದ ನಾವುಗಳು ಮೂರು ಮಂದಿ ಪ.ಪಂ.ಗೆ ದೂರು ನೀಡಿದರೂ ಯಾವುದೇ ಕ್ರಮಕೈಗೊಳ್ಳದೆ ಇರುವುದರಿಂದ ಈ ದೂರಿನ ಪ್ರಕರಣವನ್ನು ವಿಚಾರಣೆಗೆ ಅಂಗೀಕರಿಸಿ ಏಳು ಮಂದಿಯನ್ನು ವಿಚಾರಣೆಗೊಳಪಡಿಸಿ ಕ್ರಮ ಕೈಗೊಳ್ಳಬೇಕೆಂದು ವೀರಾಜಪೇಟೆಯ ಎಂ.ಬಿ. ಮುಕ್ತಾರ್, ಎಂ.ಇ. ತಬ್ರೀಜ್ ಹಾಗೂ ಎಂ.ಬಿ. ಇರ್ಷಾದ್ ಇವರುಗಳು ಇಲ್ಲಿನ ಸಮುಚ್ಚಯ ನ್ಯಾಯಾಲಯ ಸಿವಿಲ್ ಜಡ್ಜ್ ಮತ್ತು ಜೆ.ಎಂ.ಎಫ್.ಸಿ ನ್ಯಾಯಾಲಯದ ಮುಂದೆ ದೂರು ಸಲ್ಲಿಸಿದ್ದು, ನ್ಯಾಯಾಲಯ ಈ ದೂರನ್ನು ವಿಚಾರಣೆಗಾಗಿ ಅಂಗೀಕರಿಸಿದೆ. ಅರ್ಜಿದಾರರ ಪರ ವಕೀಲೆ ಸಿ.ಪಿ. ವಿದ್ಯಾ ವಕಾಲತು ವಹಿಸಿದ್ದರು.

ತಡೆಯಾಜ್ಞೆ: ವೀರಾಜಪೇಟೆ ಸುಣ್ಣದ ಬೀದಿಯ ನಿವಾಸಿ ಎಂ.ಕೆ. ತಾಹೀರ್ ಎಂಬವರು ಮುಸ್ಲೀಂ ಸಮುದಾಯ ಬಾಂಧವರ ಶವ ಸಂಸ್ಕಾರದ ಸೌಲಭ್ಯಕ್ಕಾಗಿ ಮೀಸಲಿರಿಸಿದ್ದ ಸ್ಮಶಾನದ ಜಾಗವನ್ನು ಬಳಸಿ ವಾಣಿಜ್ಯ ಸಂಕೀರ್ಣವನ್ನು ಕಾನೂನುಬಾಹಿರವಾಗಿ ನಿರ್ಮಿಸಿರುವ ಬಿಸ್ಮಿಲ್ಲಾ ಶಾವಲಿ ಮಕಾನ್ ಸಮಿತಿ ವಾಣಿಜ್ಯ ಕಟ್ಟಡದ ಕಾಮಗಾರಿ ಮುಂದುವರೆಸದಂತೆ ತಡೆಯಾಜ್ಞೆ ನೀಡಬೇಕೆಂದು ಸಲ್ಲಿಸಿದ ಅರ್ಜಿಗೆ ನ್ಯಾಯಾಲಯ ಮಧ್ಯಂತರ ತಾತ್ಕಾಲಿಕ ತಡೆಯಾಜ್ಞೆ ನೀಡಿ ವಿಚಾರಣೆಯನ್ನು ತಾ. 28ಕ್ಕೆ ಮುಂದೂಡಿದೆ. ಅರ್ಜಿದಾರರ ಪರ ವಿ.ಜಿ. ರಾಕೇಶ್ ವಾದಿಸಿದರು.