ಸೋಮವಾರಪೇಟೆ,ಆ.3: ಮುಖ್ಯಮಂತ್ರಿಗಳ ಮಧ್ಯಮ ಮತ್ತು ಸಣ್ಣ ಪಟ್ಟಣಗಳ ಅಭಿವೃದ್ಧಿ ಯೋಜನೆಯಡಿ ರೂ.1.25 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸೋಮವಾರಪೇಟೆಯ ಹೈಟೆಕ್ ಮಾರುಕಟ್ಟೆ, ಮಳೆಗೆ ಸೋರುತ್ತಿದೆ.
ಮಾರುಕಟ್ಟೆಯ ಛಾವಣಿಗೆ ಅಳವಡಿಸಿರುವ ಶೀಟ್‍ಗಳು ತುಕ್ಕು ಹಿಡಿದು ಗುಂಡಿಗಳು ನಿರ್ಮಾಣವಾಗಿದ್ದು, ಮಳೆಯ ನೀರು ನೇರವಾಗಿ ಮಾರುಕಟ್ಟೆಯೊಳಗೆ ಬೀಳುತ್ತಿದೆ. ಕೆಲ ವರ್ತಕರು ತಾವು ವ್ಯಾಪಾರ ಮಾಡುವ ಜಾಗದಲ್ಲಿ ಟಾರ್ಪಲ್‍ಗಳನ್ನು ಕಟ್ಟಿಕೊಂಡಿದ್ದರೆ, ಉಳಿದವರು ಮಳೆ ನೀರಿನಲ್ಲೇ ವ್ಯಾಪಾರ ವಹಿವಾಟು ನಡೆಸುತ್ತಿದ್ದಾರೆ.
ಹೈಟೆಕ್ ಮಾರುಕಟ್ಟೆ ನಿರ್ಮಾಣ ಮಾಡುವ ಸಂದರ್ಭವೇ ಸ್ಥಳೀಯ ಹವಾಮಾನಕ್ಕೆ ಅನುಗುಣವಾಗಿ ನಿರ್ಮಿಸುವಂತೆ ಸಲಹೆಗಳು ಕೇಳಿಬಂದಿದ್ದರೂ ಅಂದಿನ ಆಡಳಿತ ಮಂಡಳಿಯ ನಿರ್ಲಕ್ಷ್ಯದಿಂದಾಗಿ ಈಗಿನ ಮಾರುಕಟ್ಟೆ ನಿರ್ಮಾಣ ವಾಗಿದ್ದು, ಪ್ರತೀ ಮಳೆಗಾಲದಲ್ಲೂ ಛಾವಣಿ ಸೋರುವಿಕೆ ಮಾಮೂಲಿಯಂತಾಗಿದೆ.
ಕಳೆದ ವರ್ಷದವರೆಗೂ ಮಳೆಗಾಲಕ್ಕೂ ಮುನ್ನ ಛಾವಣಿಯ ನೀರು ಹರಿಯುವ ದೋಣಿಯನ್ನು ದುರಸ್ತಿ ಮಾಡಲಾಗುತ್ತಿತ್ತು. ಆದರೆ ಪ್ರಸಕ್ತ ವರ್ಷ ಪಟ್ಟಣ ಪಂಚಾಯಿತಿಯವರು ದುರಸ್ತಿ ಕಾರ್ಯಕ್ಕೆ ಮುಂದಾಗದೇ ಇರುವದರಿಂದ ಹೈಟೆಕ್ ಮಾರುಕಟ್ಟೆಯ ಹತ್ತಾರು ಕಡೆಗಳಲ್ಲಿ ನೀರು ಸೋರಿಕೆಯಾಗುತ್ತಿದೆ.
ಮಾರುಕಟ್ಟೆಯ ಕೆಲ ತ್ಯಾಜ್ಯಗಳನ್ನು ಪಕ್ಷಿಗಳು, ಹೆಗ್ಗಣ, ಇಲಿಗಳು ಛಾವಣಿಯ ಮೇಲ್ಭಾಗಕ್ಕೆ ಕೊಂಡೊಯ್ಯುತ್ತಿದ್ದು, ಅಲ್ಲಲ್ಲಿ ಶೇಖರಿಸಿಡುತ್ತಿರುವದರಿಂದ, ತ್ಯಾಜ್ಯ ಕರಗಿ ಛಾವಣಿ ಗೀರಲು ಹಿಡಿಯುತ್ತಿದೆ. ಹೀಗೆ ತುಕ್ಕು ಹಿಡಿದ ಸ್ಥಳಗಳಿಂದ ಮಳೆ ನೀರು ಯಥೇಚ್ಛವಾಗಿ ಒಳಗೆ ಸುರಿಯುತ್ತಿದ್ದು, ಇಡೀ ಮಾರುಕಟ್ಟೆ ಆವರಣ ಕೊಳಚೆಯ ಕೂಪವಾಗಿದೆ.
ಇದರೊಂದಿಗೆ ಸಿ.ಕೆ. ಸುಬ್ಬಯ್ಯ ರಸ್ತೆಯಿಂದ ಮಾರುಕಟ್ಟೆಗೆ ಪ್ರವೇಶ ಕಲ್ಪಿಸುವ ಸ್ಥಳದಲ್ಲಿ ಅಗತ್ಯ ಚರಂಡಿ ನಿರ್ಮಾಣವಾಗದೇ ಇರುವದರಿಂದ ಕೊಳಚೆ ನೀರು ನೇರವಾಗಿ ಮಾರುಕಟ್ಟೆಯ ಪ್ರಾಂಗಣದೊಳಗೆ ಶೇಖರಣೆಯಾಗುತ್ತಿದೆ.
ತಕ್ಷಣ ಸೋಮವಾರಪೇಟೆಯ ಪಟ್ಟಣ ಪಂಚಾಯಿತಿಯವರು ಛಾವಣಿಯ ದುರಸ್ತಿಗೆ ಮುಂದಾಗುವ ಮೂಲಕ ‘ಹೈಟೆಕ್ ಮಾರುಕಟ್ಟೆ’ ಎಂಬ ಹೆಸರನ್ನು ಉಳಿಸಿ ಕೊಳ್ಳಬೇಕೆಂದು ಸಾರ್ವಜನಿಕರು ಅಭಿಪ್ರಾಯಿಸಿದ್ದಾರೆ.