ಕೂಡಿಗೆ, ಆ 3: ಕೂಡಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಹಂದಿ ತಳಿ ಸಂವರ್ಧನಾ ಕೇಂದ್ರ ವನ್ನು ಮೇಲ್ದರ್ಜೆಗೆ ಏರಿಸುವ ಸಲುವಾಗಿ ಇಲಾಖೆಯ ವತಿಯಿಂದ 80 ಲಕ್ಷ ರೂ. ವೆಚ್ಚದ ಕಾಮಗಾರಿಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ.

ಕೂಡಿಗೆಯಲ್ಲಿ ಕೊಡಗು ಸರಕಾರ ಪ್ರಾರಂಭದಿಂದ ಇಂದಿನವರೆಗೆ ಹಳೆಯ ಪದ್ಧತಿಯಲ್ಲಿ ಹಂದಿಗಳನ್ನು ಸಾಗುವುದು ಮರಿ ಮಾಡಿಸುವುದು ಅಲ್ಲದೆ ಸರಕಾರ ನೀಡುವ ಸೌಕರ್ಯಗಳ ಆಧಾರದ ಮೇಲೆ ಹಂದಿಗಳನ್ನು ಸಾಕಾಣಿಕೆ ಮಾಡಿ ನಿಗದಿ ಮಾಡಿದ ದರದಲ್ಲಿ ರೈತರಿಗೆ ನೀಡಲಾಗುತ್ತಿದೆ.

ಬೇರೆ ಕೇಂದ್ರಗಳಲ್ಲಿ ಅಧುನಿಕ ವ್ಯವಸ್ಥೆ ಮಾಡಿರುವ ಹಿನ್ನೆಲೆಯಲ್ಲಿ ಕೂಡಿಗೆಯಲ್ಲಿರುವ ಎರಡು ಎಕರೆ ಪ್ರದೇಶದಲ್ಲಿ ಸುಸಜ್ಜಿತವಾದ ಆಧುನಿಕ ತಂತ್ರಜ್ಞಾನ ಬಳಸಿ ಯಂತ್ರಗಳ ಮೂಲಕ ಆಹಾರ ಮತ್ತು ನೀರು ಸರಬರಾಜು ಮಾಡುವುದು ಅಲ್ಲದೆ ಶುಚಿತ್ವದ ಕಡೆಗೆ ಹೆಚ್ಚು ಗಮನ ಹರಿಸಲಾಗುತ್ತಿದೆ.ಈ ಅಧುನಿಕ ಸುಧಾರಣೆಯಲ್ಲಿ ಕೇಂದ್ರದಲ್ಲಿ 20 ಹಂದಿಗಳಿಗೆ ದಿನಕ್ಕೆ ಬೇಕಾಗುವ ಆಹಾರ ಮತ್ತು ಇತರೆ ವಸ್ತುಗಳನ್ನು ಏಕ ಕಾಲದಲ್ಲಿ ಯಂತ್ರಕ್ಕೆ ಹಾಕುವುದು. ಆ ಯಂತ್ರವು ದಿನದ 24 ಗಂಟೆಗಳಲ್ಲಿ ಒಂದು ಹಂದಿಗೆ ಎಷ್ಟು ಪ್ರಮಾಣದ ಅಹಾರ ಬೇಕಾಗುವುದು ಅದರ ಅಳತೆಯಲ್ಲಿ ಅಧುನಿಕ ಯಂತ್ರದ ಮೂಲಕ ಸುಧಾರಣೆ ವ್ಯವಸ್ಥೆಗಳನ್ನು ಮಾಡಲಾಗುವುದು ಎಂದು ಕೇಂದ್ರದ ವ್ಯೆದ್ಯಾಧಿಕಾರಿ ಡಾ. ಅರ್ ಸಿಂಧೆ ತಿಳಿಸಿದ್ದಾರೆ.

ಈ ಕೇಂದ್ರದಲ್ಲಿ ಸರಕಾರದ ವಾರ್ಷಿಕ ಅನುದಾನ ಆಧಾರದ ಮೇಲೆ ರೈತರ ಹಂದಿ ಮರಿಗಳ ಬೇಡಿಕೆಯ ಅನುಗುಣವಾಗಿ ಈಗಿರುವ ಹತ್ತು ಹಂದಿ ಮರಿಗಳ ಸಾಕಾಣಿಕೆ ಮನೆಗಳಲ್ಲಿ ಹಂದಿ ಸಾಕುವುದು ಮತ್ತು ಮರಿಗಳನ್ನು ಮಾಡಿಸುವುದು ಮುಂದುವರಿದಿದೆ.

ಕೂಡಿಗೆ ಹಂದಿ ತಳಿ ಸಂವರ್ಧನಾ ಕೇಂದ್ರಕ್ಕೆ ರಾಜ್ಯ ಮಟ್ಟದ ಇಲಾಖೆಯ ಅಧಿಕಾರಿಗಳ ತಂಡ ಭೇಟಿ ನೀಡಿ ಪರಿಶೀಲನೆ ನಡೆಸಿ ಅನುದಾನ ನೀಡುವ ಭರವಸೆ ನೀಡಿದ್ದಾರೆ. ಅದರಂತೆ ಜಿಲ್ಲೆಯ ಹಂದಿ ತಳಿ ಸಂವರ್ಧನಾ ಕೇಂದ್ರದ ಮೂಲಕ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ತಿಳಿದುಬಂದಿದೆ. ಈ ಕೇಂದ್ರದಲ್ಲಿ 103 ಹೆಣ್ಣು ಹಂದಿ ಮತ್ತು 10 ಗಂಡು ಮರಿಗಳು ಇವೆ ಇವುಗಳಲ್ಲಿ 50 ಹಂದಿಗಳು ಮರಿಗಳನ್ನು ಹಾಕಿವೆ.

ಅದರಂತೆ ರೈತರಿಗೆ ಅನುಕೂಲ ಕಲ್ಪಿಸುವ ಹಿತದೃಷ್ಟಿಯಿಂದ 502 ಮಂದಿ ಮಹಿಳೆ ಮತ್ತು ಪುರುಷರಿಗೆ ತರಬೇತಿಯನ್ನು ನೀಡಲಾಗಿದೆ. ಸರಕಾರ ನಿಗದಿ ಮಾಡಿರುವ ದರದಲ್ಲಿ ಹಂದಿ ಮರಿಗಳನ್ನು 3,000 ರೂ.ನಂತೆ ಮಾರಾಟ ಮಾಡಲಾಗುತ್ತಿದೆ.

ಕೃತಕ ಗರ್ಭಧಾರಣೆ

ರಾಜ್ಯದಲ್ಲಿ ಪ್ರಥಮವಾಗಿ ಹಂದಿಗಳಿಗೆ ಕೃತಕ ಗರ್ಭಧಾರಣೆ ಕೂಡಿಗೆಯಲ್ಲಿ ನಡೆದಿದೆ. ಇದುವರೆಗೆ ಹಸುಗಳಿಗೆ ಕೃತಕ ಗರ್ಭಧಾರಣೆ ಮಾಡಿರುವ ಉದಾಹರಣೆಗಳು ಇವೆ ಹಸುಗಳ ಸುರಕ್ಷಿತವಾಗಿ ಇದ್ದು ರೈತರಿಗೆ ಹಾಲನ್ನು ನೀಡುತ್ತಿವೆ .ಕೆನಡದಿಂದ ವಿರ್ಯಾಣುಗಳನ್ನು ತರಿಸಿ ಕೂಡಿಗೆಯಲ್ಲಿರುವ 10 ಹಂದಿಗಳಿಗೆ ಪ್ರಯೋಗಿಸಲಾಗಿತ್ತು. ಅದ್ದರಿಂದ ಹತ್ತು ಹಂದಿಗಳು ಗರ್ಭಧಾರಣೆ ಧರಿಸಿ ನಂತರ ನಿಯಮಿತ ಕಾಲದ ಒಳಗೆ ಮರಿಗಳನ್ನು ಹಾಕಿವೆ. ಇದೀಗ ಕೂಡಿಗೆ ಕೇಂದ್ರದಲ್ಲಿ ಹತ್ತು ಹಂದಿಗಳು 80 ಮರಿಗಳನ್ನು ಹಾಕಿವೆ. ಈ ಮರಿಗಳನ್ನು ಮಾರಾಟ ಮಾಡದೆ ರಾಜ್ಯದ ಇತರೆ ಹಂದಿ ತಳಿ ಸಂವರ್ಧನಾ ಕೇಂದ್ರಕ್ಕೆ ಸರಬರಾಜು ಮಾಡಲು ಕ್ರಮ ಕೈಗೊಳ್ಳಲಾಗಿದೆ.

-ಕೆ.ಕೆ. ನಾಗರಾಜಶೆಟ್ಟಿ